Advertisement

ಆಳುಪೋತ್ಸವ ಕಂಡ ಬಾರಕೂರು ಕೋಟೆ ಮತ್ತೆ ಕೊಂಪೆ..!

09:59 PM Jan 26, 2020 | Sriram |

ಬ್ರಹ್ಮಾವರ: ಕಳೆದ ವರ್ಷ ಜನವರಿಯಲ್ಲಿ ಅದ್ಧೂರಿ ಆಳುಪೋತ್ಸವ ಕಂಡ ಬಾರಕೂರು ಕೋಟೆ ಮತ್ತೆ ಹಾಳು ಕೊಂಪೆಯಾಗಿ ಮಾರ್ಪಾಡಾಗಿದೆ.

Advertisement

ಹತ್ತು ಹಲವು ವೈಶಿಷ್ಟ್ಯತೆ, ಆಕರ್ಷಣೆಗಳಿರುವ ಬಾರಕೂರು ಪಾರಂಪರಿಕ ನಗರಿಯಾಗಿ ಗುರುತಿಸಿಕೊಳ್ಳುವ ಅರ್ಹತೆ ಹೊಂದಿದ್ದು, ಆದರೆ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ.

ಉತ್ಸವಕ್ಕೆ ಸೀಮಿತ
ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬಾರಕೂರಿನಲ್ಲಿ ಆಳುಪೋತ್ಸವ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಗತ ವೈಭವ ಕಂಡ ಬಾರಕೂರಿನ ಪುನರುಜ್ಜೀವನಕ್ಕೆ ಇದು ಚಾಲನೆಯಂತಿತ್ತು. ಆದರೆ. ಇದು ಉತ್ಸವಕ್ಕೆ ಮಾತ್ರ ಸೀಮಿತವಾಗಿದೆ.

ವೈಶಿಷ್ಟ್ಯಗಳು
ಬಾರಕೂರು ಐತಿಹಾಸಿಕ, ಚಾರಿತ್ರಿಕ ಹಿನ್ನೆಲೆ ಇರುವ ಊರು. 365 ದೇವಸ್ಥಾನ, ಹತ್ತು ಕೇರಿ, ಬೃಹತ್‌ ಕೆರೆ ಹಾಗೂ ಮದಗಗಳನ್ನು ಹೊಂದಿದೆ. ಕೋಟೆ, ಸಿಂಹಾಸನಗುಡ್ಡೆ, ಕತ್ತಲೆ ಬಸದಿ ಆಕರ್ಷಣೀಯ ಸ್ಥಳಗಳಾಗಿವೆ.

ಮಾಹಿತಿ ಅಗತ್ಯ
ಬಾರಕೂರಿನ ಪ್ರೇಕ್ಷಣೀಯ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಜತೆಗೆ ಪ್ರವಾಸಿಗರಿಗೆ ಮಾಹಿತಿ ನೀಡುವ ಅಗತ್ಯವಿದೆ. ಈ ಕುರಿತು ಫಲಕಗಳು, ಹಿನ್ನಲೆ ಒಳಗೊಂಡ ಬರಹ, ಮಾರ್ಗಸೂಚಿ ಅನಿವಾರ್ಯ. ಐತಿಹಾಸಿಕ ಸ್ಥಳಗಳ ಮಾಹಿತಿ ನೀಡುವ ಓರ್ವ ನುರಿತ ಗೈಡ್‌ ನೇಮಕವಾಗಬೇಕಿದೆ.

Advertisement

ವಿಸ್ತರಣೆ ಅಗತ್ಯ
ಪ್ರವಾಸೋದ್ಯಮ ಇಲಾಖೆಯಿಂದ ಹೆರಿಟೇಜ್‌ ವಾಕ್‌(ಪಾರಂಪರಿಕ ನಡಿಗೆ) ವಿಶಿಷ್ಟ ಯೋಜನೆ ಜಾರಿಗೊಳಿಸಲಾಗಿತ್ತು. ಪ್ರಮುಖ 17 ಕೇಂದ್ರಗಳನ್ನು ಗುರುತಿಸಿ ಪ್ರವಾಸಿಗರಿಗೆ ಅಲ್ಲಿನ ಮಾಹಿತಿ ಒದಗಿಸುವ ಆ್ಯಪ್‌ ರಚನೆಗೊಂಡಿತ್ತು. ಈ ತಂತ್ರಾಂಶವನ್ನು ಮೇಲ್ದರ್ಜೆಗೇರಿಸಿ, ಇನ್ನಷ್ಟು ಕೇಂದ್ರಗಳನ್ನು ಸೇರಿಸುವ ಅಗತ್ಯವಿದೆ.

ಪ್ರಸ್ತಾವನೆ ಸಲ್ಲಿಸಿದ್ದೇವೆ
ಬಾರಕೂರನ್ನು ಕೋಸ್ಟಲ್‌ ಮಾಸ್ಟರ್‌ ಯೋಜನೆಯಡಿ ಗುರುತಿಸಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಆಯ್ಕೆಯಾದಲ್ಲಿ ಸಮಗ್ರ ಅಭಿವೃದ್ಧಿಯ ವಿಸ್ತೃತ ಯೋಜನಾ ವರದಿ ರಚಿಸಿ ಕಾರ್ಯರೂಪಗೊಳಿಸಲಾಗುತ್ತದೆ ಎಂದು ಉಡುಪಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್‌ ಅವರು ಹೇಳಿದರು.

ವಸ್ತು ಸಂಗ್ರಹಾಲಯ ಅಗತ್ಯ
ದೇವಸ್ಥಾನ, ಬೀಚ್‌ ಪ್ರವಾಸೋದ್ಯಮದ ಜತೆಗೆ ಐತಿಹಾಸಿಕ ಪ್ರವಾಸೋದ್ಯಮ ಬೆಳೆಯಬೇಕು. ಬಾರಕೂರಿನ ಶಾಸನಗಳ ರಕ್ಷಣೆಗಾಗಿ ವಸ್ತು ಸಂಗ್ರಹಾಲಯ ಅತೀ ಅವಶ್ಯ. ಯುವ ಪೀಳಿಗೆಗೆ ಭವ್ಯ ಇತಿಹಾಸ ತಿಳಿಸುವ ಅಗತ್ಯವಿದೆ ಎಂದು ನಿವೃತ್ತ ಪ್ರಾಂಶುಪಾಲ, ಇತಿಹಾಸ ಸಂಶೋಧಕರಾದ ಡಾ| ಜಗದೀಶ ಶೆಟ್ಟಿ ಅವರು ಹೇಳಿದರು.

ಮೂಲಭೂತ ವ್ಯವಸ್ಥೆ ಕಲ್ಪಿಸಿ
ಕಲೆ, ಸಂಸ್ಕೃತಿಯ ಉಳಿವಿಗೆ ಪ್ರತಿವರ್ಷ ಉತ್ಸವ ಅಗತ್ಯ. ಇದರ ಪೂರಕವಾಗಿ ರಸ್ತೆ ಅಭಿವೃದ್ಧಿ, ಒಳಚರಂಡಿ, ವಿದ್ಯುದೀಕರಣ, ಶೌಚಾಲಯ ಇತ್ಯಾದಿ ವ್ಯವಸ್ಥೆಗಳೂ ಆಗಬೇಕು ಎಂದು ಬಾರಕೂರು ಶ್ರೀ ಮಾಸ್ತಿ ಅಮ್ಮನವರ ದೇಗುಲದ ಅರ್ಚಕರಾದ ಅನಂತಪದ್ಮನಾಭ ಭಟ್‌ ಅವರು ಹೇಳಿದರು.

ಆಗಬೇಕಿರುವುದು
ಬಾರಕೂರು ಪೇಟೆಯಲ್ಲಿ ಮುಖ್ಯವಾಗಿ ಒಳಚರಂಡಿ, ತ್ಯಾಜ್ಯ ವಿಲೇವಾರಿ, ರಸ್ತೆ ವಿಸ್ತರಣೆ, ಬೀದಿ ದೀಪ, ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಾಗಿದೆ. ಶೌಚಾಲಯ ಅತ್ಯಂತ ದುಸ್ಥಿತಿಯಲ್ಲಿದೆ.

ಬಾರಕೂರಿನ 365 ದೇವಸ್ಥಾನಗಳಲ್ಲಿ ಇಂದು ಬಹಳಷ್ಟು ದೇವಸ್ಥಾನಗಳು ನಶಿಸಿ ಹೋಗಿವೆ. ಇವುಗಳ ವಿವರಗಳನ್ನು ಕ್ರೋಡೀಕರಿಸುವ ಕೆಲಸ ಧಾರ್ಮಿಕ ದತ್ತಿ ಇಲಾಖೆಯಿಂದ ಆಗಬೇಕಾಗಿದೆ. ಇಲ್ಲಿನ ಐತಿಹಾಸಿಕ ಸ್ಥಳಗಳು, ಶಿಲಾ ಶಾಸನ, ಕೆರೆಗಳ ಅಭಿವೃದ್ಧಿಯೂ ಆವಶ್ಯಕ .

Advertisement

Udayavani is now on Telegram. Click here to join our channel and stay updated with the latest news.

Next