ಮಳೆಯ ನೀರನ್ನು ಯಥೇಷ್ಟ ಕುಡಿದ ಇಳೆ, ತನ್ನ ಮೇಲ್ಭಾಗದ ಪದರಲ್ಲಿ ಹಸುರಿನ ಹಾಸುಗೆ ಹರಿಸಿ ವಿಧವಿಧ ಪುಷ್ಪದ ಚಿತ್ತಾರ ಬೆಳಗಿಸಿ ಇದೀಗ ಪ್ರಕೃತಿಗೆ ನವ ತರುಣಿಯ ಶೃಂಗಾರ ಮೂಡಿಸಿದ್ದಾಳೆ. ಕೈತೋಟದ ಗಿಡಗಳಿಗೆ ಪರಿಚಾರಿ ಕೆಯ ಅಧ್ವಾನದಿಂದ ಸೌಂದರ್ಯ ಮೂಡಿ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಆದರೆ ಯಾವುದೇ ತರದ ಮಾನವ ಪ್ರಯತ್ನವಿಲ್ಲದೆ ಪ್ರಕೃತಿಯ ಸಮ್ಮಿಲನ ಭೂಮಿಯಲ್ಲಿ ಮೂಡಿಸುವ ಹಸುರಿನ ಪುಷ್ಪರಾಣಿ ಅದೊಂದು ಅದ್ಭುತವೇ ಸರಿ. ಇದು ಕಣ್ಮನ ತಣಿಸುವ ಪ್ರಕೃತಿಯ ಸೃಷ್ಟಿ.
ಇಂತಹ ಮನೋಹರ ಸೃಷ್ಟಿಯ ಚಿತ್ರಣ ನಗರದ ಬೀರಂತಬೈಲು ನಿವಾಸಿ ಕೃಷ್ಣಾನಂದ ಶೆಣೈ ಅವರ ಮನೆ ಹಿತ್ತಿಲಲ್ಲಿ ಮೂಡಿಬಂದಿದೆ. ಹಿತ್ತಲಲ್ಲಿ ಅಲ್ಲಲ್ಲಿ ರಾಶಿ ರಾಶಿ ನೀಲ ಹೂಗಳ ಆಕರ್ಷಕ ದೃಶ್ಯ. ಹಸುರು ಗಿಡಗಳ ತುದಿಯಲ್ಲಿ ಎದ್ದು ಕಾಣುವ ಈ ಹೂ “ಕಾಗೆ ಕಣ್ಣು’ ಹೂ ಎಂದು ಹೇಳುತ್ತಾರೆ. ಮಲಯಾಳಂನಲ್ಲಿ ಇದು “ಕಾಕ’ ಪೂ. ಇದರ ವರ್ಣನೆ ಅನೇಕ ಮಲಯಾಳಂ ಗೀತೆಗಳಲ್ಲಿ ಮೂಡಿಬಂದಿದೆ. ಕಾಗೆ ಕಣ್ಣಿನ ಹೂ ಬೆಳೆದ ಗಿಡಗಳದ್ದೇ ರಾಶಿ ರಾಶಿ ಇವರ ಹಿತ್ತಿಲಲ್ಲಿ ಎದ್ದು ಕಾಣುತ್ತಿದೆ. ಸುಮಾರು ಒಂದು ಅಡಿ ಎತ್ತರದ ಗಿಡ, ಬಲಿತ ಗಿಡಗಳ ಮೇಲ್ಭಾಗದಲ್ಲಿ ನಾಲ್ಕೈದು ಹೂಗಳು. ಇವು ಒತ್ತೂತ್ತಾಗಿದ್ದು ನೋಡಲು ಹಿತ್ತಿಲು ಪೂರ್ತಿ ಹಸುರು ನೀಲ ವರ್ಣದ ಹಾಸುಗೆ ಹಾಸಿದ ಹಾಗೂ ತೋರುತ್ತದೆ.
ಇನ್ನೊಂದು ಆಶ್ಚರ್ಯವೆಂದರೆ ಈ ರೀತಿಯ ಹೂಗಳ ರಾಶಿ ಕೃಷ್ಣಾನಂದ ಶೆಣೈ ಅವರ ಹಿತ್ತಿಲಲ್ಲಿ ಈ ಹಿಂದೆ ಎಂದೂ ಆಗಿಲ್ಲವಂತೆ. ಪ್ರತೀ ವರ್ಷ ಆಳೆತ್ತರ ಬೆಳೆಯುವ ಕಳೆ ಗಿಡಗಳದ್ದೇ ಇಲ್ಲಿ ಕಾರುಬಾರು. ಈ ವರ್ಷ ಮಾತ್ರ ಮಳೆಗಾಲಕ್ಕೆ ಚಿಗುರಿದ ಕಾಗೆ ಕಣ್ಣು ಗಿಡ ಇತರ ಹೆಚ್ಚಿನ ಕಳೆ ಗಿಡಗಳನ್ನು ಬೆಳೆಯಲೂ ಬಿಡಲಿಲ್ಲ. ಹೀಗಾಗಿ ಹಿತ್ತಿಲಿಗೆ ಕೈ ತೋಟದ ಚೆಲುವು ಬಂದಿದೆ. ಅಂತು ಈ ಹೂ ಕೊಯ್ಯುವ ಅಗತ್ಯವಿರದ ಕಾರಣಕ್ಕೆ ಅವು ಗಿಡದಲ್ಲೇ ಬಾಡಿ ಅದರ ಬುಡದಲ್ಲೇ ಇರುವ ಬೀಜ ಒಣಗಿ ಮಣ್ಣಲ್ಲೇ ಬಿದ್ದು ಮುಂದಿನ ವರ್ಷದ ಮಳೆಗೆ ಮತ್ತೆ ಚಿಗುರಿ ಇಳೆಗೆ ಸೌಂದರ್ಯ ಮೂಡಿಸಲಿದೆ ಅನ್ನುವುದೇ ಸಮಾಧಾನ.
ಜಗತ್ತು ದೇವರ ಸೃಷ್ಟಿಯ ಸುಂದರ ಆಲಯ. ಆತನ ಕಲ್ಪನೆ ಸೃಷ್ಟಿಯ ವೈವಿಧ್ಯತೆ ರಮಣೀಯ. ಈ ವೈವಿಧ್ಯಮಯ ಸೃಷ್ಟಿಯಲ್ಲಿ ಅತ್ಯಂತ ಸುಂದರ, ಸುಕೋಮಲ ವಾದದ್ದು, ಮನಸ್ಸಿಗೆ ಮುದ ನೀಡಿ ಕಣ್ಮನ ತಣಿಸುವ ಸೃಷ್ಟಿಯೆಂದರೆ ಒಂದು ವಿಧವಿಧ ಪುಷ್ಪರಾಶಿ ಮತ್ತೂಂದು ರಂಗುರಂಗಿನ ಪಕ್ಷಿ ಸಂಕುಲ. ಈ ಎರಡೂ ಜೀವಿಯ ಸೃಷ್ಟಿಯಲ್ಲಿ ಭಗವಂತನ ಜಾಣ್ಮೆ ಬಣ್ಣಗಳ ವಿನ್ಯಾಸ, ಸೌಂದರ್ಯ ಪ್ರಜ್ಞೆ, ಹೃದಯದ ಮೃದು – ಮಧುರ ಭಾವನೆಗಳು ಮೇಳೈಸಿವೆ. ಇಂತಹ ಪ್ರಕೃತಿದತ್ತ ಸೌಂದರ್ಯದ ಸೃಷ್ಟಿಯಲ್ಲಿ ಅಗೋಚರ ಶಕ್ತಿಯ ಕೈವಾಡವಂತು ಇದೆ ಅನ್ನುವುದು ಅನುಭವಿಸಿದವನು ತಿಳಿಯುತ್ತಾನೆ.
ಕಾಸರಗೋಡು ಸಮೀಪದ ಮಾಡಯಿಪಾರ ಅನ್ನುವ ಪ್ರದೇಶದಲ್ಲಿ ಮಳೆಗಾಲದಲ್ಲಿ ಬೆಳೆಯುವ ಅಪಾರ ಗಿಡಗಳಲ್ಲಿ ಹೆಚ್ಚಿನವುಗಳು “ಕಾಗೆ ಕಣ್ಣು’ ಹೂ ಗಿಡ ಮತ್ತು ತುಂಬೆ ಗಿಡಗಳಂತೆ ಈ ಪ್ರದೇಶದಲ್ಲಿ ಸುಮಾರು 500 ಕ್ಕೂ ಮಿಕ್ಕಿ ಅಪೂರ್ವ ಗಿಡ ಮೂಲಿಕೆ ಈ ವೇಳೆ ಬೆಳೆಯುತ್ತಿದ್ದು ಅನೇಕ ವಿಶ್ವವಿದ್ಯಾಲಯಗಳ ತಂಡ ಇಲ್ಲಿಗೆ ಆಗಸ್ಟ್-ಸೆಪ್ಟಂಬರ್ ತಿಂಗಳಲ್ಲಿ ಭೇಟಿ ನೀಡಿ ಇದರ ಅಧ್ಯಯನ ನಡೆಸುತ್ತಿದೆ. ಇದರಲ್ಲಿ ಕಾಗೆ ಕಣ್ಣು ಹೂ ಮತ್ತು ತುಂಬೆ ಗಿಡಗಳ ಕುರಿತಾಗಿ ಹೆಚ್ಚಿನ ಅಧ್ಯಯನ ನಡೆಸಿದ ಮಾಹಿತಿ ದೊರೆಯುತ್ತಿದೆ.
ಕಾಗೆ ಕಣ್ಣು ಗಿಡದ ಶಾಸ್ತಿÅàಯ ನಾಮ ಜೆನಸ್ ಯುಟ್ರಿಕುಲೇರಿಯಾ. ಸಸ್ಯ ವರ್ಗದಲ್ಲಿ ಇದು ಬ್ಲಾಡರ್‌ವರ್ಟ್ ಕುಟುಂಬಕ್ಕೆ ಸೇರಿಸಲಾಗಿದೆ. ತೇವಾಂಶದ ಮಣ್ಣಿನಲ್ಲಿ ಬೆಳೆಯುವ ಸಸ್ಯವಿದು. ಭಾರತ ಇದರ ತವರು. ಅಂಟಾರ್ಟಿಕಾ ಮತ್ತು ಸಮುದ್ರ ಮಧ್ಯದ ದ್ವೀಪ ಹೊರತು ಪಡಿಸಿ ಈ ಸಸ್ಯ ವಿಶ್ವದ ಎಲ್ಲೆಡೆ ಬೆಳೆಯುತ್ತಿದೆ. ಇದರಲ್ಲಿ ಸುಮಾರು 233 ತಳಿಗಳು ಇವೆ ಎಂದೂ ಅಧ್ಯಯನ ವರದಿ ತಿಳಿಸುತ್ತದೆ. ಸಾಮಾನ್ಯ ಮಳೆಗಾಲದ ಕೊನೆ ವರೆಗೆ ಇದು ಬೆಳೆಯುತ್ತಿದ್ದು, ಇದೀಗ ಇವು ವಿನಾಶದ ಅಂಚಿನಲ್ಲಿವೆ ಎಂದೂ ಸೂಚಿಸಲಾಗಿದೆ. ನಗರೀಕರಣ, ಪ್ರವಾಸೀ ಅಭಿವೃದ್ಧಿ ಅನ್ನುವ ಹೆಸರಲ್ಲಿ ಉಂಟಾಗಿರುವ ಕಾಂಕ್ರಿಟೀಕರಣ ಇದರ ನಾಶಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಓಣಂ ಹಬ್ಬದ ದಿನಗಳಲ್ಲಿ ಹೂ ರಂಗೋಲಿ ಬಿಡಿಸಲು ಅನೇಕ ಮಕ್ಕಳು ಈ ಹೂ ಕೊಯ್ಯಲು ಹಿತ್ತಿಲಿಗೆ ಬಂದಿದ್ದರು. ಅಂತು ಈ ಹೂ ಮಾವೇಲಿಯ ಸ್ವಾಗತಕ್ಕೆ ಉಪಯೋಗವಾಯಿತು. ಅದೇ ತರ ಶ್ರಾವಣ ಮಾಸದ ಚೂಡಿ ಪೂಜೆಯ ಚುಡಿಕಟ್ಟಲೂ ಈ ಕಾಗೆ ಕಣ್ಣು ಹೂವು ಬಳಕೆಯಾಯಿತು. ಅಂತು ಬರಿ ಹಸಿರು ಬರಿ ಹೂವು, ಎದೆಯಲ್ಲೆಷ್ಟೋ ಹೆಸರು. ಅಂದಿದ್ದಾರೆ ಎಚ್.ಎಸ್.ವೆಂಕಟೇಶ್‌ಮೂರ್ತಿ. ಅಂತೆಯೇ ಮೆರೆದರೆ ಸುಂದರಿಯರ ಮುಡಿಯಲ್ಲಿ, ಅಳಿದರೆ ತಾಯಿ ಗಿಡದ ಅಡಿಯಲ್ಲಿ ಎಂದು ಭತೃìಹರಿಯ ಸುಭಾಷಿತವೂ ತಿಳಿಸಿದೆ. ಹೂವಿನ ಮಹಿಮೆ ಅಪಾರ. ಅದು ನೀಡುವ ಆಹ್ಲಾದ ಬಣ್ಣಿಸಲಾಗದ ಉತ್ಸಾಹ.
– ರಾಮದಾಸ್ ಕಾಸರಗೋಡು