Advertisement

ಕೋರ್ಟ್ ಆವರಣದಲ್ಲೇ ಬಿಜೆಪಿ ಶಾಸಕನ ಪುತ್ರಿ ಸಾಕ್ಷಿ ಮಿಶ್ರಾ ಪತಿ ಮೇಲೆ ಹಲ್ಲೆ

09:43 AM Jul 16, 2019 | Nagendra Trasi |

ನವದೆಹಲಿ:ಉತ್ತರಪ್ರದೇಶದ ಬರೇಲಿ ಕ್ಷೇತ್ರದ ಶಾಸಕ ರಾಜೇಶ್ ಮಿಶ್ರಾ ಪುತ್ರಿ ಸಾಕ್ಷಿ ಹಾಗೂ ಪತಿ ಅಜಿತೇಶ್ ಸೋಮವಾರ ಅಲಹಾಬಾದ್ ಹೈಕೋರ್ಟ್ ಗೆ ಆಗಮಿಸುವ ವೇಳೆ ಅಪರಿಚಿತ ವ್ಯಕ್ತಿಗಳು ಥಳಿಸಿರುವ ಘಟನೆ ನಡೆದಿದೆ.

Advertisement

ವರದಿಯ ಪ್ರಕಾರ, ಪೊಲೀಸರ ರಕ್ಷಣೆಯಲ್ಲಿ ಸಾಕ್ಷಿ ಮತ್ತು ಅಜಿತೇಶ್ ಆಗಮಿಸುತ್ತಿದ್ದ ಸಂದರ್ಭದಲ್ಲಿ ಕೋರ್ಟ್ ಆವರಣದಲ್ಲಿಯೇ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರಿಗೂ ಜೀವ ಬೆದರಿಕೆ ಇದ್ದಿದ್ದು, ಇನ್ನಷ್ಟು ಹೆಚ್ಚಿನ ರಕ್ಷಣೆಯ ಅಗತ್ಯತೆ ಇದೆ ಎಂದು ವಕೀಲರಾದ ಎಸ್ ಎನ್ ನಸೀಮ್ ಕೋರ್ಟ್ ಹೊರಗೆ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.

ಘಟನೆ ಕುರಿತು ವಕೀಲರು ನ್ಯಾಯಾಧೀಶರ ಗಮನಸೆಳೆದಿದ್ದು, ಸಾಕ್ಷಿ ಮತ್ತು ಅಜಿತೇಶ್ ಪ್ರಯಾಣ ಬೆಳೆಸುವ ವೇಳೆ ಬಿಗಿ ಭದ್ರತೆ ನೀಡಬೇಕೆಂದು ಪ್ರಯಾಗ್ ರಾಜ್ ಪೊಲೀಸ್ ವರಿಷ್ಠಾಧಿಕಾರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.

ಇದಕ್ಕೂ ಮುನ್ನ ಸಾಕ್ಷಿ ಮಿಶ್ರಾ ಹಾಗೂ ಅಜಿತೇಶ್ ಅವರನ್ನು ಕೋರ್ಟ್ ಆವರಣದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಅಪಹರಣ ಮಾಡಿದ್ದಾರೆಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಬಳಿಕ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿ, ಮಿಶ್ರಾ ದಂಪತಿಯನ್ನು ಯಾರೂ ಅಪಹರಿಸಿಲ್ಲ, ಅಜಿತೇಶ್ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದರು ಎಂದು ತಿಳಿಸಿದ್ದರು.

ಜುಲೈ 4ರಂದು ಶಾಸಕ ರಾಜೇಶ್ ಮಿಶ್ರಾ ಪುತ್ರಿ ಸಾಕ್ಷಿ ಮಿಶ್ರಾ(23ವರ್ಷ) 29 ವರ್ಷದ ಅಜಿತೇಶ್ ಕುಮಾರ್ ಎಂಬವರನ್ನು ದೇವಸ್ಥಾನದಲ್ಲಿ ವಿವಾಹವಾಗಿದ್ದರು. ನಂತರ ದಲಿತ ಯುವಕನ್ನು ವಿವಾಹವಾದ ಕಾರಣಕ್ಕೆ ನಮ್ಮನ್ನು ಕೊಲ್ಲಲು ನನ್ನ ತಂದೆಯೇ(ರಾಜೇಶ್ ಮಿಶ್ರಾ) ಗೂಂಡಾಗಳನ್ನು ಕಳುಹಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾಕ್ಷಿ ವೀಡಿಯೋ ಪೋಸ್ಟ್ ಮಾಡಿದ್ದರು. ಈ ವೀಡಿಯೋ ಭಾರೀ ವೈರಲ್ ಆಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next