ಬಾರಾಮುಲ್ಲಾ : ಭದ್ರತಾ ಪಡೆಗಳಿಗೆ ದೊರಕಿರುವ ಅತ್ಯದ್ಭುತ ವಿಜಯ ಎನ್ನುವುದಕ್ಕೆ ಸಾಕ್ಷಿಯಾಗಿ ಜಮ್ಮು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ (DGP) ದಿಲ್‌ಬಾಗ್ ಸಿಂಗ್ ಅವರು ಹಿಂದೊಮ್ಮೆ ಉಗ್ರರ ಭದ್ರಕೋಟೆ ಎನಿಸಿಕೊಂಡಿದ್ದ ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯನ್ನು ಉಗ್ರ ಮುಕ್ತ ಜಿಲ್ಲೆ ಎಂದು ಇಂದು ಗುರುವಾರ ಘೋಷಿಸಿದ್ದಾರೆ.
ಬಾರಾಮುಲ್ಲಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಲಷ್ಕರ್ ಎ ತಯ್ಯಬ ಸಂಘಟನೆಯ ಮೂವರು ಉಗ್ರರನ್ನು ಹತ್ಯೆಗೈದ ಮರು ದಿನವೇ ಸಿಂಗ್ ಅವರು ಈ ಘೋಷಣೆ ಮಾಡಿರುವುದು ಗಮನಾರ್ಹವಾಗಿದೆ.
”ಬಾರಾಮುಲ್ಲಾ ಜಿಲ್ಲೆಯಲ್ಲಿ ನಿನ್ನೆ ಮೂವರು ಲಷ್ಕರ್ ಉಗ್ರರು ಹತ್ಯೆಯಾಗುವುದರೊಂದಿಗೆ ಈ ಜಿಲ್ಲೆ ಈಗ ಉಗ್ರ ಮುಕ್ತವಾಗಿದೆ; ಜತೆಗೆ ಉಗ್ರ ಮುಕ್ತವಾಗಿರುವ ಜಮ್ಮು ಕಾಶ್ಮೀರದ ಮೊತ್ತ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಾರಾಮುಲ್ಲಾದಲ್ಲೀಗ ಯಾವುದೇ ಉಗ್ರ ಬದುಕುಳಿದಿಲ್ಲ” ಎಂದು ಸಿಂಗ್ ಹೇಳಿರುವುದನ್ನು ಉಲ್ಲೇಖೀಸಿ ಎಎನ್‌ಐ ವರದಿ ಮಾಡಿದೆ.
ನಿನ್ನೆ ಬಾರಾಮುಲ್ಲಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳಿಂದ ಹತರಾದ ಮೂವರು ಲಷ್ಕರ್ ಉಗ್ರರನ್ನು ಸುಹೇಬ್ ಫಾರೂಕ್ ಅಖನೂನ್, ಮೊಹ್ಸಿನ್ ಮುಷ್ತಾಕ್ ಭಟ್ ಮತ್ತು ನಸೀರ್ ಅಹ್ಮದ್ ದರ್ಜಿ ಎಂದು ಗುರುತಿಸಲಾಗಿದೆ. ಇವರನ್ನು ಬಾರಾಮುಲ್ಲಾ ಜಿಲ್ಲೆಯ ಬಿನ್ನೇರ್ ಎಂಬಲ್ಲಿ ಭದ್ರತಾ ಪಡೆಗಳು ಹತ್ಯೆಗೈದಿದ್ದವು.
ಜಮ್ಮು ಕಾಶ್ಮೀರದ 22 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ 2018ರಲ್ಲಿ ನಡೆಸಲಾಗಿದ್ದ ಎನ್‌ಕೌಂಟರ್‌ಗಳಲ್ಲಿ ಒಟ್ಟು 256 ಉಗ್ರರನ್ನು ಹತ್ಯೆಗೈಯಲಾಗಿದೆ. ಇವರಲ್ಲಿ ಗರಿಷ್ಠ 127 ಉಗ್ರರನ್ನು ದಕ್ಷಿಣ ಕಾಶ್ಮೀರದಲ್ಲೇ ಹತ್ಯೆಗೈಯಲಾಗಿತ್ತು. ಕಳೆದ ವರ್ಷ ಜಮ್ಮು ಭಾಗದಲ್ಲಿ ಹತರಾದ ಉಗ್ರರ ಸಂಖ್ಯೆ ಒಂಬತ್ತು ಎಂದು ಮೂಲಗಳು ತಿಳಿಸಿವೆ.
ಕಾಶ್ಮೀರ ಕಣಿವೆಯಲ್ಲಿ ಉಗ್ರರ ಕೇಂದ್ರವಾಗಿರುವ ಶೋಪಿಯಾನ್ ನಲ್ಲಿ 43 ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಸಿಂಗ್ ಹೇಳಿದರು.