ಎಚ್.ಬಿ. ನಿರಂಜನ ಮೂರ್ತಿ
ಭರಮಸಾಗರ: ನೀರಿಲ್ಲದೆ ಕೊಳವೆಬಾವಿಗಳಲ್ಲಿನ ಪಂಪ್‌ಸೆಟ್‌ಗಳನ್ನು ಮೇಲೆತ್ತಿ ಸಾಕಪ್ಪ ಕೊಳವೆ ಬಾವಿಗಳ ಸಹವಾಸ ಎಂದು ರೈತರು ಬೇಸತ್ತಿದ್ದರು. ಇದೀಗ ಕಳೆದ ಎರಡು ತಿಂಗಳ ಹಿಂದಿನ ಮಳೆಯಿಂದಾಗಿ ಅಂತರ್ಜಲ ಮಟ್ಟ ವೃದ್ಧಿಯಾಗಿದೆ. ಕೊಳವೆಬಾವಿಗಳಲ್ಲಿ ನೀರು ಹೆಚ್ಚಿದೆಯೋ ಇಲ್ಲವೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಕೃಷಿಕರು ಸಿಸಿ ಕ್ಯಾಮೆರಾ ಮೊರೆ ಹೋಗಿದ್ದಾರೆ!
ಕಳೆದ ಐದಾರು ವರ್ಷಗಳಿಂದ ಮಳೆಯಿಲ್ಲದೆ ಪಾತಾಳ ಸೇರಿದ್ದ ನೀರನ್ನು ಹಿಡಿಯಲು ರೈತರು 1000 ದಿಂದ 1500 ಅಡಿಗಳವರೆಗೆ ಕೊಳವೆ ಬಾವಿಗಳನ್ನು ಕೊರೆಸಿ ನೀರು ಪಡೆಯುವ ಪ್ರಯತ್ನ ನಡೆಸಿದ್ದರು. ಆದರೆ ಕೊಳವೆಬಾವಿಗಳಲ್ಲಿ ನೀರು ಬಾರದೆ ವಿಫಲವಾಗಿದ್ದವು. ಲಕ್ಷಾಂತರ ರೂ. ಸಾಲದ ಹೊರೆ ನಡುವೆ ಅಡಿಕೆ, ತೆಂಗು, ಬಾಳೆ ತೋಟಗಳನ್ನು ಉಳಿಸಲು ಟ್ಯಾಂಕರ್‌ಗಳ ನೀರನ್ನು ಬೇರಡೆಯಿಂದ ತಂದು ತೋಟ ಉಳಿಸಿಕೊಳ್ಳಲು ಭಗೀರಥ ಯತ್ನ ಮಾಡಿದ್ದರು.
ಪ್ರಸಕ್ತ ವರ್ಷ ಚಿತ್ರದುರ್ಗ ತಾಲೂಕಿನ ಭರಮಸಾಗರ, ಕಾಲಗೆರೆ ಇತರೆ ಕೆಲ ಬೆರಳೆಣಿಕೆ ಕೆರೆಗಳನ್ನು ಹೊರತುಪಡಿಸಿದರೆ ಉಳಿದ ಕೆರೆಗಳು ಪೂರ್ಣ ಹಾಗೂ ಭಾಗಶಃ ನೀರಿನಿಂದ ತುಂಬಿಕೊಂಡಿವೆ. ಅಲ್ಲದೆ ಸಾವಿರಾರು ಸಂಖ್ಯೆಯಲ್ಲಿರುವ ಚೆಕ್ ಡ್ಯಾಂಗಳು, ಹಳ್ಳ ಕೊಳ್ಳಗಳು ಹಾಗೂ ರೈತರು ತೆಗೆಸಿದ ಕೃಷಿಹೊಂಡಗಳು ಭರ್ತಿಯಾಗಿವೆ. ಇದರಿಂದ ಅಂತರ್ಜಲ ಮಟ್ಟ ಕೂಡ ವೃದ್ಧಿಯಾಗಿದೆ ಎಂಬ ಮಾತುಗಳು ರೈತಾಪಿ ವಲಯದಿಂದ ಕೇಳಿಬರುತ್ತಿವೆ. ಹಳೆಯ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದನ್ನು ಮನವರಿಕೆ ಮಾಡಿಕೊಳ್ಳಲು ಇದೀಗ ಸಿಸಿ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಖಾಲಿ ಕೊಳವೆಬಾವಿಗಳಿಗೆ ಕ್ಯಾಮೆರಾ ಇಟ್ಟು ಯಾವ ಸೆಲೆಗಳಲ್ಲಿ ಎಷ್ಟು ನೀರು ಬರುತ್ತಿದೆ, ಪೈಪ್ ಗಳನ್ನು ಎಷ್ಟು ಆಳಕ್ಕೆ ಬಿಟ್ಟರೆ ಮೇಲೆ ಎಷ್ಟು ಇಂಚು ನೀರು ಬರಬಹುದು ಎಂಬ ಇತರೆ ಮಾಹಿತಿಗಳನ್ನು ಸಿಸಿ ಕ್ಯಾಮೆರಾದ ಸಹಾಯದ ತಿಳಿದುಕೊಂಡು ಬಳಿಕ ಪಂಪ್‌ಸೆಟ್ ಇಳಿಸುವ ಕಾರ್ಯಕ್ಕೆ ಮುಂದಾಗುತ್ತಿರುವುದು ಕಂಡುಬರುತ್ತಿದೆ. ಇದರಿಂದ ಅನವಶ್ಯಕವಾಗಿ ಕೊಳವೆಬಾವಿಗಳಲ್ಲಿ ಪಂಪ್‌ಸೆಟ್ ಅಳವಡಿಸುವುದು, ಅಂದಾಜಿನಲ್ಲಿ ಪೈಪ್‌ಗ್ಳನ್ನು ಇಳಿಸುವುದು, ಎತ್ತುವುದು ಸೇರಿದಂತೆ ನೀರು ಮೇಲೆತ್ತಲು ಎಷ್ಟು ಎಚ್‌ಪಿ ಮೋಟಾರ್ ಬೇಕು, ಎಷ್ಟು ಸ್ಟೇಜ್‌ನ ಪಂಪ್ ಅಳವಡಿಸಬೇಕು ಎಂಬ ತಿಳಿವಳಿಕೆ ಇಲ್ಲದೆ ಅನವಶ್ಯಕವಾಗಿ ಹಣ, ಸಮಯ, ಶ್ರಮದ ವ್ಯರ್ಥವನ್ನು ಸಿಸಿ ಕ್ಯಾಮೆರಾ ಪರೀಕ್ಷೆಯಿಂದ ತಡೆಯಬಹುದಾಗಿದೆ.
ಈ ಮೊದಲು ಸಿಸಿ ಕ್ಯಾಮೆರಾ ಬಿಟ್ಟು ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ, ಆಳ ಪರೀಕ್ಷೆ ನಡೆಸುವ ವ್ಯವಸ್ಥೆ ಕೋಲಾರ, ಬೆಂಗಳೂರು ಇತರೆ ಭಾಗಗಳಲ್ಲಿ ಚಾಲ್ತಿಯಲ್ಲಿತ್ತು. ದೂರದ ಊರುಗಳಿಂದ ಪರೀಕ್ಷಕರನ್ನು ಕರೆಸಿ ಚೆಕ್ ಮಾಡಿಸುವ ಮೂಲಕ ಬಯಲುಸೀಮೆ ಪ್ರದೇಶಕ್ಕೂ ಸಿಸಿ ಕ್ಯಾಮೆರಾ ಮೂಲಕ ಕೊಳವೆಬಾವಿಗಳ ಪರೀಕ್ಷೆ ವ್ಯವಸ್ಥೆ ಕೆಲ ವರ್ಷಗಳ ಹಿಂದೆ ಕಾಲಿಟ್ಟಿತ್ತು. ಇದೀಗ ಚಿತ್ರದುರ್ಗ, ದಾವಣಗೆರೆ ಭಾಗಗಳಲ್ಲಿ ಪಂಪ್‌ಸೆಟ್ ರಿಪೇರಿ ಮಾಡುವ ಮೆಕ್ಯಾನಿಕ್‌ಗಳೇ ಸ್ವತಃ ಸಿಸಿ ಕ್ಯಾಮೆರಾ ಪರೀಕ್ಷಾ ಕಿಟ್ ಹೊಂದಿದ್ದು ಕಡಿಮೆ ದರದಲ್ಲಿ ರೈತರ ಕೊಳವೆಬಾವಿ ಪರೀಕ್ಷೆ ನಡೆಸಿಕೊಡುತ್ತಿದ್ದಾರೆ. ಕೋಲಾರ, ಬೆಂಗಳೂರು ಮೂಲದವರನ್ನು ಕರೆಸುತ್ತಿದ್ದ ವೇಳೆ ಕೊಳವವೆಬಾವಿಯೊಂದಕ್ಕೆ ಒಂದು ಸಾವಿರ ರೂ. ನೀಡಬೇಕಿತ್ತು. ಇದೀಗ ಸ್ಥಳೀಯರೇ ಪರೀಕ್ಷಿಸಿ ಕೊಡುತ್ತಿರುವದರಿಂದ ಬೋರ್ ಪಾಯಿಂಟ್ ಒಂದಕ್ಕೆ 500, 600 ರೂ.ಗಳನ್ನಷ್ಟೇ ನೀಡಿದರೆ ಸಾಕು.
ಅಳವಡಿಕೆ ಹೇಗೆ?
ಸುಮಾರು 1500 ಅಡಿ ಉದ್ದದ ವೈರ್‌ನ ತುದಿಗೆ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿರುತ್ತದೆ. ಇನ್ನೊಂದು ತುದಿಯ ವೈರ್ ಅನ್ನು ಸಣ್ಣದೊಂದು ಎಲ್‌ಇಡಿ ಮಾನಿಟರ್‌ಗೆ ಅಳವಡಿಕೆ ಮಾಡಲಾಗುತ್ತಿದೆ. ಕೊಳವೆಬಾವಿಯೊಳಗೆ ಕ್ಯಾಮೆರಾ ಇಳಿಸುತ್ತಾ ಹೋದಂತೆ ಅದರ ಸಂಪೂರ್ಣ ದೃಶ್ಯ ಮಾನಿಟರ್ ನಲ್ಲಿ ಕಾಣುತ್ತಾ ಹೋಗುತ್ತದೆ. ವೈರ್‌ನಲ್ಲಿ ಅಡಿಗಳನ್ನು ಗುರುತಿಸಲಾಗಿರುತ್ತದೆ. ಇದರಿಂದ ಎಷ್ಟು ಅಡಿ ಆಳದಲ್ಲಿ ನೀರಿನ ಸೆಲೆಗಳಿವೆ, ಎಷ್ಟು ಅಡಿಗೆ ಮೋಟಾರ್ ಪಂಪ್ ಬಿಡಬೇಕು ಎಂಬಿತ್ಯಾದಿ ಮಾಹಿತಿಯನ್ನು ಇದರಿಂದ ಸುಲಭವಾಗಿ ತಿಳಿಯಬಹುದು.
ಭರಮಸಾಗರ ಹೋಬಳಿಯ ಬಹುತೇಕ ಹಳ್ಳಿಗಳಲ್ಲಿ ಸಿಸಿ ಕ್ಯಾಮೆರಾ ಪರೀಕ್ಷೆ ನಡೆಸಲಾಗುತ್ತಿದೆ. ಇದರಿಂದ ರೈತರಿಗೆ ಅನವಶ್ಯಕ ಹಣ, ಶ್ರಮ, ಸಮಯದ ಉಳಿತಾಯವಾಗುತ್ತಿದೆ. ರಾತ್ರಿ ವೇಳೆ ಪರೀಕ್ಷೆ ನಡೆಸಿದರೆ ಕೊಳವೆಬಾವಿಯೊಳಗಿನ ದೃಶ್ಯವನ್ನು ನೋಡಿ ತಿಳಿಯಬಹುದು.
ಉಮೇಶ್ ಹೆಗ್ಗೆರೆ, ಸಿಸಿ ಕ್ಯಾಮೆರಾದಿಂದ
ಕೊಳವೆಬಾವಿ ನೀರು ಪರೀಕ್ಷಕರು