Advertisement

ಖ್ಯಾತ ಸಾಹಿತಿ ಸಾ.ರಾ. ಅಬೂಬಕ‌ರ್‌ಗೆ ಬರಗೂರು ಪ್ರಶಸ್ತಿ ಪ್ರದಾನ

12:50 AM Mar 30, 2022 | Team Udayavani |

ಮಂಗಳೂರು: ಖ್ಯಾತ ಸಾಹಿತಿ ಸಾ.ರಾ. ಅಬೂಬಕರ್‌ ಅವರಿಗೆ ಮಂಗಳವಾರ ನಗರದ ಹ್ಯಾಟ್‌ಹಿಲ್‌ನಲ್ಲಿರುವ ಅವರ ನಿವಾಸದಲ್ಲಿ ಡಾ| ಬರಗೂರು ಪ್ರತಿಷ್ಠಾನದ ವತಿಯಿಂದ ಅಧ್ಯಕ್ಷ ಮುರಳೀಧರ ಹಾಲಪ್ಪ ಮತ್ತು ಸದಸ್ಯರು ಬರಗೂರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

Advertisement

ಪ್ರಶಸ್ತಿಯು 25,000 ರೂ. ನಗದು ಮತ್ತು ಸಮ್ಮಾನವನ್ನು ಒಳಗೊಂಡಿದೆ. ಮುರಳೀಧರ ಹಾಲಪ್ಪ ಮಾತನಾಡಿ, ಸಾ.ರಾ. ಅಬೂಬಕರ್‌ ಅವರು ಸಾಹಿತ್ಯದ ಮೂಲಕ ಈ ನಾಡಿನ ಸಾಮರಸ್ಯಕ್ಕಾಗಿ ಶ್ರಮಿಸಿದವರು. ಅವರಂತಹ ಮೇರು ಸಾಹಿತಿಗೆ ಬರಗೂರು ಪ್ರತಿಷ್ಠಾನದ ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿಯ ಗೌರವ ಹೆಚ್ಚಿದೆ. ಅವರಿಗೆ ಪ್ರಶಸ್ತಿ ನೀಡುವ ಮೂಲಕ ನಾಡಿನ ಜನತೆಗೆ ಸಾಮರಸ್ಯದ ಸಂದೇಶ ಸಾರಿದಂತಾಗುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಅಪರ ಜಿಲ್ಲಾಧಿಕಾರಿ ಕೃಷ್ಣ ಮೂರ್ತಿ ಮಾತನಾಡಿ, ಸಾ.ರಾ. ಅವರು ಸಾಮರಸ್ಯ ಲೋಕಕ್ಕೆ ಹೊಸತನ ನೀಡಿದವರು. ಅವರಿಗೆ ಪ್ರಶಸ್ತಿ ನೀಡುವ ಮೂಲಕ ಬರಗೂರು ಪ್ರತಿಷ್ಠಾನಕ್ಕೆ ಗರಿಮೆ ಬಂದಿದೆ ಎಂದರು.

ಸಾಹಿತಿ ಡಾ| ಷರೀಫಾ ಮಾತನಾಡಿ, ಸಾ.ರಾ. ಅಬೂಬಕರ್‌ ಕನ್ನಡ ಸಾಹಿತ್ಯದ ಮೊತ್ತಮೊದಲ ಮುಸ್ಲಿಮ್‌ ಮಹಿಳಾ ಕಾದಂಬರಿಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ತಮ್ಮ ವಿಶಿಷ್ಟ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದು, ಅವರ ಘನ ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ ಎಂದರು.

ಸಾ.ರಾ. ಅಬೂಬಕರ್‌ ಅವರು ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಸ್ಥಾಪನೆ ಮತ್ತು ಕಚೇರಿ ಆರಂಭಿಸಲು ಶ್ರಮಿಸಿದ ಉತ್ತಮ ಸಂಘಟಕಿಯಾಗಿದ್ದರು. ಅವರಿಗೆ ಪ್ರಶಸ್ತಿ ಸಂದಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಸಂಘದ ಅಧ್ಯಕ್ಷೆ ಜ್ಯೋತಿ ಚೇಳಾçರು ಹೇಳಿದರು. ಮಾಜಿ ಮೇಯರ್‌ ಎಂ. ಶಶಿಧರ ಹೆಗ್ಡೆ, ಲೋಲಾಕ್ಷ , ಮಂಜುನಾಥ್‌ ಸಾಗರ್‌ ಅವರು ಸಾರಾ ಅಬೂಬಕರ್‌ ಅವರನ್ನು ಅಭಿನಂದಿಸಿದರು.

Advertisement

ಬರಗೂರು ಪ್ರತಿಷ್ಠಾನದ ಕಾರ್ಯದರ್ಶಿ ಡಾ| ಸುಂದರರಾಜ ಅರಸು, ಪ್ರೊ| ಲಕ್ಷ್ಮೀ ನಾರಾಯಣ, ರಿಜ್ವಾನ್ ಪಾಷಾ ಅವರು ಉಪಸ್ಥಿತರಿದ್ದರು.

ಕಾರ್ಪೊರೇಟರ್‌ ಸಂಧ್ಯಾ ಆಚಾರ್ಯ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಪದಾಧಿಕಾರಿಗಳಾದ ಚಂದ್ರಕಲಾ ನಂದಾವರ, ರೋಹಿಣಿ, ಗುಲಾಬಿ ಬಿಳಿಮಲೆ, ಮಾಜಿ ಕಾರ್ಪೊರೇಟರ್‌ ಪ್ರಕಾಶ್‌ ಬಿ. ಸಾಲ್ಯಾನ್‌, ಜೆರಾರ್ಡಿನ್‌ ಡಿ’ಸೋಜಾ ಮತ್ತು ಸಾ.ರಾ. ಅಬೂಬಕರ್‌ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ವ್ಯಕ್ತಿತ್ವವು ಪ್ರದರ್ಶನವಲ್ಲ, ನಿದರ್ಶನವಾಗಲಿ
ಪ್ರಶಸ್ತಿ ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದ ಸಾ.ರಾ. ಅಬೂಬಕರ್‌ ಅವರು ಮಾತನಾಡಿ, ನಮ್ಮ ವ್ಯಕ್ತಿತ್ವವು ಪ್ರದರ್ಶನವಲ್ಲ, ನಿದರ್ಶನ ಆಗ ಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತರು ಸೇರಿದಂತೆ ಎಲ್ಲರೂ ಸಮಾನರು. ಇದನ್ನರಿತು ಬಾಳಿದರೆ ಎಲ್ಲರ ಜೀವನ ಸ್ವರ್ಗ ಸಮಾನ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next