Advertisement

ಬಪ್ಪೂರು ರಸ್ತೆ ಕಾಮಗಾರಿಗೆ ಒತ್ತುವರಿ ಸಮಸ್ಯೆ!

06:44 PM Nov 03, 2020 | Suhan S |

ಸಿಂಧನೂರು: ನಗರದ ಮೂಲಕ ಹಾದು ಹೋಗುವ ಜಿಲ್ಲಾಮುಖ್ಯರಸ್ತೆಯ ಸುಧಾರಣೆ ಕೆಲಸಕ್ಕೆ ರಸ್ತೆ ಬಲಭಾಗದಲ್ಲಿನ ಒತ್ತುವರಿ ಸಮಸ್ಯೆ ಕಂಟಕವಾಗಿದ್ದು, ತೆರವು ಕಾರ್ಯಾಚರಣೆಯ ಹೊಣೆ ಈಗ ಕಿತ್ತಾಟಕ್ಕೆ ಕಾರಣವಾಗಿದೆ.

Advertisement

ಜಿಲ್ಲಾ ಮುಖ್ಯರಸ್ತೆಯಾದರೂ ಅದರ ವ್ಯಾಪ್ತಿ ಎರಡು ಇಲಾಖೆಗಳಿಗೆ ಸೇರಿರುವುದರಿಂದ ಕಾಮಗಾರಿಗೆ ತೊಡಕು ಎದುರಾಗಿದೆ. ಭರದಿಂದ ಆರಂಭಿಸಲಾದ ಕೆಲಸವನ್ನು ದಿಢೀರ್‌ ಕೈ ಬಿಡಲಾಗಿದೆ. ಕೆಲಸ ಕೈ ಬಿಡುವುದಕ್ಕೆ ಮಳೆ ಕಾರಣವೆಂದು ಪಿಡಬ್ಲ್ಯುಡಿ ಇಲಾಖೆಯ ಮೂಲಗಳು ತಿಳಿಸಿದರೆ, ಅದರ ವಾಸ್ತವ ಚಿತ್ರಣವೇ ಬೇರೆಯೆಂಬ ಸಂಗತಿ ಚರ್ಚೆಗೆ ಕಾರಣವಾಗಿದೆ.

ರಸ್ತೆಗೆ ಒತ್ತುವರಿ ಮುಳುವು: ಸಿಂಧನೂರು- ಬಪ್ಪೂರು ಮಾರ್ಗದ ಮುಖ್ಯರಸ್ತೆ 21 ಕಿಮೀನಷ್ಟಿದೆ. ಇದರಲ್ಲಿ ನಗರ ವ್ಯಾಪ್ತಿಯಿಂದ ಬಪ್ಪೂರು ಮಾರ್ಗದ ಆರಂಭಿಕ 1 ಕಿಮೀ ರಸ್ತೆ ನಗರಸಭೆಯ ವ್ಯಾಪ್ತಿಗೆ ಒಳಪಟ್ಟಿದೆ. ಬಾಬು ಜಗಜೀವನರಾಂ ವೃತ್ತದಿಂದ ನಗರ ವ್ಯಾಪ್ತಿಯಲ್ಲಿ ಈ ರಸ್ತೆ ಆರಂಭವಾಗುತ್ತಿದ್ದು, ಇದರ ಬಲಭಾಗದ ಉದ್ದಕ್ಕೂ ಕಟ್ಟಡಗಳಿವೆ. ಈ ಪೈಕಿ ಕೆಲವು ಕಡೆಗಳಲ್ಲಿರಸ್ತೆ ಒತ್ತುವರಿಯಾಗಿದೆ. ನಗರ ವ್ಯಾಪ್ತಿಗೆ ಒಳಪಟ್ಟ ಪ್ರದೇಶದಲ್ಲಿ ಅನಧಿಕೃತ ಒತ್ತುವರಿ ಇರುವುದರಿಂದ ತೆರವು ಮಾಡಿಕೊಡುವಂತೆ ನಗರಸಭೆಯ ಬೆನ್ನು ಬೀಳಲಾಗಿದೆ. ಒತ್ತುವರಿ ಗುರುತಿಸುವಿಕೆ ಹೊರತುಪಡಿಸಿದರೆ, ಮುಂದಿನ ಪ್ರಕ್ರಿಯೆ ನಡೆದಿಲ್ಲ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಗರಸಭೆಗೆ ಏ.24, 2020ರಂದು ಬರೆದ ಪತ್ರಕ್ಕೆ ಇದುವರೆಗೂ ಮೋಕ್ಷ ದೊರಕಿಲ್ಲ.

ಪ್ರಭಾವದ ಶಂಕೆ: ಕುರುಕುಂದಾ, ತಿಡಿಗೋಳ, ನಿಡಿಗೋಳ, ಚಿರತನಾಳ, ಬೊಮ್ಮನಾಳ ಸೇರಿದಂತೆ ಹಲವು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದೆ. ವಾಹನ ಸಂಚಾರ ಕಷ್ಟವಾಗಿದ್ದು, ಜನ ನಿತ್ಯ ಯಾತನೆ ಅನುಭವಿಸುವಂತಾಗಿದೆ. ಲೋಕೋಪಯೋಗಿ ಇಲಾಖೆ 4.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸುಧಾರಣೆಗೆ ಮುಂದಾಗಿದ್ದರಿಂದ ಜನ ನಿಟ್ಟುಸಿರು ಬಿಟ್ಟಿದ್ದರು. ರಸ್ತೆಯ  ಎಡಭಾಗದಲ್ಲಿನ ಗೂಡಂಗಡಿ ಒತ್ತುವರಿಯನ್ನು ಸುಲಭವಾಗಿ ತೆರವುಗೊಳಿಸಲಾಗಿದೆ. ಜತೆಗೆ, ಕೆಲವು ಕಡೆ ಚರಂಡಿ ನಿರ್ಮಾಣ ಕೆಲಸ ಆರಂಭಿಸಲಾಗಿದೆ. ಆದರೆ, ರಸ್ತೆ ಬಲಭಾಗದಲ್ಲಿ ಮಾತ್ರ ಸಮಸ್ಯೆ ಕಾಣಿಸಿದೆ. ನಗರದ ಮುಖ್ಯರಸ್ತೆಗೆ ಹೊಂದಿಕೊಂಡೇ ಬಲಕ್ಕೆ ಕಟ್ಟಡಗಳು ಆರಂಭವಾಗಿರುವುದರಿಂದ ಕಾರ್ಯಾಚರಣೆಗೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆಂಬ ದೂರು ಕೇಳಿಬಂದಿವೆ. ಸಣ್ಣಪುಟ್ಟ ಡಬ್ಟಾಗಳನ್ನು ದಿಢೀರ್‌ ಎತ್ತಂಗಡಿ ಮಾಡಿಸುವ ಅಧಿಕಾರಿಗಳು ಬೃಹತ್‌ ಕಟ್ಟಡಗಳ ವಿಷಯದಲ್ಲಿ ಮೌನ ತಾಳಿದ್ದು ಯಾಕೆ? ಎಂಬ ಪ್ರಶ್ನೆ ಕೇಳಿಬಂದಿವೆ.

ಆರಂಭದಲ್ಲೇ ಕಳಪೆ ದೂರು: ಕೆಲಸ ಕೈಗೆತ್ತಿಕೊಂಡ ಗುತ್ತಿಗೆದಾರರು 200 ಮೀಟರ್‌ನಷ್ಟು ಚರಂಡಿ ನಿರ್ಮಿಸಿದ್ದಾರೆ. ಅಲ್ಲಲ್ಲಿ ವಿಸ್ತರಣೆ ಕೆಲಸವಾಗಿದೆ. ಕಿಮೀ 0.6ರಲ್ಲಿ ಮರಂ ಸಹ ಹಾಕಲಾಗಿದೆ. ಈ ಹಂತದಲ್ಲೇ ಗುಣಮಟ್ಟ ಕಾಯ್ದುಕೊಳ್ಳುತ್ತಿಲ್ಲವೆಂಬ ದೂರು ಸಲ್ಲಿಕೆಯಾಗಿವೆ. ಕೋಟ್ಯಂತರ ರೂ. ವೆಚ್ಚದ ಕೆಲಸವನ್ನು ಬೇಕಾಬಿಟ್ಟಿಯಾಗಿ ಕೈಗೊಂಡರೆ ಹೇಗೆ? ಎಂದು ಅಧಿಕಾರಿಗಳನ್ನು ಪ್ರಶ್ನಿಸಲಾಗಿದೆ.

Advertisement

ಈ ನಡುವೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಕೈಬಿಟ್ಟು ಅಧಿಕಾರಿಗಳು ತಟಸ್ಥ ಧೋರಣೆ ತಳೆದಿದ್ದಾರೆ. ರಸ್ತೆಯ ಬಲಭಾಗದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಹಾದು ಹೋಗಿದ್ದು, ಇದನ್ನು ಕೂಡ ತೆರವು ಮಾಡಬೇಕಿದೆ. ಭಾರಿ ನಿರೀಕ್ಷೆಯೊಂದಿಗೆ ಕೈಗೆತ್ತಿಕೊಳ್ಳಲಾದ ರಸ್ತೆ ಕೆಲಸಕ್ಕೆ ಆರಂಭದಲ್ಲಿಯೇ ಹಲವು ವಿಘ್ನ ಸುತ್ತಿಕೊಂಡಿದ್ದು, ಬಪ್ಪೂರು ಮಾರ್ಗದ ಹಳ್ಳಿಯ ನಿವಾಸಿಗಳು ತಗ್ಗುದಿನ್ನೆ ರಸ್ತೆಯಲ್ಲಿ ಹೊಯ್ದಾಡುತ್ತಲೇ ನಗರಕ್ಕೆ ಬರುವಂತಾಗಿದೆ.

ಕೆಲವು ಶೆಡ್‌, ಒಂದು ಕಟ್ಟಡ ಮಾತ್ರ ಒತ್ತುವರಿಯಾಗಿದೆ. ಮಾರ್ಕ್‌ ಹಾಕಿ ಕೊಟ್ಟಿದ್ದು, ಸಿಟಿ ವ್ಯಾಪ್ತಿ ಇರುವುದರಿಂದ ತೆರವುಗೊಳಿಸುವ ಅ ಧಿಕಾರ ನಗರಸಭೆಯವರಿಗೆ ಇದೆ. ಮತ್ತೂಮ್ಮೆ ಗಮನಕ್ಕೆ ತರಲಾಗುವುದು. ಮಳೆಯ ಕಾರಣಕ್ಕಷ್ಟೇ ನಿಲ್ಲಿಸಿದ್ದು, ವಾರದಲ್ಲೇ ಕಾಮಗಾರಿ ಆರಂಭಿಸಲಾಗುವುದು. – ಸಿ.ಎಸ್‌.ಪಾಟೀಲ್‌, ಎಇಇ, ಲೋಕೋಪಯೋಗಿ ಇಲಾಖೆ.

 

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next