ಬಂಟ್ವಾಳ: ನಿಷೇಧಿತ ಸಂಘಟನೆಯಾದ ಪಿ.ಎಫ್.ಐ. ಹಾಗೂ ಎಸ್.ಡಿ.ಪಿ.ಐ. ಕಚೇರಿಗೆ ಎ.ಸಿ. ಮದನ್ ಮೋಹನ್ ನೇತೃತ್ವದಲ್ಲಿ ತಾಲೂಕಿನ ನಾಲ್ಕು ಕಚೇರಿ ಸೇರಿದಂತೆ ಮನೆಗೆ ಮುಂಜಾನೆ ವೇಳೆ ಬೀಗ ಹಾಕಿದ್ದಾರೆ.
ಸರಕಾರ ನಿಷೇಧ ಮಾಡಿದ ಬಳಿಕವೂ ಎಸ್.ಡಿ.ಪಿ.ಐ. ಕಚೇರಿಯಲ್ಲಿ ಪಿ.ಎಫ್.ಐ. ಸಂಘಟನೆಯ ಕಾರ್ಯಕರ್ತರು ಜಮಾಯಿಸಿ ಕೆಲಸ ಕಾರ್ಯಗಳನ್ನು ನಡೆಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಕಚೇರಿಗಳಿಗೆ ಬೀಗ ಹಾಕಿ, ಸಂಘಟನೆಯ ಬೋರ್ಡ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಫರಂಗಿಪೇಟೆ, ಕೆಳಗಿನ ಪೇಟೆ ಮಂಚಿಯಲ್ಲಿರುವ ಕಚೇರಿ ಹಾಗೂ ಪರ್ಲಿಯಾದಲ್ಲಿ ಹಂಝ ಎಂಬವರ ಮನೆಯನ್ನು ಕಚೇರಿ ಮಾಡಿದ್ದು, ಈ ನಾಲ್ಕು ಕಡೆಗಳಿಗೆ ಏಕ ಕಾಲದಲ್ಲಿ ಪೋಲಿಸರ ತಂಡ ಬೀಗ ಹಾಕಿದೆ.
ತಾಲೂಕಿನಲ್ಲಿರುವ ಎಸ್.ಡಿ.ಪಿ.ಐ. ಕಚೇರಿಯಲ್ಲಿ ಪಿ.ಎಫ್.ಐ. ಸಂಘಟನೆಗೆ ಸೇರಿದ ವ್ಯಕ್ತಿಗಳ ಚಲನ-ವಲನಗಳ ಹಿನ್ನೆಲೆಯಲ್ಲಿ ಬೀಗ ಜಡಿಯಲು ಎ.ಸಿ. ಮದನ್ ಮೋಹನ್ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ಮಾಡಲಾಗಿತ್ತು.
ಗ್ರಾಮಾಂತರ ಎಸ್.ಐ. ಹರೀಶ್ ನೇತೃತ್ವದಲ್ಲಿ ದಾಳಿ ನಡೆಸಿ ಕಚೇರಿ ಒಳಗೆ ಸಂಪೂರ್ಣ ಪರಿಶೀಲನೆ ನಡೆಸಿ, ಬಳಿಕ ಬೀಗ ಹಾಕಲಾಯಿತು. ತಹಶೀಲ್ದಾರ್ ಸ್ಮಿತಾರಾಮು, ಪೋಲೀಸ್ ಇನ್ಸ್ ಪೆಕ್ಟರ್ ಗಳಾದ ಟಿ.ಡಿ. ನಾಗರಾಜ್, ವಿವೇಕಾನಂದ, ಬಂಟ್ವಾಳ ನಗರ ಠಾಣಾ ಎಸ್.ಐ. ಅವಿನಾಶ್, ಕಂದಾಯ ನಿರೀಕ್ಷಕ ರಾಜೇಶ್ ಹಾಗೂ ನಗರ ಪೊಲೀಸ್ ಠಾಣಾ ಅಪರಾಧ ವಿಭಾಗದ ಎಸ್.ಐ. ಕಲೈಮಾರ್, ತಾಪಂ.ಇ.ಓ ರಾಜಣ್ಣ ನೇತೃತ್ವದ ನಾಲ್ಕು ತಂಡಗಳು ದಾಳಿ ನಡೆಸಿ ಕಾರ್ಯಚರಣೆ ನಡೆಸಿದ್ದಾರೆ.