ಬಂಟ್ವಾಳ: ಬಿಸಿರೋಡಿನ ಮೊಡಂಕಾಪು ಎಂಬಲ್ಲಿ ಸ್ಕೂಟರ್ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಬೆಂಗಳೂರಿನ ಪ್ರಸಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋಳಿ ವ್ಯಾಪಾರ ಮಾಡುವ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.
ತಮಿಳುನಾಡು ಮೂಲದ ಪಳನಿ ಯಾನೆ ಚಿನ್ನಿ (51) ಮೃತಪಟ್ಟ ವ್ಯಕ್ತಿ.
ಪಳನಿಯವರು ದ.ಕ.ಜಿಲ್ಲೆಯ ಬಂಟ್ವಾಳದಲ್ಲಿ ಅನೇಕ ವರ್ಷಗಳಿಂದ ಕೋಳಿ ವ್ಯಾಪಾರ ನಡೆಸುತ್ತಿದ್ದರು. ಮೇ.17 ರಂದು ಅವರು ಬಿಸಿರೋಡಿನಿಂದ ಗುರುಪುರ ಕೈಕಂಬ ಕಡೆಗೆ ಕೋಳಿಗಳನ್ನು ತಮ್ಮ ದ್ವಿಚಕ್ರ ವಾಹನದಲ್ಲಿ ಕೊಂಡು ಹೋಗಿದ್ದರು.
ಕೋಳಿ ವ್ಯಾಪಾರ ಮುಗಿಸಿ ವಾಪಸ್ ಬಿಸಿರೋಡಿನ ಕಡೆ ಬರುವ ಸಂದರ್ಭ ಬಜ್ಪೆ-ಬಿಸಿರೋಡು ರಾಜ್ಯ ಹೆದ್ದಾರಿಯ ಬಿ.ಮೂಡ ಗ್ರಾಮದ ಮೊಡಂಕಾಪು ಎಂಬಲ್ಲಿ ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ, ಸ್ಕಿಡ್ ಆಗಿ ಸ್ಕೂಟರ್ ಪಲ್ಟಿಯಾಗಿದೆ.
ಗಂಭೀರ ಗಾಯವಾಗಿದ್ದ ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ ಇವರಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದ ಹಿನ್ನೆಲೆ ವೈದ್ಯರ ಸಲಹೆಯಂತೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಗಂಭೀರವಾಗಿ ಗಾಯಗೊಂಡಿದ್ದ ಇವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.