Advertisement

ಬಂಟಾಳಕ್ಕೆ ಸೇರಿದ್ದರೂ ಪುತ್ತೂರಿಗೆ ಹೆಚ್ಚಿನ ಒಲವು

01:16 PM Aug 04, 2022 | Team Udayavani |

ವಿಟ್ಲ: ಬಂಟ್ವಾಳ ತಾಲೂಕಿನಲ್ಲಿ ವಿಸ್ತೀರ್ಣದ ಲೆಕ್ಕಾಚಾರದಲ್ಲಿ ಅತೀ ದೊಡ್ಡದು ಹಾಗೂ ಜನಸಂಖ್ಯೆ ಆಧಾರದಲ್ಲಿ ಎರಡನೇ ಅತೀ ದೊಡ್ಡ ಗ್ರಾಮ ಪುಣಚ. ತಾಲೂಕು ಕೇಂದ್ರ ದೂರವಿರುವುದರಿಂದ ಹತ್ತಿರದ ಪುತ್ತೂರು ತಾಲೂಕು ಕೇಂದ್ರವನ್ನೇ ಅವಲಂಬಿಸುವವರು ಹೆಚ್ಚು. ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಪುಣಚ ಗ್ರಾಮ ಸೇರಿರುವುದರಿಂದ ಭಾವನಾತ್ಮಕವಾಗಿ ಒಲವು ಪುತ್ತೂರಿನ ಕಡೆಗಿದ್ದರೂ ಬಂಟ್ವಾಳ ಕೇಂದ್ರವನ್ನು ಬಿಡಲಾಗದ ಮನಸ್ಸು ಇಲ್ಲಿನವರದು! ಹೀಗಾಗಿ ವಿಟ್ಲ ಹೋಬಳಿಯನ್ನು ತಾಲೂಕಾಗಿಸಬೇಕು ಎಂಬ ಕೂಗಿನಲ್ಲಿ ಇವರ ಸ್ವರವೂ ಇದೆ.

Advertisement

ಅತೀ ಹೆಚ್ಚು ಪರಿಶಿಷ್ಟ ಜಾತಿ/ ಪಂಗಡ ಕುಟುಂಬಗಳಿದ್ದು, 662ಕ್ಕೂ ಅಧಿಕ ಕುಟುಂಬಗಳನ್ನು ಹೊಂದಿದೆ. ಈ ಲೆಕ್ಕಾಚಾರದಲ್ಲಿ ಗ್ರಾಮದ ಬಡಕುಟುಂಬಗಳಿಗೆ ಅನುದಾನ ಹರಿದು ಬರಬೇಕಿತ್ತು. ಆದರೆ ಹೆಚ್ಚಿನ ಈ ಕುಟುಂಬದವರು ಭೂಮಿಯ ದಾಖಲೆ ಮಾಡಿಕೊಂಡಿಲ್ಲ. ಹಿರಿಯರ ಜಂಟಿ ಖಾತೆಯೇ ಇರುವುದರಿಂದ ಪಾಲು ಪಟ್ಟಿ ವಿಂಗಡನೆಯಾಗದೇ ಸರಕಾರದ ಹಲವು ಸವಲತ್ತುಗಳಿಂದ ವಂಚಿತರಾಗಿದ್ದಾರೆ. ನಿವೇಶನವಿಲ್ಲದೇ ಸರಕಾರದ ಮನೆ, ಅನುದಾನಗಳು ಇವರನ್ನು ತಲುಪುವುದಿಲ್ಲ. ತಿಳಿವಳಿಕೆ ಕೊರತೆಯಿಂದ ಮಲೆಕುಡಿಯ, ಕೊರಗ ಸಮುದಾಯದವರೂ ಇದೇ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಏನೇನಿದೆ ?

ಸುಸಜ್ಜಿತ ಗ್ರಾ.ಪಂ. ಕಟ್ಟಡ, ಮೀಟಿಂಗ್‌ ಹಾಲ್‌ ಇದೆ. ಸುಬ್ರ ಹ್ಮಣ್ಯ ಮಂಜೇಶ್ವರ ಹೆದ್ದಾರಿ ಪುಣಚದಲ್ಲಿ ಸಾಗುತ್ತಿದ್ದು ಪ್ರಮುಖ ರಸ್ತೆ ಸುಸಜ್ಜಿತವಾಗಿದೆ. ಪೆಟ್ರೋಲ್‌ ಬಂಕ್‌, ವಾಣಿಜ್ಯ ಬ್ಯಾಂಕ್‌, ಪುಣಚ ವ್ಯವಸಾಯ ಸಹಕಾರಿ ಸಂಘ, ಆಧುನಿಕ ತಂತ್ರಜ್ಞಾನಗಳು ತಲುಪಿವೆ. ಪ್ರಾ.ಆ. ಕೇಂದ್ರವಿದ್ದು, ವೈದ್ಯರಿದ್ದಾರೆ. ಪಶುಗಳ ಚಿಕಿತ್ಸೆಗಾಗಿ ಪಶು ವೈದ್ಯ ಪರಿವೀಕ್ಷ ಕರನ್ನು ನೇಮಿಸಲಾಗಿದೆ. ಘನ ತ್ಯಾಜ್ಯ, ಒಣ ತ್ಯಾಜ್ಯ ವಿಲೇವಾರಿಯೂ ಆಗು ತ್ತಿದೆ. ಹಸಿಕಸ ವಿಲೇವಾರಿಗೆ ಯೋಜನೆ ತಯಾರಿಸಲಾಗುತ್ತಿದೆ. ಉಜ್ವಲ ಸಂಜೀವಿನಿ ಒಕ್ಕೂಟ ಕಾರ್ಯಾಚರಿಸುತ್ತಿದೆ.

ಸಾರ್ವಜನಿಕ ಗ್ರಂಥಾಲಯ ಡಿಜಿಟಲೀಕರಣಗೊಂಡಿದೆ. ಶಿಕ್ಷಣ ಯುವ ಕೌಶಲ ತರಬೇತಿಗಾಗಿ ಗ್ರಾಮ ಡಿಜಿ ವಿಕಸನದ ಮೂಲಕ ವೃತ್ತಿ ಮಾರ್ಗದರ್ಶನ, ಗಣಕಯಂತ್ರ ತರಬೇತಿ, 12ರಿಂದ 25 ವರ್ಷದ ಯುವ ಪೀಳಿಗೆಗೆ ಸಂವಹನ ಕೌಶಲ, ಇಂಟರ್‌ ನೆಟ್‌ ಬ್ಯಾಂಕಿಂಗ್‌ ಬಗ್ಗೆ ತರಬೇತಿ ನೀಡಲಾಗುತ್ತಿದೆ.

Advertisement

ಸಿದ್ಧಗೊಂಡ ಯೋಜನೆ

ಗ್ರಾಮದಲ್ಲಿ ಮುಖ್ಯವಾಗಿ ಹಿಂದೂ ರುದ್ರ ಭೂಮಿ ಇಲ್ಲ. ಅದಕ್ಕಾಗಿ ಭಾರೀ ಪ್ರಯತ್ನಗಳ ನಡೆಯುತ್ತಿವೆ. 82 ಸೆಂಟ್ಸ್‌ ಜಾಗ ಕಾದಿರಿಸಲಾಗಿದೆ. 30 ಲಕ್ಷ ರೂ. ಯೋಜನೆಯನ್ನು ತಯಾರಿಸಲಾಗಿದೆ. ಹಿಂದೂ ರುದ್ರ ಭೂಮಿ ಅಭಿವೃದ್ಧಿ ಸಮಿತಿ ರೂಪಿಸಿಕೊಂಡು ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಮತ್ತಿತರ ದಾನಿಗಳನ್ನು ಸಂಪರ್ಕಿಸಿ ಮುಂದಡಿಯಿಡಲಾಗಿದೆ. ಜಲಜೀವನ್‌ ಮಿಷನ್‌ ಅನುಷ್ಠಾನಕ್ಕೆ ಸಿದ್ಧತೆ ಕೂಡ ಆರಂಭವಾಗಿದೆ.

ಸಿಬಂದಿ ಇಲ್ಲ

ವಿವಿಧ ಇಲಾಖೆಗಳ ಜವಾಬ್ದಾರಿಯನ್ನು ಪಂಚಾಯತ್‌ ನೋಡಿಕೊಳ್ಳಬೇಕೆಂಬ ಆಶಯವಿದೆ. ಆದರೆ ಸಿಬಂದಿಯಿಲ್ಲ. ಪುಣಚದಲ್ಲಿ ಕಾರ್ಯದರ್ಶಿ, ಅಕೌಂಟೆಂಟ್‌ ಹುದ್ದೆಗಳೂ ಭರ್ತಿಯಾಗಿಲ್ಲ. ಪ್ರಭಾರ ಹುದ್ದೆಗಳ ಮೂಲಕ ವಾರಕ್ಕೆ ಮೂರು ದಿನಗಳ ಕೆಲಸ ನೀಡಲಾಗಿದೆ. ವಿವಿಧ ಇಲಾಖೆಗಳಿಂದ ಗ್ರಾಮದ ಜನತೆಗೆ ಒದಗಿಸುವ ಸರಕಾರದ ಸೌಲಭ್ಯಗಳ ಮಾಹಿತಿಯನ್ನು ನೀಡುವವರಿಲ್ಲ. ಪಂಚಾಯತ್‌ ಮತ್ತು ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ.

ಮಳೆಹಾನಿ

ಜುಲೈ ತಿಂಗಳ ಭಾರೀ ಮಳೆಗೆ 1ನೇ ವಾರ್ಡ್‌ನ ಮಣಿಲ-ದಂಬೆ ರಸ್ತೆಯು ಮಣಿಲ ಸಮೀಪದ ಸಂಕೇಶ ಎಂಬಲ್ಲಿ ಕಾಲುಸಂಕದ ಮೇಲೆ ಮಣ್ಣು ಹಾಕಿದ ಜಾಗವು ಸಂಪೂರ್ಣ ಹದಗೆಟ್ಟಿದ್ದು ನಿತ್ಯ ಸವಾರರು ಪರದಾಡುವಂತಾಗಿತ್ತು. ಕೆಳಗೆ ಹರಿಯುತ್ತಿರುವ ತೋಡು ಮಳೆಗಾಲದಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸುತ್ತಲೇ ಇದ್ದಾರೆ.

ಪುಣಚ ಗ್ರಾಮ ವ್ಯಾಪ್ತಿಗೊಳಪಡುವ ದೇವಿನಗರ -ಕಲ್ಲಾಜೆ-ಮಡ್ಯಾರಬೆಟ್ಟು-ಆಜೇರು ಮೂಲಕ ಸಾರ್ಯಕ್ಕೆ ಸಾಗುವ ರಸ್ತೆಯ ಮಡ್ಯಾರಬೆಟ್ಟು ಕಿರು ಸೇತುವೆಯೊಂದು ಮಳೆ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ಈ ಸೇತುವೆಯನ್ನು ಬಳಸುವ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈ ಸೇತುವೆಯನ್ನು 2013-2014ರಲ್ಲಿ ಸಂಸದರ 5 ಲಕ್ಷ ಹಾಗೂ ಜಿ.ಪಂ.ನ 3 ಲಕ್ಷ ಅನುದಾನದಲ್ಲಿ ನಿರ್ಮಿಸಲಾಗಿತ್ತು. ಹತ್ತು ವರ್ಷ ತುಂಬುವುದರೊಳಗೆಯೇ ಮಳೆಯಲ್ಲಿ ಕೊಚ್ಚಿಹೋಗಿದೆ. ಇದರಿಂದಾಗಿ ಆಜೇರು ಭಾಗದಿಂದ ಪುಣಚಕ್ಕೆ ಬರುವ, ಕಲ್ಲಾಜೆಯಿಂದ ಸಾಜ ಮೂಲಕ ಪುತ್ತೂರು ಹಾಗೂ ಇತರೆಡೆಗಳಿಗೆ ಸಾಗುವ ಜನರು ತೊಂದರೆ ಅನುಭವಿಸುವಂತಾಗಿದೆ. ಕಲ್ಲಾಜೆ, ಮಲೆತ್ತಡ್ಕ, ಪೊಯ್ಯಮೂಲೆ ಇನ್ನಿತರ ಪ್ರದೇಶಗಳಲ್ಲಿಯೂ ಮಳೆಹಾನಿ ಸಂಭವಿಸಿದ್ದು, ಮನೆ, ಕೃಷಿ ಭೂಮಿಗಳಿಗೆ ಹಾನಿಯಾಗಿದೆ. ಬಡವರ್ಗದವರ ಎರಡು ಮನೆ ಕುಸಿ ದಿದ್ದು, ಅವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಆದರೆ ಶಾಶ್ವತ ವ್ಯವಸ್ಥೆಗೆ ಅನುದಾನವಿಲ್ಲ.

ರಸ್ತೆ ಸ್ಥಿತಿ ಶೋಚನೀಯ

ಮಲೆತ್ತಡ್ಕ-ಬರೆಂಗಾಯಿ-ಗೌರಿ ಮೂಲೆ-ಗುಂಡ್ಯಡ್ಕ-ಪದವು ಪ್ರದೇಶ ಗಳನ್ನು ಸಂಪರ್ಕಿಸುವ ಸುಮಾರು 2.5 ಕಿ.ಮೀ. ದೂರದ ಕಚ್ಚಾ ರಸ್ತೆ ಕೆಸರುಮಯವಾಗಿದೆ. ನಡೆದಾಡಲೂ ಸಾಧ್ಯವಾಗದಂತಾಗಿದೆ. ನೂರಾರು ಮನೆಗಳಿಗೆ ಅಗತ್ಯವಿರುವ ಈ ರಸ್ತೆ ಮೇಲ್ದರ್ಜೆಗೇರಿಸಬೇಕೆಂದು ಸುರೇಶ್‌ ನಾಯಕ್‌ ಗೌರಿಮೂಲೆ ಅವರು ಗ್ರಾ.ಪಂ., ತಾ.ಪಂ., ಜಿ.ಪಂ.ಗೆ ಪತ್ರ ಬರೆದಿದ್ದರು. 1.25 ಕೋಟಿ ರೂ.ಗಳ ಅನುದಾನ ಬೇಕಾಗುವುದು ಎಂದು ಯೋಚಿಸಿದ ಸ್ಥಳೀಯಾಡಳಿತಗಳು ಕೈಚೆಲ್ಲಿ ಕೂತವು. ಆಗ ಸುರೇಶ್‌ ನಾಯಕ್‌ ಪ್ರಧಾನಿಗೆ ಪತ್ರ ಬರೆದಿದ್ದು, ಪ್ರಧಾನಿ ಕಚೇರಿಯಿಂದ ತತ್‌ಕ್ಷಣ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗೆ, ಅವರು ಜಿ.ಪಂ. ಗೆ ಪರಿಶೀಲಿಸಿ, ವರದಿ ನೀಡಲು ಸೂಚಿಸಿತ್ತು. ಬಳಿಕ ಪ್ರಗತಿ ಕಾಣಲಿಲ್ಲ. ಈ ಬಾರಿ ಮಳೆಗಾಲದಲ್ಲಿಯೂ ಸಮಸ್ಯೆ ವಿಪರೀತವಾಗಿತ್ತು. ಸ್ಥಳೀಯ ಪಂಚಾಯತ್‌ ಸ್ವಲ್ಪ ಮಟ್ಟಿಗೆ ಸ್ಪಂದಿಸಿದ್ದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿದೆ.

ಬಸ್‌ ತಂಗುದಾಣ ಅಪಾಯದಲ್ಲಿ ಮಲೆತ್ತಡ್ಕದಲ್ಲಿರುವ ಬಸ್‌ ತಂಗುದಾಣದಲ್ಲಿ ನೀರು ಸೋರುತ್ತಿದ್ದು, ಕಬ್ಬಿಣ ಹೊರಗೆ ಬಂದಿದೆ. ಅಪಾಯಕಾರಿಯಾಗಿರುವ ಇದನ್ನು ಕೆಡವಿ ಹಾಕಿ ನೂತನ ಬಸ್‌ ತಂಗುದಾಣ ನಿರ್ಮಿಸಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಬಫರ್‌ ಝೋನ್‌ ಸಮಸ್ಯೆ

ವಿಟ್ಲ ಪಟ್ಟಣ ಪಂಚಾಯತ್‌ ಮತ್ತು ಪುತ್ತೂರು ನಗರಸಭೆಗಳ ಬಫರ್‌ ಝೋನ್‌ ಸಮಸ್ಯೆ ಪುಣಚಕ್ಕೆ ಕಾಡುತ್ತಿದೆ. 94ಸಿ, 94ಸಿಸಿ, ಅಕ್ರಮ ಸಕ್ರಮ ಹಕ್ಕುಪತ್ರ ಒದಗಿಸುವುದಕ್ಕಾಗುತ್ತಿಲ್ಲ. ಹಳ್ಳಿಯೇ ಆಗಿದ್ದರೂ ಎರಡು ಪಟ್ಟಣಗಳ ವ್ಯಾಪ್ತಿ ಈ ಗ್ರಾಮಕ್ಕೆ ತಲುಪುತ್ತಿರುವ ಕಾರಣ ಹಳ್ಳಿಯ ಬಡಜನತೆ, ಮಧ್ಯಮ ವರ್ಗದ ಜನತೆ ಕಂಗಾಲಾಗಿದ್ದಾರೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಬಫರ್‌ ಝೋನ್‌ ಸಮಸ್ಯೆಯನ್ನು ಹೋಗಲಾಡಿಸಿ, ಕಂದಾಯ ಇಲಾಖೆ ಹಕ್ಕುಪತ್ರ ನೀಡಬೇಕೆಂದು ಶಾಸಕರು ಆದೇಶಿಸಿದ್ದರೂ ಕಿಮ್ಮತ್ತಿಲ್ಲದೇ ಹೋಗಿದೆ. ಗ್ರಾಮಕ್ಕೆ ಅಂಬೇಡ್ಕರ್‌ ಭವನ ನಿರ್ಮಾಣವಾಗಬೇಕು ಎಂಬ ಆಶಯ ಇದ್ದರೂ ಸರಕಾರಿ ಜಾಗವನ್ನು ಗುರುತಿಸಿಕೊಟ್ಟಿಲ್ಲ. ಕಂದಾಯ ಇಲಾಖೆ ಗಮನಹರಿಸಬೇಕು ಎನ್ನು ವುದು ಇಲ್ಲಿನವರ ಆಗ್ರಹ.

ಅನುದಾನ ಸಾಲುವುದಿಲ್ಲ: ಗ್ರಾ.ಪಂ.ಗೆ ಸರಕಾರ ನೀಡುವ ಅನುದಾನ ಸಾಲುವುದಿಲ್ಲ. ಬಡವರ ಮನೆ ಕುಸಿದರೂ ಒದಗಿಸುವ ಅನುದಾನ ಗ್ರಾ.ಪಂ.ನಲ್ಲಿಲ್ಲ. ಜಮೀನಿನ ದಾಖಲೆಯನ್ನು ಕಂದಾಯ ಇಲಾಖೆ ಸರಿಪಡಿಸಬೇಕು. ಉದ್ಯೋಗ ಖಾತರಿ ಯೋಜನೆ ಭತ್ತದ ಕೃಷಿಗೆ ಅನ್ವಯವಾಗಬೇಕು. ಕೃಷಿಕರ ಖಾಸಗಿ ಕೆರೆಗಳನ್ನು ಪುನಃಶ್ಚೇತನಗೊಳಿಸಲು ಉದ್ಯೋಗ ಖಾತರಿ ಯೋಜನೆ ಅನುದಾನ ಬಳಸುವಂತಾಗಬೇಕು. ಮರಳು ಕಡಿಮೆ ದರದಲ್ಲಿ ಸಿಗಬೇಕು. ಬಫರ್‌ ಝೋನ್‌ ಸಮಸ್ಯೆ ಪರಿಹಾರವಾಗಬೇಕು. ಬೀಟ್‌ ಪೊಲೀಸ್‌ ಗ್ರಾಮಕ್ಕೆ ನಿರಂತರ ಗಸ್ತು ತಿರುಗಬೇಕು. ಮಕ್ಕಳ ಗ್ರಾಮಸಭೆಯಲ್ಲಿ ಎಲ್ಲ ಶಾಲೆಗಳಿಗೆ ಆಟದ ಸಾಮಗ್ರಿಗಳನ್ನು ಗ್ರಾ.ಪಂ. ವತಿಯಿಂದ ನೀಡಲಾಗಿದೆ. ರುದ್ರಭೂಮಿ ನಿರ್ಮಾಣಕ್ಕೆ ಸಂಪೂರ್ಣ ಪ್ರಯತ್ನ ಮಾಡಲಾಗುತ್ತಿದೆ. –ರಾಮಕೃಷ್ಣ ಬಿ. ಮೂಡಂಬೈಲು, ಅಧ್ಯಕ್ಷರು, ಪುಣಚ ಗ್ರಾ.ಪಂ.

ಬಹಿಷ್ಕಾರದ ಎಚ್ಚರಿಕೆ: ಕುದ್ದುಪದವು- ತೋರಣಕಟ್ಟೆ ಮತ್ತು ಪರಿಯಾಲ್ತಡ್ಕ -ತೋರಣಕಟ್ಟೆ ಮುಖ್ಯ ರಸ್ತೆಯನ್ನು ಸಂಪರ್ಕ ಮಾಡುವ ದೃಷ್ಟಿ ಯಿಂದ ಮಲೆ ತ್ತಡ್ಕ – ಬರೆಂಗಾಯಿ – ಗೌರಿಮೂಲೆ – ಗುಂಡ್ಯಡ್ಕ ರಸ್ತೆಯನ್ನು ಗ್ರಾ.ಪಂ. ನಿರ್ಮಿಸಿದೆ. 2013ನೇ ಸಾಲಿನಿಂದ ಈ ತನಕ ರಸ್ತೆ ಅಭಿವೃದ್ಧಿಗೆ ಅರ್ಜಿ ಸಲ್ಲಿಸಿದರೂ ಸರ್ವ ಋತು ರಸ್ತೆಯನ್ನಾಗಿಸಿಲ್ಲ. ಅನುದಾನಕ್ಕಾಗಿ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಪತ್ರ ಬರೆದಾಗಿದೆ. ಈ ಬಾರಿ ಗ್ರಾ.ಪಂ. ಚುನಾವಣೆಯಲ್ಲಿ ಈ ವಾರ್ಡ್‌ ನಲ್ಲಿ ಚುನಾವಣೆಗೆ ಸ್ಪರ್ಧಿಸಿ, ಗೆದ್ದ ಅಭ್ಯರ್ಥಿ ಅಧ್ಯಕ್ಷರಾಗಿದ್ದು, ಅವರು ಭರವಸೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಯ ಮುನ್ನ ರಸ್ತೆ ಸುಸಜ್ಜಿತಗೊಳ್ಳದಿದ್ದರೆ ಚುನಾ ವಣೆಗೆ ಬಹಿಷ್ಕಾರ ಮಾಡುತ್ತೇವೆ. – ಸುರೇಶ್‌ ನಾಯಕ್‌ ಗೌರಿಮೂಲೆ, ಸ್ಥಳೀಯರು

-ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next