Advertisement

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

11:59 PM Nov 17, 2024 | Team Udayavani |

ಬಂಟ್ವಾಳ: ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ತನ್ನ ಅಧೀನದ ವಸತಿ ನಿಲಯಗಳ ಕಾರ್ಯಕ್ಷಮತೆಯನ್ನು ವೃದ್ಧಿಸುವ ದೃಷ್ಟಿಯಿಂದ ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಇದರ ಪ್ರಕಾರ ಪ್ರತಿ ತಿಂಗಳ ಮೂರನೇ ಶನಿವಾರ ಇಲಾಖೆಯ ಎಲ್ಲ ಸಿಬಂದಿ ಒಂದೊಂದು ಹಾಸ್ಟೆಲ್‌ಗ‌ಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯನ್ನು ಅಧ್ಯಯನ ನಡೆಸಲಿದ್ದಾರೆ.

Advertisement

ನ. 16ರಂದು ರಾಜ್ಯಾದ್ಯಂತ ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆಯ ಮೊದಲನೇ ಕಾರ್ಯಕ್ರಮ ನಡೆದಿದ್ದು, ದ.ಕ. ಜಿಲ್ಲೆಗೆ ಇಲಾಖೆಯ ಕೇಂದ್ರ ಕಚೇರಿಯ ಉಪನಿರ್ದೇಶಕ ಶ್ರೀಹರ್ಷ ಅವರು ಭೇಟಿ ನೀಡಿ ಪುತ್ತೂರಿನ ಬೀರಮಲೆ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ನಿಲಯದ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ.

ದ.ಕ.ಜಿಲ್ಲಾ ಅಧಿಕಾರಿ ಬಿಂದಿಯಾ ನಾಯಕ್‌ ಅವರು ಉಳ್ಳಾಲದ ಮಡ್ಯಾರ್‌ ಮೆಟ್ರಿಕ್‌ ಅನಂತರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ್ದಾರೆ. ಉಳಿದಂತೆ ಜಿಲ್ಲೆಯ ತಾಲೂಕು ಅಧಿಕಾರಿಗಳು ಬೋಳಾರ, ಮಡಂತ್ಯಾರು, ಸುಬ್ರಹ್ಮಣ್ಯ ನಿಲಯಗಳು, ಇತರ ಸಿಬಂದಿ ಉಳಿದ ನಿಲಯಗಳನ್ನು ಪರಿಶೀಲಿಸಿದ್ದಾರೆ. ಇಲಾಖೆಯ ಉಡುಪಿ ಜಿಲ್ಲಾ ಅಧಿಕಾರಿ ಹಾಕಪ್ಪ ಲಾಮಾಣಿ ಅವರು ಮಣಿಪಾಲದ ನರ್ಸಿಂಗ್‌ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

2,500ರಷ್ಟು ಹಾಸ್ಟೆಲ್‌ಗ‌ಳು
ಹಿಂದುಳಿದ ಕಲ್ಯಾಣ ಇಲಾಖೆಯ ಅಧೀನದಲ್ಲಿ ರಾಜ್ಯಾದ್ಯಂತ ಸುಮಾರು 2,500ರಷ್ಟು ವಿದ್ಯಾರ್ಥಿ ನಿಲಯಗಳಿದ್ದು, 2.50 ಲಕ್ಷ ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಗುಣಮಟ್ಟದ ಸೇವೆ ನೀಡುವ ಉದ್ದೇಶದಿಂದ ಇಲಾಖೆಯ ಆಯುಕ್ತ ಶ್ರೀನಿವಾಸ್‌ ಕೆ. ಅವರ ನೇತೃತ್ವದಲ್ಲಿ ಈ ವಿನೂತನ ಕಾರ್ಯಕ್ರಮ ಅನುಷ್ಠಾನಗೊಂಡಿದ್ದು, ರಾಜ್ಯಾದ್ಯಂತ ಇಲಾಖೆಯ 700ರಷ್ಟು ಸಿಬಂದಿ ಮೊದಲ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದಾರೆ. ಇಲಾಖೆಯ ರಾಜ್ಯ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಕಲ್ಯಾಣಾಧಿಕಾರಿಗಳು ಹೀಗೆ ಎಲ್ಲರೂ ತಿಂಗಳ 3ನೇ ಶನಿವಾರ ಹಾಸ್ಟೆಲ್‌ಗ‌ಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕಿದೆ.

126 ಅಂಶಗಳ ನಮೂನೆ
ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ ವಿನೂತನ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನದ ದೃಷ್ಟಿಯಿಂದ ಇಲಾಖೆಯು 126 ಅಂಶಗಳ ನಮೂನೆಯೊಂದನ್ನು ಸಿದ್ಧಪಡಿಸಿದ್ದು, ಅದರಂತೆ ಪ್ರತಿ ನಿಲಯಗಳಲ್ಲಿ ತಪಾಸಣೆ ನಡೆಸಬೇಕಿದೆ. ಹಾಸ್ಟೆಲ್‌ಗ‌ಳ ಸ್ಥಿತಿಗತಿ ಹೇಗಿದೆ, ಅಲ್ಲಿನ ಉತ್ತಮ, ಧನಾತ್ಮಕ ಅಂಶಗಳೇನು, ಸುಧಾರಣೆ ತರಬೇಕಾದ ಅಂಶಗಳು ಯಾವುವು ಎಂಬುದನ್ನು ಅರಿತು ಇಲಾಖೆಗೆ ವರದಿ ಸಲ್ಲಿಸಬೇಕಿದೆ. ಇದರಿಂದ ರಾಜ್ಯದ ಪ್ರತಿ ಹಾಸ್ಟೆಲ್‌ಗ‌ಳ ಸ್ಥಿತಿಗತಿ ಇಲಾಖೆಯ ಗಮನಕ್ಕೆ ಬರಲಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿದೆ.

Advertisement

ಆಶಯ ಈಡೇರಲು ಅನುಕೂಲ
“ಇದು ಇಲಾಖೆಯ ಆಯುಕ್ತರ ಪ್ರಶಂಸನೀಯ ಕಾರ್ಯಕ್ರಮವಾಗಿದ್ದು, ಇದರಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶಯ ಈಡೇರಲು ಅನುಕೂಲವಾಗಲಿದೆ. ಪ್ರತಿ ಹಾಸ್ಟೆಲ್‌ಗ‌ಳ ಸ್ಥಿತಿ ತ್ವರಿತವಾಗಿ ಇಲಾಖೆಯ ಗಮನಕ್ಕೆ ಬರಲಿದೆ.” – ಬಿಂದಿಯಾ ನಾಯಕ್‌
ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ದ.ಕ.

ಸ್ಥಿತಿ ಅರಿಯಲು ಅನುಕೂಲ
ಅಧಿಕಾರಿಗಳು ಸಾಮಾನ್ಯವಾಗಿ ಪ್ರತಿ ಬಾರಿಯೂ ಹಾಸ್ಟೆಲ್‌ಗ‌ಳಿಗೆ ಭೇಟಿ ನೀಡಿದರೂ ಇಲಾಖೆಯ ಆಯುಕ್ತರ ಆದೇಶದಂತೆ ಹೊಸ ಅಭಿಯಾನವಾಗಿ ಮೊದಲ ಕಾರ್ಯಕ್ರಮ ಅನುಷ್ಠಾನಗೊಂಡಿದೆ. ಈ ಮೂಲಕ ಪ್ರತಿಯೊಬ್ಬ ಸಿಬಂದಿಯೂ ಹಾಸ್ಟೆಲ್‌ಗ‌ಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಯನ್ನು ಅರಿತುಕೊಳ್ಳಲು ಅನುಕೂಲವಾಗಿದೆ. – ಹಾಕಪ್ಪ ಲಮಾಣಿ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next