Advertisement

ಮಣ್ಣಿನ ಸವಕಳಿ ತಡೆಗೆ ನದಿ ಕಿನಾರೆಯಲ್ಲಿ ಬಿದಿರು ನಾಟಿ

10:49 AM Jul 14, 2022 | Team Udayavani |

ಬಂಟ್ವಾಳ: ಮಣ್ಣಿನ ಸವಕಳಿ ತಡೆ, ನೆರೆ ಹಾವಳಿಯನ್ನು ತಪ್ಪಿಸುವ ದೃಷ್ಟಿಯಿಂದ ಈ ಬಾರಿ ಅರಣ್ಯ ಇಲಾಖೆಯು ನದಿ ಕಿನಾರೆಯ ಖಾಲಿ ಸ್ಥಳಗಳಲ್ಲಿ ಬಿದಿರಿನ ಗಿಡಗಳ ನೆಡುತೋಪು (ಬ್ಯಾಂಬೊ ಪ್ಲಾಟಿಂಗ್‌) ಗಳ ರಚನೆಗೆ ಮುಂದಾಗಿದೆ. ಈ ವರ್ಷ ದ.ಕ. ಜಿಲ್ಲಾ ಅರಣ್ಯ ಇಲಾಖೆಯ ಬಂಟ್ವಾಳ ಹಾಗೂ ಮಂಗಳೂರು ವಲಯ ವ್ಯಾಪ್ತಿಯಲ್ಲಿ ಸುಮಾರು 38,500ಕ್ಕೂ ಅಧಿಕ ಬಿದಿರಿನ ಗಿಡಗಳನ್ನು ನಾಟಿ ಮಾಡಲಾಗಿದೆ. ಮತ್ತೆ ನದಿ ಕಿನಾರೆಯಲ್ಲಿ ಬಿದಿರಿನ ಗಿಡಗಳ ರಾಶಿ ಕಾಣಬೇಕು ಎಂಬ ದೃಷ್ಟಿಯಿಂದ ಇಲಾಖೆ ಗಿಡಗಳ ನಾಟಿ ಮಾಡುತ್ತಿದೆ.

Advertisement

ಬಂಟ್ವಾಳದಲ್ಲಿ 13,500 ಗಿಡಗಳು ಬಂಟ್ವಾಳದಲ್ಲಿ ಪ್ರಮುಖವಾಗಿ ಹರಿಯುವ ನೇತ್ರಾವತಿ ನದಿ ಹಾಗೂ ಪಲ್ಗುಣಿ ನದಿ ಕಿನಾರೆಯಲ್ಲಿ ಮೇಯಲ್ಲೇ ಬಿದಿರಿನ ಗಿಡಗಳ ನಾಟಿ ಕಾರ್ಯ ಪೂರ್ಣಗೊಂಡಿದೆ. ನೇತ್ರಾವತಿಯ ಬಂಟ್ವಾಳ ವ್ಯಾಪ್ತಿಯ ಒಂದು ಬದಿ ಬಿಳಿಯೂರಿನಿಂದ ಬರಿಮಾರು, ಬಾಳ್ತಿಲ, ಶಂಭೂರು, ಸಜೀಪದವರೆಗೆ, ಮತ್ತೂಂದು ಬದಿಯಲ್ಲಿ ಅಜಿಲಮೊಗರಿನಿಂದ ಸರಪಾಡಿ, ನಾವೂರು, ಜಕ್ರಿಬೆಟ್ಟುವರೆಗೂ ಬಿದಿರಿನ ನಾಟಿ ನಡೆದಿದೆ. ಜತೆಗೆ ಪೊಳಲಿ ಭಾಗ ದಲ್ಲಿ ಪಲ್ಗುಣಿ ನದಿ ಕಿನಾರೆಯಲ್ಲೂ ನಾಟಿ ಯಾಗಿದ್ದು, ಉಳಿ ಗ್ರಾಮದ ವ್ಯಾಪ್ತಿಯಲ್ಲಿ ತೋಡಿನ ಬದಿಯಲ್ಲೂ ಬಿದಿರು ನಾಟಿ ಮಾಡಲಾಗಿದೆ. ಹೀಗೆ ಬಂಟ್ವಾಳ ವಲಯ ವ್ಯಾಪ್ತಿಯಲ್ಲಿ ಸುಮಾರು 13ರಿಂದ 13,500 ಬಿದಿರಿನ ಗಿಡಗಳ ನಾಟಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಇಲಾಖೆ ಮಂಗಳೂರು ವಲಯ ವ್ಯಾಪ್ತಿಯಲ್ಲೂ ನೇತ್ರಾವತಿ, ಪಲ್ಗುಣಿ ನದಿ ಕಿನಾರೆ ಸೇರಿದಂತೆ ಇತರ ಸ್ಥಳಗಳಲ್ಲಿ ಸುಮಾರು 25 ಸಾವಿರಕ್ಕೂ ಅಧಿಕ ಗಿಡಗಳ ನಾಟಿ ಕಾರ್ಯ ನಡೆದಿದೆ. ಈ ವರ್ಷ ಜಿಲ್ಲೆಯ ಬಂಟ್ವಾಳ ಹಾಗೂ ಮಂಗಳೂರು ವಲಯದ ವ್ಯಾಪ್ತಿಯಲ್ಲಿ ಮಾತ್ರ ಈ ಕಾರ್ಯ ನಡೆದಿದೆ.

ಮುಂದಿನ ವರ್ಷ ಇತರ ವಲಯಗಳಿಗೂ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಎರಡು ವಲಯಗಳ ವ್ಯಾಪ್ತಿಯಲ್ಲಿ ನಡೆದ ಬಿದಿರಿನ ಗಿಡಗಳ ನಾಟಿ ಕಾರ್ಯವನ್ನು ಮಂಗಳೂರಿನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಸಿಸಿಎಫ್‌) ಪ್ರಕಾಶ್‌ ಎಸ್‌.ನೆಟಲ್ಕರ್‌ ಹಾಗೂ ಉಪಅರಣ್ಯ ಸಂರಕ್ಷಣಾಧಿಕಾರಿ(ಡಿಸಿಎಫ್‌) ದಿನೇಶ್‌ಕುಮಾರ್‌ ವೈ. ಕೆ. ವಲಯ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಕೃಷಿಯ ರಕ್ಷಣೆಗೆ ಅರಣ್ಯ ಪ್ರವಾಹ ನುಗ್ಗಿ ಕೃಷಿ ಹಾನಿಯಾಗುವ ಜತೆಗೆ ಮಣ್ಣು ಸವೆತದಿಂದ ಕೃಷಿ ಭೂಮಿಯೇ ನದಿ ಪಾಲಾಗುವುದಕ್ಕೆ ಬಿದಿರಿನ ನಾಶವೇ ಕಾರಣ. ಹೀಗಾಗಿ ಅವುಗಳನ್ನು ತಡೆಯಲು ಈ ಕಾರ್ಯ ಮಾಡಲಾಗುತ್ತಿದೆ. ಬಿದಿರಿನ ಬೇರುಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೊಂದಿದ್ದು, ಸವಕಳಿಯನ್ನು ತಡೆಯಬಹುದಾಗಿದೆ. ಜತೆಗೆ ನದಿ ಕಿನಾರೆಯಲ್ಲಿ ಬಿದಿರು ಇದ್ದರೆ ನೆರೆ ವೇಗವಾಗಿ ಕೃಷಿ ತೋಟಕ್ಕೆ ನುಗ್ಗುವುದನ್ನು ತಡೆಯುತ್ತದೆ.

ಮೇಯಲ್ಲಿ ಬಿದಿರು ನಾಟಿ ಮಣ್ಣಿನ ಸವಕಳಿ ತಡೆ ಹಾಗೂ ನೆರೆಯಿಂದ ರಕ್ಷಣೆಗಾಗಿ ಇಲಾಖೆಯು ಈ ವರ್ಷ ಬಿದಿರಿನ ನೆಡುತೋಪುಗಳ ರಚನೆಗಾಗಿ ನಾಟಿ ಮಾಡಿದೆ. ಬಂಟ್ವಾಳ ವಲಯದಲ್ಲಿ ನೇತ್ರಾವತಿ, ಪಲ್ಗುಣಿ ನದಿ ಕಿನಾರೆಯ ಜತೆಗೆ ತೋಡಿನ ಬದಿಗಳಲ್ಲೂ ಈಗಾಗಲೇ ಬಿದಿರಿನ ಗಿಡಗಳನ್ನು ನೆಟ್ಟಿದ್ದೇವೆ. –ರಾಜೇಶ್‌ ಬಳಿಗಾರ್‌, ವಲಯ ಅರಣ್ಯಾಧಿಕಾರಿ, ಬಂಟ್ವಾಳ

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next