ಬಂಟ್ವಾಳ: ಲಾರಿ- ಬೈಕ್ ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರ ಪೈಕಿ ಓರ್ವ ಸಹಪ್ರಯಾಣಿಕ ಮಂಗಳವಾರ (ಸೆ.24 ರಂದು) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆಯ ಹಿನ್ನೆಲೆ:
ಇಲ್ಲಿನ ಟ್ರಾಫಿಕ್ ಪೋಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಸಮೀಪದ ಮಾರಿಪಳ್ಳ ಜಂಕ್ಷನ್ ಎಂಬಲ್ಲಿ ಲಾರಿ ಡಿಕ್ಕಿಯಾಗಿ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಮೂವರಿಗೆ ಗಂಭೀರವಾಗಿ ಗಾಯವಾಗಿತ್ತು.
ಗಾಯಳುಗಳನ್ನು ಆಸ್ಪತ್ರಗೆ ದಾಖಲಿಸಲಾಗಿತ್ತು. ಆದರೆ ಸಹಪ್ರಯಾಣಿಕನಾಗಿದ್ದ ಓರ್ವ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸುಳ್ಯ ನಿವಾಸಿ ಸೇವಂತ್( 21) ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ.
ಖಾಸಗಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಈತ ಸ್ನೇಹಿತರ ಜೊತೆ ಸುಳ್ಯಕ್ಕೆ ತೆರಳಿದ್ದ. ಸಂಜೆ ಕಾಲೇಜು ಮುಗಿಸಿ ನೇರವಾಗಿ ಇಬ್ಬರು ಸ್ನೇಹಿತರ ಜೊತೆ ಅವರ ರೂಮ್ ಗೆ ತೆರಳಿ ಕಾಲ ಕಳೆದಿದ್ದ. ತಡರಾತ್ರಿ ಸುಮಾರು 2.30 ರ ವೇಳೆಗೆ ಸ್ನೇಹಿತರ ಜೊತೆ ಸುಳ್ಯ ಕಡೆಗೆ ಹೊರಟಿದ್ದರು.
ಮಂಗಳೂರು ಕಡೆಯಿಂದ ಬರುತ್ತಿದ್ದ ಲಾರಿ ಚಾಲಕ ಮಾರಿಪಳ್ಳ ಜಂಕ್ಷನ್ ನಲ್ಲಿ ವಾಪಸ್ ಫರಂಗಿಪೇಟೆ ಕಡೆಗೆ ತೆರಳಲು ತಿರುಗಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಚೇತಕ್ ಎಂಬವರು ಬೈಕ್ ರೈಡರ್ ಆಗಿದ್ದು, ಯತೀಶ್ ಹಾಗೂ ಸೇವಂತ್ ಅವರು ಸಹಪ್ರಯಾಣಿಕರಾಗಿದ್ದರು. ಇಬ್ಬರು ಗಾಯಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಾರಿ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂದು ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಎಸ್.ಐ.ಸುತೇಶ್ ಭೇಟಿ ನೀಡಿದ್ದಾರೆ.