ಪುಂಜಾಲಕಟ್ಟೆ: ಪ್ರತೀ ಗ್ರಾ.ಪಂ.ನಲ್ಲಿ ಜನರ ಬಳಿಗೆ ತೆರಳಿ ಹಕ್ಕುಪತ್ರ ಮತ್ತಿತರ ಸೌಲಭ್ಯ ವಿತರಿಸುತ್ತಿರುವ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರ ನಡೆ ಪ್ರಶಂಸನೀಯ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಬಂಟ್ವಾಳ ತಾಲೂಕು ರಾಯಿ ಗ್ರಾ.ಪಂ.ನಲ್ಲಿ ಬುಧವಾರ ಸಂಜೆ ಜರಗಿದ 94ಸಿ ಹಕ್ಕುಪತ್ರ ಮತ್ತಿತರ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಅರ್ಹ ಫಲಾನುಭವಿ ಧರ್ಣಮ್ಮ ಅನಾವುದಕೋಡಿ ಅವರಿಗೆ ಉಜ್ವಲ ಯೋಜನೆಯಡಿ ಮಂಜೂರಾದ ಅಡುಗೆ ಅನಿಲ ಸಾಮಗ್ರಿಯನ್ನು ಸಂಸದರು ವಿತರಿಸಿದರು. ಗ್ರಾ.ಪಂ. ಅಧ್ಯಕ್ಷ ಬಿ. ದಯಾನಂದ ಸಪಲ್ಯ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರು 70 ಮಂದಿಗೆ 94ಸಿ ಹಕ್ಕುಪತ್ರ, ರಾಷ್ಟ್ರೀಯ ಕುಟುಂಬ ಸಹಾಯಧನ, ಪ್ರಾಕೃತಿಕ ವಿಕೋಪ ಯೋಜನೆಯಡಿ ಮಂಜೂರಾದ ಚೆಕ್ ವಿತರಿಸಿ ಮಾತನಾಡಿದರು. ಇದೇ ವೇಳೆ ಪಂ. ವತಿಯಿಂದ ಶಾಸಕರನ್ನು ಸಮ್ಮಾನಿಸಲಾಯಿತು.
ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಮಾತನಾಡಿ, ರೈತರಿಗೆ ಸಾಲ ಮನ್ನಾ ಹಣವೂ ದೊರೆತಿಲ್ಲ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸರಕಾರದಿಂದ ಅನುದಾನವೂ ಸಿಗುತ್ತಿಲ್ಲ ಎಂದು ಆರೋಪಿಸಿದರು. ತಾ.ಪಂ. ಸದಸ್ಯೆ ಮಂಜುಳಾ ಸದಾನಂದ, ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಲತಾ, ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಸದಸ್ಯರಾದ ರಾಘವ ಅಮೀನ್, ಪದ್ಮನಾಭ ಗೌಡ, ಕುಸುಮಾ, ಯಶೋದಾ, ಪಿಡಿಒ ವೆಂಕಟೇಶ, ಎಪಿಎಂಸಿ ಮಾಜಿ ಸದಸ್ಯ ರತ್ನಕುಮಾರ್ ಚೌಟ, ಪ್ರಮುಖರಾದ ಕೆ. ಪರಮೇಶ್ವರ ಪೂಜಾರಿ, ಚಂದಪ್ಪ ಪೂಜಾರಿ, ಗ್ರಾಮಕರಣಿಕ ಪರೀಕ್ಷತ್ ಮೂಡಬಿದಿರೆ, ಸಹಾಯಕ ರಮೇಶ ಹೊಕ್ಕಾಡಿಗೋಳಿ ಮತ್ತಿತರರಿದ್ದರು. ಕಂದಾಯ ನಿರೀಕ್ಷಕ ನವೀನ್ ಕುಮಾರ್ ಬೆಂಜನಪದವು ಸ್ವಾಗತಿಸಿ, ಪ್ರಸ್ತಾವಿಸಿದರು. ಗ್ರಾಮಕರಣಿಕ ಸಂಘದ ಅಧ್ಯಕ್ಷ ಜನಾರ್ದನ ವಂದಿಸಿದರು. ಪತ್ರಕರ್ತ ಮೋಹನ್ ಕೆ. ಶ್ರೀಯಾನ್ ನಿರೂಪಿಸಿದರು.
ಆಯುಷ್ಮಾನ್ ಯೋಜನೆ
ದೇಶದಲ್ಲಿ ಪ್ರಥಮ ಬಾರಿಗೆ ಬಿಪಿಎಲ್ ಮತ್ತು ಎಪಿಎಲ್ ಕುಟುಂಬಗಳಿಗೆ ಆರೋಗ್ಯ ರಕ್ಷಣೆ ಒದಗಿಸುವ 5 ಲಕ್ಷ ರೂ. ವೆಚ್ಚದ ಆಯುಷ್ಮಾನ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ್ದು, ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆಯುವಂತಾಗಲಿ.