ಬಂಟ್ವಾಳ: ಬಂಟ್ವಾಳ ಬೈಪಾಸ್ ಜಂಕ್ಷನ್‌ನಲ್ಲಿ ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿ ಹಾದು ಹೋಗುವ ಜತೆಗೆ ಮೂಡು ಬಿದಿರೆ ರಸ್ತೆ ಹಾಗೂ ಬಂಟ್ವಾಳ ಪೇಟೆಯಿಂದ ಆಗಮಿಸಿದ ರಸ್ತೆ ಸೇರುತ್ತಿರುವುದರಿಂದ ಈ ಪ್ರದೇಶವು ಅಪಾಯಕಾರಿಯಾಗಿ ಪದೇ ಪದೇ ಅಪಘಾತಗಳು ಪುನರಾವರ್ತನೆ ಯಾಗುತ್ತಿದ್ದು, ಹೀಗಾಗಿ ಪೊಲೀಸ್ ಇಲಾಖೆ ಟ್ರಾಫಿಕ್ ಸಿಗ್ನಲ್ ಅಳವಡಿಸುವಂತೆ ಆಗ್ರಹ ಕೇಳಿಬರುತ್ತಿದೆ.
ಹೆದ್ದಾರಿಯು ಚತುಷ್ಪಥಗೊಂಡ ಬಳಿಕ ವಾಹನಗಳು ಅತೀ ವೇಗದಿಂದ ಸಾಗುತ್ತಿದ್ದು, ಜತೆಗೆ ಜಂಕ್ಷನ್‌ನಲ್ಲಿ ಹೆದ್ದಾರಿ ಸಂಪರ್ಕಿಸುವ ರಸ್ತೆಯಲ್ಲಿ ಆಗಮಿಸುವ ವಾಹನಗಳು ಕೂಡ ಯಾವುದೇ ಸಂಚಾರ ನಿಯಮಗಳನ್ನು ಪಾಲಿಸದೆ ಹೆದ್ದಾರಿಗೆ ನುಗ್ಗುತ್ತಿದೆ. ಇಲ್ಲಿ ಯಾವ ರೀತಿ ಸಂಚಾರ ನಡೆಸಬೇಕು ಎಂಬ ಸೂಚನೆಯೂ ಇಲ್ಲವಾಗಿದ್ದು, ಅಪಘಾತಗಳು ನಡೆಯುತ್ತಲೇ ಇದೆ.
ಕೆಲವು ದಿನದ ಸಂಜೆ ಲಾರಿಯೊಂದು ಸರ್ಕಲ್‌ಗೆ ಢಿಕ್ಕಿ ಹೊಡೆದು ಸರ್ಕಲ್‌ಗೆ ಹಾನಿಯಾಗಿದ್ದು, ಈ ಹಿಂದೆಯೂ ಇದೇ ರೀತಿ ಸರ್ಕಲ್‌ಗೆ ಢಿಕ್ಕಿ ಹೊಡೆದ ಘಟನೆಯೂ ನಡೆದಿದೆ. ಬೆಳಗ್ಗೆ ಹಾಗೂ ಸಂಜೆಯ ಹೊತ್ತು ವಾಹನಗಳ ಹೆಚ್ಚಿನ ಓಡಾಟದಿಂದ ಜಂಕ್ಷನ್‌ನಲ್ಲಿ ಸಂಚಾರದೊತ್ತಡ ಉಂಟಾಗಿ ಗೊಂದಲ ಸೃಷ್ಟಿಯಾಗುತ್ತದೆ. ಈ ವೇಳೆ ಸರ್ಕಲ್ ಮೂಲಕ ಸಾಗಬೇಕಾದ ವಾಹನಗಳು ಅವಸರದಲ್ಲಿ ನಿಯಮವನ್ನು ಪಾಲಿಸದೆ ನುಗ್ಗುವ ಘಟನೆಗಳು ಕೂಡ ನಡೆಯುತ್ತಿದೆ.
ಹೆಚ್ಚಿನ ವಾಹನಗಳ ಓಡಾಟ ಇರುವ ಸಂದರ್ಭದಲ್ಲಿ ಇಲ್ಲಿ ಸಂಚಾರ ಪೊಲೀಸರನ್ನು ನಿಯೋಜಿಸಬೇಕಾಗಿದ್ದು, ಆ ಕಾರ್ಯವನ್ನೂ ಪೊಲೀಸ್ ಇಲಾಖೆ ಮಾಡಿಲ್ಲ. ಹೀಗಾಗಿ ಸಂಚಾರ ನಿಯಮ ಮೀರಿ ಓಡಾಡುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಹೆದ್ದಾರಿಯಲ್ಲಿ ಸಾಗುವ ವಾಹನಗಳ ವೇಗ ನಿಯಂತ್ರಣಕ್ಕಾಗಿ ಥರ್ಮೋ ಫ್ಲಾಸ್ಟ್‌ಗಳನ್ನು ಬಳಸಿದರೂ ವಾಹನಗಳು ಯಾವುದೇ ರೀತಿಯಲ್ಲೂ ವೇಗವನ್ನು ನಿಯಂತ್ರಿಸದೆ ಸಾಗುತ್ತಿವೆ.
ಬೈಪಾಸ್ ಜಂಕ್ಷನ್‌ನಲ್ಲಿ ನಿರ್ಮಾಣ ಗೊಂಡಿರುವ ಸರ್ಕಲ್ ಕೂಡ ಸೂಕ್ತ ರೀತಿಯಲ್ಲಿ ಇಲ್ಲದೇ ಇರುವುದೂ ಕೂಡ ಗೊಂದಲಗಳಿಗೆ ಕಾರಣವಾಗಿದ್ದು, ಇಲ್ಲಿ ವಾಹನಗಳ ವೇಗ ನಿಯಂತ್ರಣದ ಜತೆಗೆ ಜಂಕ್ಷನ್‌ನಲ್ಲಿ ವಾಹನಗಳು ಹೆದ್ದಾರಿ ಪ್ರವೇಶಕ್ಕೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.