ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75 ರ ಮೆಲ್ಕಾರ್-ಕಲ್ಲಡ್ಕ ರಸ್ತೆ ಮಧ್ಯೆ ನರಹರಿ ಪರ್ವತದ ಬಳಿ ಚರಂಡಿಯಲ್ಲಿ ಮಾಂಸಕ್ಕಾಗಿ ಉಪಯೋಗಿಸಿದ ಪ್ರಾಣಿಯ ಅವಶೇಷಗಳು ಪತ್ತೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ಹಲವಾರು ಅನುಮಾನಗಳು ಸೃಷ್ಟಿಯಾಗಿದ್ದು, ಪೊಲೀಸ್ ಇಲಾಖೆ ತನಿಖೆಗೆ ಮುಂದಾಗಿದೆ.
ಈಗಾಗಲೇ ಬಂಟ್ವಾಳ ನಗರ ಪೊಲೀಸ್ ಇನ್ಸ್ ಪೆಕ್ಟರ್ ಆನಂತಪದ್ಮನಾಭ ಮತ್ತು ಎಸ್.ಐ.ರಾಮಕೃಷ್ಣ ಸ್ಥಳಕ್ಕೆ ಧಾವಿಸಿದ್ದು, ಮೇಲ್ನೋಟಕ್ಕೆ ಇದು ಕೋಳಿ, ಕುರಿ ಹಾಗೂ ಆಡುಗಳ ಅವಶೇಷಗಳಂತೆ ಕಾಣುತ್ತಿದ್ದು, ಪ್ರಸ್ತುತ ಗೋಹತ್ಯೆಯ ಆರೋಪಗಳು ಕೂಡ ಇರುವುದರಿಂದ ಪಶುಸಂಗೋಪನೆ ಇಲಾಖೆಯ ವೈದ್ಯರ ಮೂಲಕ ಅವಶೇಷಗಳ ಪರೀಕ್ಷೆ ನಡೆಸಿ ಯಾವ ಪ್ರಾಣಿ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.
ಈ ಕುರಿತು ಬಂಟ್ವಾಳ ಶಾಸಕರಿಗೆ ಸ್ಥಳೀಯ ಬಿಜೆಪಿ ಪ್ರಮುಖರೋರ್ವರು ಮಾಹಿತಿ ನೀಡಿದ್ದು ಶಾಸಕರು ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ, ಯಾವ ಪ್ರಾಣಿ ಎಂಬುದನ್ನು ಖಚಿತ ಪಡಿಸಿಕೊಂಡು ಗೊಂದಲ ಸೃಷ್ಟಿಯಾಗದಂತೆ ಇತ್ಯರ್ಥಪಡಿಸಲು ಸೂಚಿಸಿದ್ಧರು. ಅದರಂತೆ ಪಶು ವೈದ್ಯರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಆಡು, ಕುರಿ, ಕೋಳಿ ಮಾಂಸವೆಂಬುದನ್ನು ಖಚಿತ ಪಡಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಮಾಂಸದ ಅವಶೇಷಗಳನ್ನು ಹಾಕಿ ಮಲಿನಗೊಳಿಸಿದವರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.