ಬಂಟ್ವಾಳ: ಪುತ್ತೂರಿನ ಕೃಷಿಕರೋರ್ವರು ನೀರಿನ ಅಭಾವದಿಂದ ಕೃಷಿ ಹಾನಿಯಾಗಿರುವುದರಿಂದ ಮನನೊಂದು ಫರಂಗಿಪೇಟೆ ಸಮೀಪದ ಪೆಲಪಾಡಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಮೇ. 8 ರ ಬುಧವಾರ ಮುಂಜಾನೆ ಬೆಳಕಿಗೆ ಬಂದಿದೆ.
ಪುತ್ತೂರಿನ ಕೆದಂಬಾಡಿ ಗ್ರಾಮದ ಮಿತ್ರಂಪಾಡಿ ನಿವಾಸಿ ಭಾಸ್ಕರ್ ರೈ (53) ಆತ್ಮಹತ್ಯೆ ಮಾಡಿಕೊಂಡವರು. ಅವರು ಪೆಲಪಾಡಿಯಲ್ಲಿರುವ ಪತ್ನಿಯ ತಮ್ಮನ ಮನೆಯ ಬಾವಿಯಲ್ಲಿ ನೀರು ಸೇದುವ ಹಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಿತ್ರಂಪಾಡಿಯಲ್ಲಿರುವ ತಮ್ಮ ತೋಟಕ್ಕೆ ನೀರಿನ ಅಭಾವದಿಂದ ಕೃಷಿ ನಾಶವಾಗಿದ್ದು, ಇದರಿಂದ ಸಾಕಷ್ಟು ನೊಂದುಕೊಂಡಿದ್ದರು. ಜತೆಗೆ ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಪೆಲಪಾಡಿಯಲ್ಲಿರುವ ಪತ್ನಿಯ ತಮ್ಮನ ಮನೆಗೆ ಬಂದು ವಾಸ್ತವ್ಯವಿದ್ದರು. ನಿದ್ರೆ ಬೀಳುತ್ತಿಲ್ಲ ಎಂದು ಮಂಗಳೂರಿನ ವೈದ್ಯರಿಂದ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು.
ಮೇ 7 ರಂದು ರಾತ್ರಿ ಊಟ ಮುಗಿಸಿ ಮಲಗಿದ್ದು, ಬುಧವಾರ ಮುಂಜಾನೆ ಮನೆಮಂದಿ ಎದ್ದು ನೋಡಿದಾಗ ಅವರು ಮಲಗಿದ ಸ್ಥಳದಲ್ಲಿ ಇರಲಿಲ್ಲ. ಬಳಿಕ ಬಾವಿಯ ಬಳಿಗೆ ಹೋದಾಗ ನೀರು ಸೇದುವ ಹಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಘಟನೆಯ ಕುರಿತು ಭಾಸ್ಕರ್ ಸಹೋದರ ಶುಭಕರ ಪೊಲೀಸರಿಗೆ ದೂರು ನೀಡಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.