Advertisement

Bantwal: ಸ್ವಾಭಿಮಾನಿ ಬದುಕಿನ ಛಲ ಹೊತ್ತಿದ್ದ ಕುಟುಂಬ ಅತಂತ್ರ

03:35 PM Aug 19, 2024 | Team Udayavani |

ಬಂಟ್ವಾಳ: ಸಾವಿರ ಕನಸುಗಳೊಂದಿಗೆ ಸ್ವಂತ ಸೂರೊಂದನ್ನು ಖರೀದಿಸಿ ಮೂವರು ಹೆಣ್ಣು ಮಕ್ಕಳೊಂದಿಗೆ ಸ್ವಾಭಿಮಾನದಿಂದ ಬದುಕುವ ಛಲ ಹೊತ್ತಿದ್ದ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆ ನಿವಾಸಿ ಮಹಿಳೆಗೆ ಇತ್ತೀಚೆಗೆ ಸುರಿದ ಮಳೆ ಬಲುದೊಡ್ಡ ಅಘಾತವನ್ನು ನೀಡಿದೆ. ತೀವ್ರ ಮಳೆಯ ಕಾರಣಕ್ಕೆ ಮನೆಯ ಗೋಡೆಗಳು ಬಿದ್ದು ಹೋಗಿ ಮನೆಯಲ್ಲಿ ವಾಸ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.

Advertisement

ಜಾರಂದಗುಡ್ಡೆಯ ವನಿತಾ ಶೆಟ್ಟಿ ಕುಟುಂಬಕ್ಕೆ ಇಂತಹ ದಯನೀಯ ಸ್ಥಿತಿ ಬಂದಿದ್ದು, ಸ್ವಂತ ಮನೆ ಇದ್ದರೆ ಬಾಡಿಗೆ ಹಣ ಉಳಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎನ್ನುವ ಕಾರಣಕ್ಕೆ ಅವರು ತನ್ನಲ್ಲಿದ್ದ ಚಿನ್ನಾಭರಣವನ್ನೆಲ್ಲ ಮಾರಿ ಅದರ ಹಣದ ಜತೆಗೆ ಬ್ಯಾಂಕಿನಿಂದ ಸಾಲ ಪಡೆದು ಮನೆಯೊಂದನ್ನು ಖರೀದಿಸಿದ್ದರು. ಅದು ತೀರ ಹಳೆಯ ಮನೆಯಾದ ಕಾರಣ ವಿಧಿಯಾಟ ಬೇರೆಯೇ ಎಂಬಂತೆ ಖರೀದಿಸಿದ ಎರಡೇ ತಿಂಗಳಲ್ಲಿ ಮಳೆಗೆ ಮನೆಯ ಗೋಡೆ ಕುಸಿದು ಇಡೀ ಮನೆಯೇ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಇದ್ದ ಅಲ್ಪಸ್ವಲ್ಪ ಹಣವನ್ನು ಮನೆ ಖರೀದಿಗೆ ಉಪಯೋಗಿಸಿರುವ ಅವರ ಬಳಿ ಪ್ರಸ್ತುತ ಮನೆ ದುರಸ್ತಿಗೆ ಶಕ್ತಿಯೇ ಇಲ್ಲದಂತಾಗಿದೆ.

ಈ ರೀತಿ ಅತಂತ್ರ ಸ್ಥಿತಿಯಲ್ಲಿರುವ ಮಹಿಳೆಗೆ ಸಹೃದಯಿ ದಾನಿಗಳು ನೆರವಾಗುವಂತೆ ಮಕ್ಕಳು ಕಲಿಯುತ್ತಿರುವ ಶಾಲೆಯ ಶಿಕ್ಷಕರೇ ಮನವಿ ಪತ್ರಗಳನ್ನು ಸಿದ್ಧಪಡಿಸಿ ದಾನಿಗಳ ನಿರೀಕ್ಷೆಯಲ್ಲಿದ್ದಾರೆ. ವನಿತಾ ಅವರ ಮೂವರು ಹೆಣ್ಣು ಮಕ್ಕಳು ಕೂಡ ಪ್ರತಿಭಾವಂತರಾಗಿದ್ದು, ಮುಂದೆ ಮಕ್ಕಳನ್ನು ಹೇಗೆ ಓದಿಸಲಿ ಎಂಬ ನೋವು ಕೂಡ ಅವರನ್ನು ಕಾಡುತ್ತಿದೆ.

ನೆರವಿಗೆ ಮನವಿ ಈ ಕುಟಂಬಕ್ಕೆ ನೆರವಾಗುವ ದಾನಿಗಳು ಯೂನಿಯನ್‌ ಬ್ಯಾಂಕ್‌ ಪೊಳಲಿ ಶಾಖೆಯಲ್ಲಿ ವನಿತಾ ಹೆಸರಿನಲ್ಲಿರುವ ಉಳಿತಾಯ ಖಾತೆ ಸಂಖ್ಯೆ 520101024952180 (ಐಎಫ್‌ಎಸ್‌ಸಿ ಕೋಡ್‌ ಯುಬಿಐಎನ್‌0929824)ಗೆ ನೆರವು ನೀಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.