ಕೇಪು : ಪ್ರತಿ ಶಾಲೆಯ ಸಾಹಿತ್ಯ ಸಮ್ಮೇಳನ ನಡೆಯಬೇಕು. ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶ ದೊರೆತಾಗ ಅವರ ಪ್ರತಿಭೆ ಹೊರಬರುತ್ತದೆ. ನಾವೆಲ್ಲರೂ ಕುವೆಂಪು, ಕಾರಂತರಂತಾಗಬೇಕು. ವಿದ್ಯಾರ್ಥಿಗಳು ಸಾಹಿತ್ಯ, ಓದುವಿನತ್ತ ಗಮನಹರಿಸಬೇಕು. ಸಾಹಿತ್ಯ ಸಮಾಜ ದಲ್ಲಿ ಬದಲಾವಣೆ ತರುತ್ತಿದೆ ಎಂದು ವಿಟ್ಲ ಬಸವನಗುಡಿ ವಿಟ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಗಣೇಶ ಬಾಳಿಗ ಹೇಳಿದರು.
ಅವರು ಮಂಗಳವಾರ ಕೇಪು ಕಲ್ಲಂಗಳ ಸರಕಾರಿ ಪ್ರೌಢಶಾಲೆಯ ಶ್ರೀಕೃಷ್ಣ ಚೆನ್ನಂಗೋಡು ದ್ವಾರ, ಅಡ್ಯನಡ್ಕ ವೆಂಕಟೇಶ ಪೈ ಸಭಾಂಗಣ, ಪಲಿಮಾರು ಜನಾರ್ದನ ಪೈ ವೇದಿಕೆಯಲ್ಲಿ ಮಕ್ಕಳ ಲೋಕ, ಬಂಟ್ವಾಳ ತಾ| ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ನಡೆದ ಬಂಟ್ವಾಳ ತಾ| ಮಟ್ಟದ 13ನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದರು. ಮೊಬೈಲ್, ಆಂಗ್ಲ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಬಡವಾಗಿದೆ. ಮೊಬೈಲ್ ಹುಚ್ಚು ಬಿಟ್ಟು ಕನ್ನಡ ಸಾಹಿತ್ಯವನ್ನು ಎತ್ತರಕ್ಕೆ ಕೊಂಡೊಯ್ಯುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು.
ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಕನ್ನಡದ ಮಕ್ಕಳು ಯಾವತ್ತೂ ಹಿಂದೆ ಬಿದ್ದಿಲ್ಲ. ಸಾಹಿತ್ಯವನ್ನು ಓದಿ ಅದರ ಒಳತಿರುಳು ಅರ್ಥೈಸಿಕೊಂಡು ಆಳವಾದ ಜ್ಞಾನ ಪಡೆಯಬೇಕು ಎಂದರು.
ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಕೇಪು ಕಲ್ಲಂಗಳ ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಯಶಸ್ವಿ ಮಾತನಾಡಿದರು. ವಿದ್ಯಾರ್ಥಿನಿ ಅಕ್ಷತಾ ಕೆ.ಟಿ. ಅಭಿನಂದನ ಭಾಷಣ ಮಾಡಿದರು. ಮಾಣಿಲ ಶಾಲೆಗೆ ಸಾಹಿತ್ಯ ತಾರೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಮೇಶ್ ಎಂ. ಬಾಯಾರ್ ಅವರನ್ನು ಸಮ್ಮಾನಿಸಲಾಯಿತು.
ಜಿ.ಪಂ. ಸದಸ್ಯೆ ಜಯಶ್ರೀ ಕೊಡಂದೂರು, ತಾ.ಪಂ. ಸದಸ್ಯೆ ಕವಿತಾ ಸುಬ್ಬ ನಾಯ್ಕ, ಕೇಪು ಗ್ರಾ.ಪಂ. ಅಧ್ಯಕ್ಷ ತಾರಾನಾಥ ಆಳ್ವ, ಸ್ವಾಗತ ಸಮಿತಿಯ ಗೌರವಾಧ್ಯಕ್ಷ ವಿಟ್ಲ ಸುಬ್ರಾಯ ಪೈ,ಕಾರ್ಯಾಧ್ಯಕ್ಷ ಅಬ್ದುಲ್ ಕರೀಂ ಕುದ್ದುಪದವು, ಕೋಶಾಧಿಕಾರಿ ಬಾಲಕೃಷ್ಣ ಶೆಟ್ಟಿ ಬೇಂಗ್ರೋಡಿ, ಜತೆ ಕಾರ್ಯದರ್ಶಿ ಗೌರೀದೇವಿ, ಮಕ್ಕಳ ಲೋಕದ ಅಧ್ಯಕ್ಷ ಮಹಾಬಲ ಭಟ್ ನೆಗಳಗುಳಿ, ಭಾಸ್ಕರ ಅಡ್ವಳ, ಕಾರ್ಯದರ್ಶಿ ರಾಜಾರಾಮ ವರ್ಮ, ಕಲ್ಲಂಗಳ ಶಾಲೆ ಮುಖ್ಯೋಪಾಧ್ಯಾಯಿನಿ, ಪ್ರಧಾನ ಕಾರ್ಯದರ್ಶಿ ಮಾಲತಿ ಕಾಂತಡ್ಕ, ಕಾರ್ಯದರ್ಶಿ ರಮೇಶ್ ಎಂ.ಬಾಯಾರ್, ಮಾಣಿಲ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಭುವನೇಶ್ವರ್, ನಿವೃತ್ತ ಶಿಕ್ಷಕ, ಸಾಹಿತಿ ವಿ.ಮ. ಭಟ್ ಅಡ್ಯನಡ್ಕ ಉಪಸ್ಥಿತರಿದ್ದರು. ಅಂಕಿತಾ ಕೆ.ಎಂ. ಸ್ವಾಗತಿಸಿದರು. ಯುವರಾಜ ಎಂ. ನಿರೂಪಿಸಿದರು. ಅಮೃತಲಕ್ಷ್ಮೀ ವಂದಿಸಿದರು.
ಪೆರುವಾಯಿ ಶಾಲೆಯಲ್ಲಿ 14ನೇ ಸಮ್ಮೇಳನ
ಶತಮಾನೋತ್ಸವ ಸಂಭ್ರಮದಲ್ಲಿರುವ ಪೆರುವಾಯಿ ಕೊಲ್ಲತ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಡಳಿತ ಮಂಡಳಿ, ಶಾಲಾಭಿವೃದ್ಧಿ ಸಮಿತಿ ಹಾಗೂ ಮಕ್ಕಳ ಲೋಕ, ಸಾಹಿತ್ಯ ಪರಿಷತ್ ಸಹಕಾರದಲ್ಲಿ ತಾಲೂಕು ಮಟ್ಟದ 14ನೇ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯೋಪಾಧ್ಯಾಯ ಕುಂಞ ನಾಯ್ಕ ಘೋಷಿಸಿದರು.