Advertisement

ಹಲ್ಲೆಗೊಳಗಾಗಿದ್ದ ಆರೆಸ್ಸೆಸ್‌ ಕಾರ್ಯಕರ್ತ ಶರತ್‌ ಸಾವು

03:15 AM Jul 08, 2017 | Team Udayavani |

ಮಂಗಳೂರು: ಬಿ.ಸಿ. ರೋಡ್‌ನ‌ಲ್ಲಿ ಮಂಗಳವಾರ ರಾತ್ರಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಕಳೆದ ಮೂರು ದಿನಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ಸ್ಥಿತಿಯಲ್ಲಿದ್ದ ಶರತ್‌ ಮಡಿವಾಳ (28) ಅವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಸಾವನ್ನಪ್ಪಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ರೆಡ್ಡಿ ಅವರು ಶರತ್‌ ಕೊನೆ ಯುಸಿರೆಳೆದಿರುವ ವಿಚಾರವನ್ನು ಖಚಿತಪಡಿಸಿದರು. ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಬಿಗಿ ಪೊಲೀಸ್‌ ಬಂದೋಬಸ್ತು ನಡುವೆಯೂ ಬಿ.ಸಿ.ರೋಡ್‌ನ‌ಲ್ಲಿ ಜು. 4ರಂದು ಶರತ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು.

Advertisement


ಸಜಿಪಮುನ್ನೂರು ಗ್ರಾಮದ ಮಡಿವಾಳಪಡ್ಪು ನಿವಾಸಿ ತನಿಯಪ್ಪ ಮಡಿವಾಳ ಅವರ ಪುತ್ರ ಶರತ್‌ ಮಂಗಳವಾರ ರಾತ್ರಿ ಬಿ.ಸಿ.ರೋಡ್‌ನ‌ಲ್ಲಿರುವ ತನ್ನ ಲಾಂಡ್ರಿ ಅಂಗಡಿಯನ್ನು ಬಂದ್‌ ಮಾಡುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ಮಾರಕಾಯುಧಗಳಿಂದ ಕಡಿದು ಚೂರಿಯಿಂದ ಇರಿದು ಪರಾರಿಯಾಗಿದ್ದರು. ತೀವ್ರ ಗಾಯಗೊಂಡ ಶರತ್‌ ಅವರ ಬೊಬ್ಬೆ ಕೇಳಿ ಹತ್ತಿರದಲ್ಲಿದ್ದ ಸ್ವೀಟ್‌ ಸ್ಟಾಲ್‌ ಮಾಲಕ ಪ್ರವೀಣ್‌ ಮಂಗಳೂರಿನ ಪೊಲೀಸ್‌ ಕಂಟ್ರೋಲ್‌ ರೂಂ ಮತ್ತು ಬಂಟ್ವಾಳ ನಗರ ಠಾಣೆಗೆ ಮಾಹಿತಿ ನೀಡಿದ್ದರು. ಅಷ್ಟರಲ್ಲಿ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಜ್ಜಿಬೆಟ್ಟು ನಿವಾಸಿ ಜಿತೇಂದ್ರ ಕೋಟ್ಯಾನ್‌ ಮತ್ತು ಮಿತ್ರರು ಸಮೀಪದ ಹಣ್ಣಿನಂಗಡಿಯ ಮಾಲಕ ರಿಕ್ಷಾ ಚಾಲಕ ಅಬ್ದುಲ್‌ ರವೂಫ್‌ ಅವರ ಸಹಾಯದಿಂದ ರಿಕ್ಷಾದಲ್ಲಿ ಕೂಡಲೇ ತುಂಬೆ ಆಸ್ಪತ್ರೆಗೆ ದಾಖಲಿಸಿದ್ದರು. ಅವರ ದೇಹಸ್ಥಿತಿ ಗಂಭೀರವಾಗಿದ್ದರಿಂದ ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ತಲೆ ಮತ್ತು ಕುತ್ತಿಗೆಯ ನಡುವೆ ಬಲವಾದ ಏಟು ಬಿದ್ದಿದ್ದು, ತೀವ್ರ ರಕ್ತ ಸ್ರಾವವಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಅಗತ್ಯವಾದ ರಕ್ತ ಪೂರೈಸಲು ವ್ಯವಸ್ಥೆ ಮಾಡಿದ್ದು, ಕಳೆದ ಮೂರು ದಿನಗಳಿಂದ ಆಸ್ಪತ್ರೆಯ ತೀವ್ರ ನಿಗಾ ಕೊಠಡಿಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಆಸ್ಪತ್ರೆಯಲ್ಲಿದ್ದಾಗ ಅನೇಕ ಮಂದಿ ಮುಖಂಡರು ಶರತ್‌ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದರು.

ಬಂಟ್ವಾಳ ತಾಲೂಕಿನಲ್ಲಿ ಕಳೆದ ಸುಮಾರು 2 ತಿಂಗಳುಗಳಿಂದ ಅಹಿತಕರ ಘಟನೆಗಳು ಸಂಭವಿಸುತ್ತಲೇ ಇದ್ದು, ನಿಷೇಧಾಜ್ಞೆ ಜಾರಿಯಲ್ಲಿದೆ. ಕರೋಪಾಡಿ ಪಂಚಾಯತ್‌ ಉಪಾಧ್ಯಕ್ಷ ಜಲೀಲ್‌ ಕೊಲೆ ಪ್ರಕರಣದ ಬಳಿಕ ಅನೇಕ ಘಟನೆಗಳು ನಡೆಯುತ್ತಾ ಬಂದಿದ್ದು, ಒಟ್ಟಾರೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿತ್ತು. ಕಲ್ಲಡ್ಕದಲ್ಲಿ ಚೂರಿ ಇರಿತದ ಪ್ರಕರಣದ ಬಳಿಕ ನಿಷೇಧಾಜ್ಞೆ ಜಾರಿಯಲ್ಲಿರುವಾಗಲೇ ಬೆಂಜನಪದವಿನಲ್ಲಿ ಎಸ್‌ಡಿಪಿಐ ಮುಖಂಡ ಅಶ್ರಫ್‌ ಕೊಲೆ ಸಂಭವಿಸಿತ್ತು. ಅದರ ಆರೋಪಿಗಳನ್ನು ಬಂಧಿಸಲಾಗಿದ್ದು, ಆ ಬಳಿಕ ನಿಷೇಧಾಜ್ಞೆ ಜಾರಿ ಯಲ್ಲಿರುವಾಗಲೇ ಆರೆಸ್ಸೆಸ್‌ ಕಾರ್ಯಕರ್ತ ಶರತ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು.

ಪೊಲೀಸ್‌ ಭದ್ರತೆ: ನಿಷೇಧಾಜ್ಞೆ ಜಾರಿಯಲ್ಲಿರುವಾಗಲೇ ಬಂಟ್ವಾಳ ತಾಲೂಕಿನಲ್ಲಿ ದುಷ್ಕೃತ್ಯಗಳು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆ. ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕುಗಳಲ್ಲಿ ಸಿಆರ್‌ಪಿಸಿ ಸೆಕ್ಷನ್‌ 144ರನ್ವಯ ನಿಷೇಧಾಜ್ಞೆ ಜೂ. 11ರವರೆಗೆ ಜಾರಿಯಲ್ಲಿದೆ. ಜಿಲ್ಲೆಯ ಪೊಲೀಸರ ಹೊರತಾಗಿ ಪಕ್ಕದ ಕೊಡಗು, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಪೊಲೀಸರನ್ನು ಕರೆಸಿ ನಿಯೋಜಿಸಲಾಗಿದೆ.

ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಭೇಟಿ ನೀಡಿದ್ದು, ಮಂಗಳೂರಿನಲ್ಲಿ ಕಾಂಗ್ರೆಸ್‌ ಪಕ್ಷದ ಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಶುಕ್ರವಾರ ಬೆಳಗ್ಗೆ ಬಿ.ಸಿ. ರೋಡ್‌ನ‌ಲ್ಲಿ ಹಿಂದೂ ಸಂಘಟನೆಗಳು ನಿಷೇಧಾಜ್ಞೆಯ ನಡುವೆಯೂ ಪ್ರತಿಭಟನ ಸಭೆ ನಡೆಸಿದ್ದು, ನಾಯಕರು ಮತ್ತು ಕಾರ್ಯಕರ್ತರು ಬಂಧನಕ್ಕೊಳಗಾಗಿ ಬಿಡುಗಡೆಯಾಗಿದ್ದಾರೆ. ಮುಖ್ಯಮಂತ್ರಿಯವವರು ಸಂಜೆ ಹೊತ್ತು ಅಡ್ಯಾರ್‌ನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿಯೇ ಶರತ್‌ ಸಾವಿಗೀಡಾಗಿರುವುದನ್ನು ಘೋಷಿಸಲಾಗಿದೆ. ಶರತ್‌ ಸಾವನ್ನಪ್ಪಿರುವುದರಿಂದ ಹಾಗೂ ಶನಿವಾರ ಮೃತ ದೇಹವನ್ನು ಬಂಟ್ವಾಳಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯುವ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಹೆಚ್ಚಿನ ಪೊಲೀಸ್‌ ಭದ್ರತೆಯನ್ನು ಮತ್ತಷ್ಟು ಬಿಗುಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿಯಾಗುತ್ತಿದ್ದಂತೆ ಪೊಲೀಸರು ಬಿ.ಸಿ.ರೋಡ್‌ ನಗರದ ಅಂಗಡಿಗಳನ್ನು ಮುಚ್ಚಿಸಿದ್ದಾರೆ.

Advertisement

ಏಕೈಕ ಪುತ್ರ ಶರತ್‌
ಶರತ್‌ ಅವರ ತಂದೆ ತನಿಯಪ್ಪ ಬಿ.ಸಿ. ರೋಡ್‌ನ‌ಲ್ಲಿ ಲಾಂಡ್ರಿ ಅಂಗಡಿ ನಡೆಸುತ್ತಿದ್ದು, ಹಗಲು ಹೊತ್ತು ಅವರೇ ಇರುತ್ತಿದ್ದರು. ಸಂಜೆ ಬಳಿಕ ಅವರ ಏಕೈಕ ಪುತ್ರ ಶರತ್‌ ವ್ಯವಹಾರ ನೋಡಿ ಕೊಳ್ಳುತ್ತಿದ್ದರು. ಮಂಗಳವಾರ ಎಂದಿನಂತೆ ರಾತ್ರಿ 9.30ಕ್ಕೆ ಅಂಗಡಿ ಮುಚ್ಚುತ್ತಿದ್ದಾಗ ದುಷ್ಕರ್ಮಿಗಳು ಶರತ್‌ ಮೇಲೆ ದಾಳಿ ನಡೆಸಿದ್ದರು. ಶರತ್‌ ಅವರು ತಂದೆ, ತಾಯಿ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಶರತ್‌ ಹತ್ಯೆಗೆ ಮುಸ್ಲಿಂ ಸಂಘಟನೆಗಳ ಖಂಡನೆ
ಮಂಗಳೂರು:
ದುಷ್ಕರ್ಮಿಗಳು ಬಿ.ಸಿ.ರೋಡಿನಲ್ಲಿ ಶರತ್‌ ಎಂಬ ಯುವಕನ ಮೇಲೆ ಮರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ ಎಂದು ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ತಿಳಿಸಿದೆ. ಪೊಲೀಸರು ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಹಚ್ಚುವಂತೆ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್‌ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಖಂಡನೆ
ಉಡುಪಿ:
ಬಿ.ಸಿ.ರೋಡ್‌ನ‌ಲ್ಲಿ ನಡೆದ ಶರತ್‌ ಅವರ ಕೊಲೆ ಘಟನೆಯನ್ನು ಹಿಂದೂ ಜನಜಾಗೃತಿ ಸಮಿತಿ ಖಂಡಿಸಿದೆ.

ಸಚಿವರ ಹೇಳಿಕೆ ಖಂಡನೀಯ: ಅಂಗಾರ
ಮಂಗಳೂರು:
ಬಂಟ್ವಾಳದಲ್ಲಿ ಹಿಂದೂ ಯುವಕರ ಕೊಲೆ ಯತ್ನ, ನಿರಂತರ ಹಲ್ಲೆ ಪ್ರಕರಣಗಳು ನಡೆಯುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಎಸ್‌ಡಿಪಿಐ ರಾಷ್ಟ್ರದ್ರೋಹಿ ಸಂಘಟನೆ ಎನ್ನುವ ಅರಿವು ಸಚಿವರಿಗೆ ಇರಬೇಕೆಂದು ಸುಳ್ಯ ಶಾಸಕ ಎಸ್‌. ಅಂಗಾರ ತಿಳಿಸಿದ್ದಾರೆ. ಸಚಿವರು ಗಲಭೆಯಲ್ಲಿ ಕಾಂಗ್ರೆಸ್‌ ಪಾತ್ರವಿಲ್ಲ ಎನ್ನುತ್ತಿದ್ದಾರೆ. ಎಸ್‌ಡಿಪಿಐ ಜತೆ ಬಿಜೆಪಿ ಹೆಸರು ಸೇರಿಸಿ ಗಲಭೆಗೆ ಕಾರಣ ಎಂದು ಆರೋಪಿಸಿದ್ದಾರೆ. ಸಚಿವರ ಈ ಹೇಳಿಕೆ ಖಂಡನೀಯ. ಬಿಜೆಪಿ ರಾಷ್ಟ್ರ  ಪ್ರೇಮಿಗಳ ಪಕ್ಷ. ಎಸ್‌ಡಿಪಿಐ ರಾಷ್ಟ್ರದ್ರೋಹಿ ಸಂಘಟನೆ ಎನ್ನುವುದು ನಾಡಿನ ಪ್ರಜ್ಞಾವಂತ ಜನರಿಗೆ ತಿಳಿದಿದೆ. ರಾಷ್ಟ್ರದ್ರೋಹಿ ಸಂಘಟನೆಗೆ ಕಾಂಗ್ರೆಸ್‌ ಪರೋಕ್ಷ ಬೆಂಬಲ ನೀಡುತ್ತಿದೆ. ಎಂದು ಅವರು ಪ್ರಕಟನೆಯಲ್ಲಿ ಆರೋಪಿಸಿದ್ದಾರೆ.

ಶರತ್‌ ಕುಟುಂಬಕ್ಕೆ ನೆರವು: ಭಟ್‌
ಮಂಗಳೂರು:
ಶರತ್‌ ಅವರು ಸಾವನ್ನಪ್ಪಿದ ಬಗ್ಗೆ ಡಾ| ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರು ಪ್ರತಿಕ್ರಿಯೆ ನೀಡಿ ‘ನಾವು ಉತ್ತಮ ಕಾರ್ಯಕರ್ತರನ್ನೊಬ್ಬರನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ ಸೂಕ್ತ ನೆರವು ನೀಡಲಾಗುವುದು’ ಎಂದು ತಿಳಿಸಿದ್ದಾರೆ.

ನಳಿನ್‌ ಖಂಡನೆ
ಮಂಗಳೂರು:
ಶರತ್‌ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಸಂಸದ ನಳಿನ್‌ ಕುಮಾರ್‌ ಅವರು ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next