Advertisement

ಬಂಟ್ವಾಳ-ಸಿದ್ದಕಟ್ಟೆ ರಸ್ತೆಯ ಹಲವು ವ್ಯಥೆ

11:04 PM Jun 06, 2019 | mahesh |

ಪುಂಜಾಲಕಟ್ಟೆ: ಮಳೆಗಾಲ ಪೂರ್ವಭಾವಿಯಾಗಿ ಸಂಬಂಧಪಟ್ಟ ಇಲಾಖೆಗಳು ಇನ್ನೂ ಸಿದ್ಧತೆಗಳನ್ನು ನಡೆಸದ ಪರಿಣಾಮ ಬಂಟ್ವಾಳ-ಮೂಡುಬಿದಿರೆ ರಸ್ತೆ ಸಮಸ್ಯೆಗಳ ತಾಣವಾಗಿದೆ.

Advertisement

ಈ ರಸ್ತೆಯ ಬಂಟ್ವಾಳದಿಂದ ಪುಚ್ಚೆಮೊಗರುವರೆಗೆ ಬಂಟ್ವಾಳ ತಾಲೂಕಿಗೆ ಸಂಬಂಧಿಸಿ ಚರಂಡಿಗಳ ನಿರ್ವಹಣೆಯಾಗಿಲ್ಲ. ಕಳೆದ ವರ್ಷ ಈ ಹೊತ್ತಿಗೆ ಮಳೆಗಾಲದಲ್ಲಿ ರಸ್ತೆಯ ಸ್ಥಿತಿ ಶೋಚನೀಯವಾಗಿ ಪ್ರಯಾಣಿಕರು, ವಾಹನಗಳು ಪರದಾಡುವ ಸ್ಥಿತಿ ಎದುರಾಗಿತ್ತು. ಈ ಬಾರಿ ಮತ್ತೆ ಮಳೆಗಾಲ ಆರಂಭವಾಗಲಿದೆ. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ.

ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಈ ರಸ್ತೆ ಜಿಲ್ಲಾ ಮುಖ್ಯ ರಸ್ತೆಯಾಗಿದ್ದು, ಕಾರ್ಕಳ-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಲಿದೆ ಎಂದು ಘೋಷಣೆಯಾಗಿದೆ. ಪ್ರಸ್ತುತ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿವೆ. ಕಳೆದ ಬಾರಿಯೂ ರಸ್ತೆ ಚರಂಡಿ ಸರಿಯಾಗಿಲ್ಲದ ಕಾರಣ ರಸ್ತೆ‌ಯಲ್ಲಿ ನೀರು ಹರಿದು ಹೋಗಿ ರಸ್ತೆ ಬದಿ ಹೊಂಡಕ್ಕೆ ಕಾರಣವಾಗಿತ್ತು ಬುಧವಾರ ರಾತ್ರಿ ಸುರಿದ ಮಳೆಗೆ ಕೆಲವೆಡೆ ಕಚ್ಚಾ ಒಳ ರಸ್ತೆಯ ಮಣ್ಣು ಕೊಚ್ಚಿ ಹೋಗಿ ಮುಖ್ಯ ರಸ್ತೆಗೆ ಸೇರಿ ಕೆಸರುಮಯವಾಗಿದೆ. ಇಳಿಜಾರು ತಿರುವು ರಸ್ತೆಯಲ್ಲಿ ಇದು ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ಬೇಸಗೆಯಲ್ಲಿ ವಿವಿಧ ಕಾರಣಗಳಿಗೆ ರಸ್ತೆ ಬದಿ ಮಣ್ಣು ತೆಗೆದು ಹಾಗೇ ಬಿಟ್ಟಿದ್ದರಿಂದ ಮಳೆ ಬರುತ್ತಿದ್ದಂತೆ ರಸ್ತೆಗೆ ಬಂದು ಸೇರಿದೆ. ಪೈಪ್‌ಲೈನ್‌ಗಾಗಿ ತೆಗೆದ ಗುಂಡಿಗಳು ಬಾಯ್ದೆರೆಯತೊಡಗಿವೆ.

ಬಂಟ್ವಾಳ ಪುರಸಭೆ ವ್ಯಾಪ್ತಿ ಸಹಿತ ಅಮಾrಡಿ, ಪಂಜಿಕಲ್ಲು, ರಾಯಿ, ಸಂಗಬೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಈ ರಸ್ತೆ ಹಾದು ಹೋಗುತ್ತಿದ್ದು, ನಿರ್ವಹಣೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದಾಗಿದೆ. ಕಳೆದ ಬಾರಿ ಹದಗೆಟ್ಟಿದ್ದ ರಸ್ತೆಗೆ ಮರು ಡಾಮರು ಕಾಮಗಾರಿ ನಡೆದಿದೆ. ಆದರೆ ಕೆಲವೆಡೆ ಗುಂಡಿ ಬೀಳಲಾರಂಭವಾಗಿದ್ದು, ಮಳೆಗಾಲದಲ್ಲಿ ರಸ್ತೆ ಹೊಂಡಗಳಾಗುವ ಆತಂಕವಿದೆ.

ರಸ್ತೆ ಬದಿಯ ಗಿಡ, ಕುರುಚಲು ಗಿಡಗಳು, ಬಳ್ಳಿಗಳನ್ನು ತೆಗೆದು ಚರಂಡಿ ಹೂಳು ತೆರವು ಗೊಳಿಸಿದಲ್ಲಿ ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿದು ಹೋಗಲು ಸಾಧ್ಯವಾಗುತ್ತದೆ. ಅಣ್ಣಳಿಕೆ ಬಳಿ ಇಳಿಜಾರು, ತಿರುವಿನಲ್ಲಿ ಡಾಮರು ರಸ್ತೆಗೆ ತಾಗಿಕೊಂಡು ಚರಂಡಿಯಿದ್ದು, ಅಪಾಯಕಾರಿಯಾಗಿದೆ.

Advertisement

ಕೆಲವೆಡೆ ರಸ್ತೆಯ ಎಚ್ಚರಿಕೆ ಸೂಚನಾ ಫಲಕಗಳಿಗೆ ಬಳ್ಳಿ ಸುತ್ತಿ ಕಾಣದಂತಾಗಿದೆ. ರಸ್ತೆ ಬದಿ ಬಳ್ಳಿ ಹರಡಿ ಪಾದಚಾರಿಗಳು ನಡೆದಾಡದಂತಾಗಿದೆ.

ರಸ್ತೆ ಬದಿ ತ್ಯಾಜ್ಯ
ಅಲ್ಲಲ್ಲಿ ರಸ್ತೆ ಬದಿ ಎಸೆದ ತ್ಯಾಜ್ಯಗಳು, ಪ್ಲಾಸ್ಟಿಕ್‌ ಬಾಟಲ್‌ಗ‌ಳು, ಪ್ಲಾಸ್ಟಿಕ್‌ ಚೀಲಗಳು ಚರಂಡಿಯನ್ನು ಮುಚ್ಚಿ ಹಾಕಿವೆ. ಇದನ್ನು ತೆರವುಗೊಳಿಸದಿದ್ದಲ್ಲಿ ಅನಾರೋಗ್ಯಕ್ಕೂ ಕಾರಣವಾಗಬಹುದು. ಜನಪ್ರತಿನಿಧಿ ಗಳು ಈ ಬಗ್ಗೆ ಕೂಡಲೇ ಸ್ಪಂದಿಸಿ ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖಾಧಿಕಾರಿಗಳಿಗೆ ಸೂಚಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next