ಬಂಟ್ವಾಳ : ಶಾಲಾ ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಸ್ವಚ್ಛ ಶನಿವಾರ ಕಾರ್ಯಕ್ರಮಕ್ಕೆ ಕ್ಷೇತ್ರ ಸಂಪನ್ಮೂಲ ಕೇಂದ್ರ ವೇಳಾಪಟ್ಟಿ ರೂಪಿಸಿದೆ.
ಕಳೆದ ವರ್ಷ ಸ್ವಚ್ಛತೆ ಉದ್ದೇಶದ ಕೈತೊಳೆಯುವ 8 ವಿಧಾನಗಳ ಪ್ರಾತ್ಯಕ್ಷಿಕೆಯನ್ನು ಎಲ್ಲ ಶಾಲೆಗಳಲ್ಲಿ ಹಮ್ಮಿಕೊಂಡು ಯಶಸ್ವಿಯಾಗಿತ್ತು. ಅದರಿಂದ ಪ್ರೇರಿತರಾಗಿ ಕಳೆದ ವರ್ಷವೇ ಸ್ವಚ್ಛತಾ ಅರಿವು ಕಾರ್ಯಕ್ರಮ ಅನುಷ್ಠಾನಕ್ಕೆ ಬಂದಿತ್ತು. ಪ್ರಸ್ತುತ ವರ್ಷಕ್ಕೆ ಅದನ್ನು ಜೂನ್ ಮೊದಲ ವಾರದಿಂದ ಮತ್ತಷ್ಟು ಪರಿಷ್ಕರಿಸಿ ಸ್ವಚ್ಛತಾ ನೀತಿ ರಚನೆ, ಶಾಲಾ ಪರಿಸರದಲ್ಲಿ ಗಿಡ ನೆಡುವುದು, ಮಲಿನ ನೀರು ನಿಲ್ಲದಂತೆ ವ್ಯವಸ್ಥೆ ಮಾಡುವುದು, ಮಳೆಗಾಲದಲ್ಲಿ ಹರಡುವ ರೋಗ-ರುಜಿನಗಳನ್ನು ತಡೆಗಟ್ಟುವ ಬಗ್ಗೆ ಮಾಹಿತಿ, ಸ್ವಚ್ಛತೆ ಬಗ್ಗೆ ಕವನ ರಚನೆಯಂತಹ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬಂದಿವೆ.
ಜಿ.ಪಂ. ಸಿಇಒ ಡಾ| ಎಂ.ಆರ್. ರವಿ ಮಾರ್ಗದರ್ಶನದಲ್ಲಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ರಾಜೇಶ್ ಮಕ್ಕಳಲ್ಲಿ ಸ್ವಚ್ಛತೆ ಅರಿವು ಮೂಡಿಸುವ ಕಾರ್ಯಕ್ಕೆ ವೇಳಾಪಟ್ಟಿ ನಿಗದಿ ಮಾಡಿದ್ದಾರೆ. ವೇಳಾಪಟ್ಟಿಯಂತೆ ಮಳೆ ನೀರಿನ ಕೊಯ್ಲು ಶಿಕ್ಷಕರಿಂದ ಮಾಹಿತಿ, ಪ್ರಾತ್ಯಕ್ಷಿಕೆ, ಸ್ವಚ್ಛತೆಯಲ್ಲಿ ವಿದ್ಯಾರ್ಥಿಗಳ ಕುರಿತ ಭಾಷಣ ಸ್ಪರ್ಧೆ, ಕಸ ದಿಂದ ರಸ ಕಾರ್ಯಾಗಾರ, ಆಹಾರ ಪೋಲು ಮಾಡದಂತೆ ಜಾಗೃತಿ, ಪ್ಲಾಸ್ಟಿಕ್ ಬಳಕೆ ನಿಷೇಧ ಬಗ್ಗೆ ಅರಿವು, ಸ್ವಚ್ಛ ಭಾರತ ನನ್ನ ಕೊಡುಗೆ ಪ್ರಬಂಧ ಸ್ಪರ್ಧೆ, ತ್ಯಾಜ್ಯ ಪುನರ್ಬಳಕೆ, ವಿಲೇ ವಾರಿ ತಿಳಿವಳಿಕೆ, ಶೌಚಾಲಯ ಬಳಕೆ, ಆರೋಗ್ಯ ಬಗ್ಗೆ ಚರ್ಚೆ, ಪರಿಸರ ಬಗ್ಗೆ ರಸಪ್ರಶ್ನೆ, ಆರೋಗ್ಯಾಧಿಕಾರಿಗಳೊಂದಿಗೆ ಸಂವಾದ, ಜಾಗೃತಿ ಜಾಥಾ, ಕೈತೊಳೆಯುವ ಅಭ್ಯಾಸ ಪ್ರಾತ್ಯಕ್ಷಿಕೆ, ಚುಟುಕು ರಚನೆ, ಕಸ ವಿಂಗಡಣೆ, ಅರಿವು, ಮನೆ ಮನೆ ಭೇಟಿ, ಸಾಂಸ್ಕೃತಿಕ ಕಾರ್ಯಕ್ರಮ, ಪ್ಲಾಸ್ಟಿಕ್ ಕುರಿತು ಜಾಗೃತಿ, ಕೃಷಿಕರ ತಂತ್ರಜ್ಞಾನದ ಮಾಹಿತಿ,ಸ್ವಚ್ಛತೆ ಅರಿವು ವಾರ್ಷಿಕ ಕ್ರಿಯಾ ಯೋಜನೆಯಲ್ಲಿದೆ.
ಪ್ರೇರಣೆ
ಸ್ವಚ್ಛ ಶನಿವಾರ ಕಲ್ಪನೆಯಂತೆ ಸ್ವಚ್ಛತೆ, ಅದಕ್ಕೆ ಸಂಬಂಧಿಸಿ ಜಾಗೃತಿ ಚಟುವಟಿಕೆಗಳನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳಲು ಇದೇ ಜೂನ್‌ನಿಂದ 2019ರ ಫೆಬ್ರವರಿ ತನಕ ವೇಳಾಪಟ್ಟಿ ನೀಡಲಾಗಿದೆ. ಪಟ್ಟಿಯಂತೆ ಯಾವುದಾದರೂ ಕಾರ್ಯಕ್ರಮ ನಡೆಸಬಹುದು. ವಿದ್ಯಾರ್ಥಿಗಳಿಗೆ ಇದರಿಂದ ಸ್ವಚ್ಛತೆ ಅರಿವು ಆಗುವುದು. ಇದೊಂದು ಸ್ವಚ್ಛತೆ ಬಗೆಗಿನ ಅಭಿಯಾನ ಆಗಬೇಕು.
- ಎನ್. ಶಿವಪ್ರಕಾಶ್
ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ