Advertisement

2 ವರ್ಷ ಕಳೆದರೂ ಬಂಟ್ವಾಳ ಎಆರ್‌ಟಿಒಗೆ ಪರ್ಮಿಟ್‌ ನೀಡುವ ಅಧಿಕಾರವಿಲ್ಲ!

02:08 PM Jan 04, 2021 | Team Udayavani |

ಬಂಟ್ವಾಳ: ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳನ್ನು ಒಳಗೊಂಡಂತೆ ಬಂಟ್ವಾಳ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ (ಎಆರ್‌ಟಿಒ) ಮಂಜೂರುಗೊಂಡು 2 ವರ್ಷಗಳೇ ಕಳೆದರೂ ಎಆರ್‌ಟಿಒ ಅವರು ವಾಣಿಜ್ಯ ವಾಹನಗಳಿಗೆ ಪರವಾನಿಗೆ (ಪರ್ಮಿಟ್‌) ನೀಡುವ ಅಧಿಕಾರ ಹೊಂದಿಲ್ಲ!

Advertisement

ಕಳೆದ ಡಿಸೆಂಬರ್‌ ಪ್ರಾರಂಭದಲ್ಲಿ ಪದೋನ್ನತಿ ಹೊಂದಿ ಬಂಟ್ವಾಳಕ್ಕೆ ಬಂದ ಎಆರ್‌ಟಿಒ ಪರ್ಮಿಟ್‌ ನೀಡುವುದನ್ನು ನಿಲ್ಲಿಸಿ, ರಸ್ತೆ ಸಾರಿಗೆ ಪ್ರಾಧಿಕಾರ(ಆರ್‌ಟಿಎ)ದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದು, ಅವರಿಂದ ಅನುಮತಿ ಸಿಕ್ಕ ಬಳಿಕವೇ ಹಳದಿ ಬೋರ್ಡ್‌ಗಳನ್ನು ಒಳಗೊಂಡಿರುವ ವಾಣಿಜ್ಯ ವಾಹನಗಳಿಗೆ ಪರ್ಮಿಟ್‌ ನೀಡಲು ಅರ್ಹರಾಗುತ್ತಾರೆ.
ಆದರೆ ಬಂಟ್ವಾಳದಲ್ಲಿ ಈ ಹಿಂದೆ ವಾಣಿಜ್ಯ ವಾಹನಗಳಿಗೆ ಪರ್ಮಿಟ್‌ ನೀಡಲಾಗಿದ್ದು, ಅದು ಕಾನೂನು ಪ್ರಕಾರ ಸಿಂಧುವೇ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಯಾವುದೇ ಜಿಲ್ಲೆಯಲ್ಲಿ

ಹೊಸ ಸಾರಿಗೆ ಕಚೇರಿ ಆರಂಭ ವಾಗುವ ಸಂದರ್ಭದಲ್ಲಿ ರಸ್ತೆ ಸಾರಿಗೆ ಪ್ರಾಧಿಕಾರದ ಕಾರ್ಯ ದರ್ಶಿಗಳ ಮೂಲಕ ಅರ್ಜಿ ಸಲ್ಲಿಸಿ ಬಳಿಕ ಪ್ರಾಧಿಕಾರದ ಅಧ್ಯಕ್ಷರಿಂದ ಅಧಿಕಾರ ಪ್ರತಿಯೋಜನೆ (ಡೆಲಿಗೇಶನ್‌) ಪಡೆಯಬೇಕಾಗುತ್ತದೆ. ಆದರೆ ಬಂಟ್ವಾಳದಲ್ಲಿ ಇದಾಗದ ಪರಿಣಾಮ ವಾಹನ ಪರ್ಮಿಟ್‌ಗೆ ಸಂಬಂಧಿಸಿದ ಟ್ರಾನ್ಸ್‌ ಫರ್‌, ಸರಂಡರ್‌, ಹೊಸ ಪರ್ಮಿಟ್‌ ಸಹಿತ ಯಾವುದೇ ವ್ಯವಹಾರಗಳು ನಡೆಯುತ್ತಿಲ್ಲ.

ಇದನ್ನೂ ಓದಿ:ಕೃಷಿಕರಲ್ಲಿ ಆತಂಕ ಮೂಡಿಸಿದ ವರ್ಷದ ಮೊದಲ ಮಳೆ

ಆರ್‌ಟಿಎ ಸಭೆಯಲ್ಲಿ ನಿರ್ಣಯ
ಎಆರ್‌ಟಿಒ ಅವರು ಡಿ. 1ರಂದು ಬಂಟ್ವಾಳದಲ್ಲಿ ಅಧಿಕಾರ ವಹಿಸಿ ಕಡತ ಪರಿಶೀಲನೆಯ ವೇಳೆ ಡೆಲಿಗೇಶನ್‌ ಪಡೆಯದೇ ಇರುವ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಡಿ. 4ರಂದು ನಡೆದ ಪ್ರಾಧಿಕಾರ (ಆರ್‌ಟಿಒ)ದ ಸಭೆಯಲ್ಲಿ ಭಾಗವಹಿಸಿ ಅಧಿಕಾರ ಪ್ರತಿಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಜಿಲ್ಲಾಧಿಕಾರಿಗಳು ಆ ದಿನದ ಅಜೆಂಡಾದಲ್ಲಿ ಸೇರಿಸಿ ಅನುಮತಿ ಕೊಡಬಹುದು ಎಂದು ಸಭೆ ನಿರ್ಣಯಿಸಿದೆ. ಅದರಂತೆ ಪ್ರಾಧಿಕಾರದ ಕಾರ್ಯದರ್ಶಿಯವರು ಸಭೆಯ ನಡವಳಿಗಳನ್ನು ಡಿಸಿಗೆ ಸಲ್ಲಿಸಿದ್ದಾರೆ. ಪ್ರಸ್ತುತ ನಡವಳಿಗಳು ಡಿಸಿ ಕಚೇರಿಯಲ್ಲಿವೆ.

Advertisement

ಮಂಗಳೂರಿನಿಂದ ಪರ್ಮಿಟ್‌!
ಬಂಟ್ವಾಳದಲ್ಲಿ ಸಾರಿಗೆ ಕಚೇರಿ ಇದ್ದರೂ ವಾಣಿಜ್ಯ ವಾಹನಗಳ ಅನುಮತಿಗೆ ಮಂಗಳೂರು ಆರ್‌ಟಿಒಕ್ಕೆ ಅಲೆಯಬೇಕು. ಜನತೆಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಇಲ್ಲಿನ ಎಆರ್‌ಟಿಒ ಅವರು ಮಂಗಳೂರು ಆರ್‌ಟಿಒಗೆ ಪತ್ರ ಬರೆದು ಪರ್ಮಿಟ್‌ ನೀಡುವಂತೆ ಮಾಡುತ್ತಿದ್ದಾರೆ. ಆದರೆ ಬಂಟ್ವಾಳ ಕಚೇರಿ ವ್ಯಾಪ್ತಿಯ ಜನತೆ ಅಧಿಕಾರಿಗಳ ಎಡವಟ್ಟಿನಿಂದ ಹಿಂದಿನಂತೆಯೇ ಮಂಗಳೂರಿನಿಂದ ಪರ್ಮಿಟ್‌ ಪಡೆಯಬೇಕಾದ ಸ್ಥಿತಿ ಇದೆ.

ಪರ್ಮಿಟ್‌ಗೆ ಸಂಬಂಧಿಸಿ ಹಿಂದಿನ ಗೊಂದಲಗಳನ್ನು ಸರಿಮಾಡುವ ಉದ್ದೇಶದಿಂದ ಪ್ರಸ್ತುತ ಪರ್ಮಿಟ್‌ ವ್ಯವಹಾರಗಳನ್ನು ನಿಲ್ಲಿಸಿದ್ದು, ಆರ್‌ಟಿಎ ಸಭೆಯಲ್ಲಿ ಪರ್ಮಿಟ್‌ ನೀಡುವ ಅಧಿಕಾರ ಪ್ರತೀ ಯೋಜನೆಗೆ ಅರ್ಜಿ ಹಾಕಲಾಗಿದೆ. ಪ್ರಸ್ತುತ ಜನತೆಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮಂಗಳೂರು ಆರ್‌ಟಿಒಗೆ ಕಳುಹಿಸಿ ಪರವಾನಿಗೆ ನೀಡುವ ಕಾರ್ಯ ಮಾಡಲಾಗುತ್ತಿದೆ.
– ಜಾನ್‌ ಮಿಸ್ಕಿತ್‌, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಬಂಟ್ವಾಳ

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next