ಬಂಟ್ವಾಳ: ನರಿಕೊಂಬು ಗ್ರಾಮದ ಅಂತರದ ಗುಡ್ಡವೊಂದರಲ್ಲಿ ಮಂಗಳವಾರ ಅಪರಿಚಿತ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕಳೆದ ಕೆಲವು ದಿನಗಳ ಹಿಂದೆಯೇ ಘಟನೆ ನಡೆದಿರುವುದರಿಂದ ದೇಹ ಕೊಳೆತಿತ್ತು.
ಸುಮಾರು 40ರಿಂದ 50ರ ವಯಸ್ಸಿನ ಪುರುಷನ ಮೃತದೇಹವಾಗಿದ್ದು, ಕೊಳೆತಿರುವುದರಿಂದ ಗುರುತು ಪತ್ತೆ ಕೂಡ ಅಸಾಧ್ಯವಾಗಿದೆ. ಅಂತರ ಗುಡ್ಡದ ಪಕ್ಕದ ಜಮೀನಿನವರು ತೋಟಕ್ಕೆ ನೀರು ಬಿಡುವುದಕ್ಕೆ ತೆರಳಿದ ಸಂದರ್ಭ ದುರ್ನಾತ ಬೀರುವುದನ್ನು ಕಂಡು ಪರಿಶೀಲಿಸಿದಾಗ ಮೃತದೇಹ ಮರದಲ್ಲಿ ನೇತಾಡುತ್ತಿರುವುದು ಗಮನಕ್ಕೆ ಬಂದಿದೆ.
ಘಟನ ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ತೆರಳಿ ಪರಿಶೀಲಿಸಿದ್ದು, ವ್ಯಕ್ತಿ ಮೃತಪಟ್ಟು 10 ದಿನಗಳಾಗಿರುವ ಕುರಿತು ಅಂದಾಜಿಸಲಾಗಿದೆ. ಮೃತ ವ್ಯಕ್ತಿಯು ಪ್ಯಾಂಟ್ ಹಾಗೂ ಟೀ ಶರ್ಟ್ ಧರಿಸಿದ್ದು, ಈ ವ್ಯಕ್ತಿಯು ಎಲ್ಲಿಂದ ಆಗಮಿಸಿ ಯಾಕೆ ಈ ಗುಡ್ಡದಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂಬುದರ ಕುರಿತು ಹಲವು ಅನುಮಾನಗಳು ಸೃಷ್ಟಿಯಾಗಿದೆ.
ಜತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಯಾರದರೂ ತಂದು ನೇತಾಡಿಸಿದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Related Articles
ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣಗಳ ಕುರಿತು ಬಂಟ್ವಾಳ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.