Advertisement

ಬಂಟ್ವಾಳ ಪುರಸಭೆ ಆಯವ್ಯಯ ಪೂರ್ವಭಾವಿ ಸಭೆ

11:46 AM Dec 23, 2017 | Team Udayavani |

ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಬಳಕೆ ಅತಿಯಾಗಿದ್ದು, ಪಾದಚಾರಿಗಳು, ವಾಹನ ಸವಾರರು ಎಲ್ಲೆಂದರಲ್ಲಿ ಎಸೆಯುವ ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಕಡಿವಾಣ ಹಾಕಲು ರಸ್ತೆ ಬದಿ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಕ್ಕೆ ಸೂಕ್ತ ವ್ಯವಸ್ಥೆ ಒದಗಿಸುವಂತೆ ಸಾರ್ವಜನಿಕರಿಂದ ಮನವಿ ವ್ಯಕ್ತವಾಗಿದೆ. ಪುರಸಭಾ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಅವರ ಅಧ್ಯಕ್ಷತೆಯಲ್ಲಿ ಪುರಸಭಾ ಸಭಾಂಗಣದಲ್ಲಿ ನಡೆದ ಆಯವ್ಯಯ ಮಂಡನೆ ಬಗ್ಗೆ ಪೂರ್ವಭಾವಿಯಾಗಿ ಸಾರ್ವಜನಿಕ ಸಮಾಲೋಚನ ಸಭೆಯಲ್ಲಿ ಮನವಿ ಬಂದಿತು.

Advertisement

ಬಿ.ಸಿ.ರೋಡ್‌ನ‌ ಸಂಚಯಗಿರಿ ಹಿರಿಯ ನಾಗರಿಕ ದಾಮೋದರ್‌ ವಿಷಯ ಪ್ರಸ್ತಾವಿಸಿ, ಪ್ಲಾಸ್ಟಿಕ್‌ ಹಾವಳಿಯಿಂದ ಮಣ್ಣು ಮತ್ತು ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದರು. ಇದಕ್ಕೆ ಪುರಸಭಾ ನಿವೃತ್ತ ಅಧಿಕಾರಿ ಶಿವಶಂಕರ್‌ ಧ್ವನಿಗೂಡಿಸಿದರು. ಮಡಿಕೇರಿಯಂತಹ ನಗರಗಳಲ್ಲಿ ಶೇ.80ರಷ್ಟು ಪ್ಲಾಸ್ಟಿಕ್‌ ಬಳಕೆ ನಿಯಂತ್ರಣಕ್ಕೆ ತರಲಾಗಿದೆ. ಈ ನಿಟ್ಟಿನಲ್ಲಿ ಇಲ್ಲಿಯೂ ಪುರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಪ್ರತಿಕ್ರಿಯಿಸಿ, ಈಗಾಗಲೇ ಅಂಗಡಿಗಳಿಗೆ ದಾಳಿ ನಡೆಸಿ ಸಾಕಷ್ಟು ಮಂದಿಗೆ ದಂಡ ವಿಧಿಸಲಾಗಿದೆ ಎಂದರು.

ಹದಗೆಟ್ಟ ರಸ್ತೆ
ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇಲ್ಲಿನ ರಸ್ತೆಗಳು ಕೂಡ ತೀರಾ ಹದಗೆಟ್ಟು ಹೋಗುತ್ತಿವೆ ಎಂದು ತಿರುಮಲೇಶ್‌ ಗಮನ ಸೆಳೆದರು. ಇದಕ್ಕೆ ಎಂಜಿನಿಯರ್‌ ಡೊಮೆನಿಕ್‌ ಡಿ’ಮೊಲ್ಲೊ ಪ್ರತಿಕ್ರಿಯಿಸಿ, ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡ ಬಳಿಕ ಎಲ್ಲ ರಸ್ತೆಗಳನ್ನು ದುರಸ್ತಿಗೊಳಿಸಲಾಗುವುದು ಎಂದರು. ಇಲ್ಲಿನ ಮದ್ವ ಪರಿಸರದಲ್ಲಿ ಈಗಾಗಲೇ ಇಬ್ಬರಿಗೆ ಶಂಕಿತ ಡೆಂಗ್ಯೂ ಕಾಣಿಸಿಕೊಂಡಿದ್ದು, ಈ ಪರಿಸರದಲ್ಲಿ ಅತಿಯಾದ ಸೊಳ್ಳೆಕಾಟ ನಿಯಂತ್ರಿಸಲು ಫಾಗಿಂಗ್‌ ನಡೆಸುವಂತೆ
ಸ್ಥಳೀಯ ನಿವಾಸಿ ಸಂಜೀವ ಸಲಹೆ ನೀಡಿದರು. ಉಪಾಧ್ಯಕ್ಷ ಮುಹಮ್ಮದ್‌ ನಂದರಬೆಟ್ಟು, ಸದಸ್ಯ ಜಗದೀಶ್‌ ಕುಂದರ್‌, ಬಜೆಟ್‌ ತಯಾರಿಕೆ ಸಿಬಂದಿ ಸುಷ್ಮಾ, ವ್ಯವಸ್ಥಾಪಕಿ ಲೀಲಾವತಿ, ರಜಾಕ್‌ ಉಪಸ್ಥಿತರಿದ್ದರು.

ಫುಟ್‌ಪಾತ್‌ ಇಲ್ಲ
ಬಂಟ್ವಾಳ ಪೇಟೆಯಲ್ಲಿ ಪಾದಚಾರಿಗಳಿಗೆ ನಡೆದಾಡಲು ಫುಟ್‌ಪಾತ್‌ ಇಲ್ಲ. ಕಾಲುದಾರಿಯನ್ನು ಬಹುತೇಕ ಅಂಗಡಿಯವರು ಅತಿಕ್ರಮಿಸಿಕೊಂಡಿದ್ದಾರೆ. ಬಿ.ಸಿ.ರೋಡ್‌ನ‌ ಕೈಕುಂಜೆ ಹಿಂದೂ ರುದ್ರಭೂಮಿ ಸ್ಥಿತಿ ಶೋಚನೀಯವಾಗಿದೆ. ಅದರ ಛಾವಣಿ ಶಿಥಿಲಾವಸ್ಥೆಯಲ್ಲಿದ್ದು, ಇಲ್ಲಿನ ದೀಪಗಳು ಉರಿಯುತ್ತಿಲ್ಲ ಎಂದು ಸೇಸಪ್ಪ ಮಾಸ್ಟರ್‌, ಸುಕುಮಾರ್‌ ಬಂಟ್ವಾಳ, ನಾರಾಯಣ ಪೆರ್ನೆ ಮತ್ತಿತರರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next