ವಿಟ್ಲ: ವಿಟ್ಲದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಖಾಸಗಿ ಬಸ್ ಸಂಚಾರವಿರಲಿಲ್ಲ. ಜನಸಂಖ್ಯೆ ತೀರಾ ವಿರಳವಾಗಿತ್ತು. ಹೆಚ್ಚಿನ ಖಾಸಗಿಶಾಲೆಗಳಿಗೆ ರಜೆ ಸಾರಲಾಯಿತು. ವಿಟ್ಲದ ಕುದ್ದುಪದವು ಎಂಬಲ್ಲಿ ಕೇರಳ ಖಾಸಗಿ ಬಸ್ಸಿಗೆ, ವಿಟ್ಲ ಪೇಟೆಯಲ್ಲಿ ಮೂರು ಕೆಎಸ್‌ಆರ್‌ಟಿಸಿ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ವಿಟ್ಲ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ಬೆಂಕಿ ಹಚ್ಚಲು ಯತ್ನಿಸಿರುವ ಘಟನೆಯೂ ನಡೆದಿದೆ.
ಕಂಬಳಬೆಟ್ಟು ಹಾಗೂ ಮಿತ್ತೂರು ರೈಲ್ವೇ ಸೇತುವೆ ಕೆಳಗಡೆ ರಸ್ತೆ ಮಧ್ಯೆ ಟಯರ್‌ಗೆ ಬೆಂಕಿ ಹಚ್ಚಲಾಗಿದೆ. ಒಕ್ಕೆತ್ತೂರು ನಿವಾಸಿ ಅಬೂಬಕ್ಕರ್ ಹೈವೆ ಅವರು ಮನೆಯ ಮುಂಭಾಗದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ದುಷ್ಕರ್ಮಿಗಳ ತಂಡ ಬೆಂಕಿ ಹಚ್ಚಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಆಗ್ನಿಶಾಮಕ ದಳದ ಸಿಬಂದಿ ಬೆಂಕಿ ನಂದಿಸಿದ್ದಾರೆ. ಲಾರಿ ಮುಂಭಾಗ ಉರಿದುಹೋಗಿದೆ. ಅದಲ್ಲದೇ ಕಂಬಳಬೆಟ್ಟು ಹಾಗೂ ಉರಿಮಜಲು ಎಂಬಲ್ಲಿ ಆಲದ ಮರದ ಗೆಲ್ಲುಗಳನ್ನು ಕಡಿದು ರಸ್ತೆಗೆ ಹಾಕಲಾಗಿದೆ.
ವಿಟ್ಲದ ಚಂದಳಿಕೆಯಲ್ಲಿ ರಸ್ತೆ ಬಂದ್ ಮಾಡಲು ಯತ್ನಿಸಿದ ಆರೋಪದಲ್ಲಿ 2 ದ್ವಿಚಕ್ರ ವಾಹನ ಸವಾರರನ್ನು ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ ನೇತೃತ್ವದ ತಂಡ ವಶಕ್ಕೆ ತೆಗೆದುಕೊಂಡಿದೆ. ಬಳಿಕ ಪುತ್ತೂರಿಗೆ ತೆರಳುವ ಸರಕಾರಿ ಬಸ್‌ಗಳ ಮುಂದೆ ಇಬ್ಬರು ಪೊಲೀಸರು ಬೈಕ್‌ನಲ್ಲಿ ತೆರಳಿ ರಕ್ಷಣೆ ಒದಗಿಸಿದ್ದಾರೆ. ವಿಟ್ಲ ಪೇಟೆಯಲ್ಲಿ ಔಷಧಿ, ಹಾಲು ಹಾಗೂ ದಿನಪತ್ರಿಕೆ ಅಂಗಡಿಗಳು ತೆರೆದಿದ್ದು ಕೆಲವು ಆಟೋ ರಿûಾಗಳು, ದ್ವಿಚಕ್ರ ವಾಹನಗಳು ಸಂಚರಿಸುತ್ತಿದ್ದವು. ವಿಟ್ಲ ಪೇಟೆ ಸಂಪೂರ್ಣ ಬಂದ್ ಆಗಿದ್ದು, ಮೇಗಿನಪೇಟೆ ಒಕ್ಕೆತ್ತೂರು, ಮಂಗಳಪದವು ಎಂಬಲ್ಲಿ ಕೆಲವು ಅಂಗಡಿಗಳು ಬಾಗಿಲು ತೆರೆದಿದ್ದವು.
ಕನ್ಯಾನದಲ್ಲಿ ಬಹುತೇಕ ಅಂಗಡಿಗಳು ಬಾಗಿಲು ತೆರೆದು ವ್ಯಾಪಾರ ನಡೆಸಿವೆ. ಮಾಣಿಯಲ್ಲಿ ವಾರದ ಸಂತೆ ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದ್ದು, ಬಹುತೇಕ ಅಂಗಡಿಗಳು ಬಾಗಿಲು ತೆರೆದಿದ್ದವು.
“ಸಂಘ ಪರಿವಾರ ಅಲ್ಲ’
ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ ಎಂ.ವಿಟ್ಲ ಅವರು ಪತ್ರಿಕಾ ಪ್ರತಿನಿಧಿ ಜತೆ ಮಾತನಾಡಿ, ಬಸ್ಸಿಗೆ ಕಲ್ಲು ತೂರಾಟ, ಲಾರಿಗೆ ಬೆಂಕಿ ಇನ್ನಿತರ ಅಹಿತಕರ ಘಟನೆಗಳಿಗೆ ವಿಟ್ಲದ ಸಂಘ ಪರಿವಾರ ಸಂಘಟನೆಗಳ ಪದಾಧಿಕಾರಿಗಳು ಕಾರಣರಲ್ಲ. ಆ ಕೃತ್ಯದಲ್ಲಿ ತೊಡಗಿಸಿದವರ ಪರಿಚಯವೂ ನಮಗಿಲ್ಲ ಎಂದು ಹೇಳಿದ್ದಾರೆ.