Advertisement

ಬಂಟ್ವಾಳ: ಬೀದಿಬದಿ ವ್ಯಾಪಾರಿ ವಲಯ ಅನುಷ್ಠಾನವಾಗಲಿ

07:27 PM Aug 29, 2021 | Team Udayavani |

ಪಟ್ಟಣ ಅಥವಾ ನಗರವಿರಲಿ ಅಲ್ಲಿ ಒಂದಷ್ಟು ಮಂದಿ ಬೀದಿ ಬದಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತಾರೆ. ಆದರೆ ಇವರು ನಗರದ ಸಂಚಾರ ವ್ಯವಸ್ಥೆಗೆ ಮಾತ್ರವಲ್ಲದೆ ಸೌಂದರ್ಯಕ್ಕೂ ಹೆಚ್ಚಿನ ಸಂದರ್ಭಗಳಲ್ಲಿ ಬಲುದೊಡ್ಡ ಸಮಸ್ಯೆಯನ್ನು ತಂದೊಡ್ಡುತ್ತಾರೆ. ಬೀದಿಬದಿ ವ್ಯಾಪಾರಿಗಳ ಸಂಖ್ಯೆ ಮಿತಿಮೀರಿ ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿನ ಫ‌ುಟ್‌ಪಾತ್‌ಗಳನ್ನು ಅತಿಕ್ರಮಿಸಿದಾಗ ಸಹಜವಾಗಿಯೇ ನಗರದಲ್ಲಿ ಸಂಚಾರ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ.

Advertisement

ಸ್ಥಳೀಯಾಡಳಿತ ಸಂಸ್ಥೆಗಳು ಬೀದಿಬದಿ ವ್ಯಾಪಾರಿಗಳಿಗಾಗಿ ಪ್ರತ್ಯೇಕ ವಲಯವನ್ನು ಗುರುತಿಸಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಬೀದಿಬದಿ ವ್ಯಾಪಾರಿಗಳಿಗಾಗಿ ಪ್ರತ್ಯೇಕ ವಲಯವನ್ನು ಗುರುತಿಸಿ ಅವರಿಗೆ ವ್ಯಾಪಾರ ನಡೆಸಲು ಸೂಕ್ತ ವ್ಯವಸ್ಥೆ ಮಾಡಿಕೊಡಲಾಗಿದ್ದರೂ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಇನ್ನು ಕೂಡ ಇದು ಅನುಷ್ಠಾನಕ್ಕೆ ಬಂದಿಲ್ಲ. ಇದರಿಂದಾಗಿ ಬಂಟ್ವಾಳ ನಗರ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಿಗಳು ನಗರದ ಹಲವೆಡೆ ರಸ್ತೆ ಬದಿಯಲ್ಲಿಯೇ ತಮ್ಮ ವ್ಯಾಪಾರವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಇದರಿಂದಾಗಿ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆಯಲ್ಲದೆ ಸಂಚಾರ ದಟ್ಟಣೆ ಸಹಿತ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

ಬಂಟ್ವಾಳ ಪುರಸಭೆಯಿಂದ ಈಗಾಗಲೇ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲಾಗಿದ್ದು ಸರಕಾರದಿಂದ ಸಿಗುವ ಸಾಲ ಸೌಲಭ್ಯವನ್ನೂ ವಿತರಿಸಲಾಗಿದೆ. ಗುರುತಿನ ಚೀಟಿ ಪಡೆದಿರುವ ವ್ಯಾಪಾರಿಗಳ ಜತೆಗೆ ಒಂದಷ್ಟು ಹೊಸ ವ್ಯಾಪಾರಿಗಳು ಬಿ.ಸಿ.ರೋಡು ಸೇರಿದಂತೆ ಪುರಸಭಾ ವ್ಯಾಪ್ತಿಯ ಪ್ರಮುಖ ಜಂಕ್ಷನ್‌ಗಳಲ್ಲಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಳಗ್ಗೆ ಮತ್ತು ಸಂಜೆ ಹೊತ್ತು ಜನ ಮತ್ತು ವಾಹನ ಸಂಚಾರ ಅಧಿಕವಾಗಿರುವ ವೇಳೆ ಬೀದಿಬದಿ ವ್ಯಾಪಾರಿಗಳಿಂದಾಗಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್‌ ಜಾಮ್‌ ಮಾಮೂಲಿಯಾಗಿದೆ.

ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಬೀದಿಬದಿ ವ್ಯಾಪಾರಿಗಳಿಗಾಗಿ ಪ್ರತ್ಯೇಕ ವಲಯಗಳನ್ನು ಗುರುತಿಸಿ, ಗುರುತಿನ ಚೀಟಿ ಪಡೆದಿರುವ ವ್ಯಾಪಾರಿಗಳಿಗೆ ಮೊದಲ ಆದ್ಯತೆಯಲ್ಲಿ ಈ ವಲಯಗಳಲ್ಲಿ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಬೀದಿಬದಿ ವ್ಯಾಪಾರಿಗಳ ಸಂಖ್ಯೆ ದಿನೇ ದಿನೆ ಇನ್ನಷ್ಟು ಹೆಚ್ಚಾಗಿ ಬಲುದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.

ಬಿ.ಸಿ.ರೋಡ್‌ ನಾರಾಯಣ ಗುರು ವೃತ್ತದ ಬಳಿ ಹೆದ್ದಾರಿ ಬದಿ ಬೀದಿಬದಿ ವ್ಯಾಪಾರಿಗಳ ಸಂಖ್ಯೆ ಹೆಚ್ಚಿದ್ದು, ಅಲ್ಲೇ ಒಂದು ಸ್ಥಳವನ್ನು ಬೀದಿ ಬದಿ ವ್ಯಾಪಾರಿ ವಲಯ ಮಾಡಿದರೆ ಹೆದ್ದಾರಿ ಬದಿಯ ವ್ಯಾಪಾರಕ್ಕೆ ಕಡಿವಾಣ ಹಾಕಲು ಸಾಧ್ಯ. ಇದೇ ರೀತಿ ಬಿ.ಸಿ.ರೋಡು ಜಂಕ್ಷನ್‌, ಕೈಕಂಬ, ಮೆಲ್ಕಾರ್‌, ಬಂಟ್ವಾಳ ಪೇಟೆ, ಬೈಪಾಸ್‌, ಪಾಣೆಮಂಗಳೂರು ಮೊದಲಾದ ಭಾಗಗಳಲ್ಲಿ ಪ್ರತ್ಯೇಕ ವಲಯಗಳು ನಿರ್ಮಾಣವಾದರೆ ಸಂಚಾರ ಸಮಸ್ಯೆಗೆ ಒಂದಿಷ್ಟು ಪರಿಹಾರ ಲಭಿಸಬಹುದಾಗಿದೆ.

Advertisement

ಈ ನಿಟ್ಟಿನಲ್ಲಿ ಪುರಸಭೆಯು ಗಂಭೀರ ಚಿಂತನೆ ನಡೆಸಿ ನಗರದ ಸೌಂದರ್ಯ ವೃದ್ಧಿಗೆ ಬೀದಿಬದಿ ವ್ಯಾಪಾರಿ ವಲಯ ಅನುಷ್ಠಾನಕ್ಕೆ ಮುಂದಾಗಬೇಕಿದೆ.                   

– ಸಂ

 

Advertisement

Udayavani is now on Telegram. Click here to join our channel and stay updated with the latest news.

Next