ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಮನೆ ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ ಧನ ಬಿಡುಗಡೆಗೊಂಡಿದೆ. 21 ಮಂದಿಗೆ ಪೂರ್ಣ ಮನೆ ಹಾನಿಯ ಪರಿಹಾರ ಸಹಿತ 98 ಮಂದಿಗೆ ಗುರುವಾರ ತಾ.ಪಂ. ಸಭಾಂಗಣದಲ್ಲಿ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಮನೆ ಕಾಮಗಾರಿ ಆದೇಶ ಪತ್ರ ವಿತರಿಸಿದರು.
ಈ ಸಂದರ್ಭ ಅವರು ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ದ.ಕ. ಜಿಲ್ಲೆಯ ಪ್ರವಾಹ ಪರಿಸ್ಥಿತಿ ವೀಕ್ಷಣೆಗಾಗಿ ಜಿಲ್ಲೆಗೆ ಆಗಮಿಸಿದ ಸಂದರ್ಭ ಉತ್ತಮ ಪರಿಹಾರದ ಭರವಸೆ ನೀಡಿದ್ದರು. ಹಿಂದೆ ಗರಿಷ್ಠ ಅಂದರೆ 95 ಸಾವಿರ ರೂ. ನೀಡಲಾಗುತ್ತಿತ್ತು; ಪ್ರಸ್ತುತ ಅದನ್ನು 5 ಲಕ್ಷ ರೂ.ಗೆ ಏರಿಸಲಾಗಿದೆ ಎಂದರು.
ಅನುದಾನದ ಮೊತ್ತವು ಹಂತ ಹಂತವಾಗಿ ಫಲಾನುಭವಿಗಳ ಕೈ ಸೇರಲಿದೆ. ಇದರ ಜತೆಗೆ ಉದ್ಯೋಗ ಖಾತರಿ ಮೂಲಕವೂ ಸುಮಾರು 22,450 ರೂ. ಪಡೆಯುವುದಕ್ಕೆ ಅವಕಾಶವಿದೆ. ಆದೇಶ ಪತ್ರ ಸ್ವೀಕರಿಸಿದ ಬಳಿಕ 90 ದಿನಗಳಲ್ಲಿ ಮನೆಯ ಕಾಮಗಾರಿ ಆರಂಭವಾಗಬೇಕು. ಸಂತ್ರಸ್ತರಲ್ಲಿ ಗೊಂದಲ ಗಳಿದ್ದರೂ ಸಂಬಂಧಪಟ್ಟ ಪಿಡಿಒ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.
ತಾಲೂಕು ಪಂಚಾಯತ್ ಇಒ ರಾಜಣ್ಣ ಕ್ಷೇತ್ರದ ಫಲಾನು ಭವಿಗಳ ಮಾಹಿತಿ ನೀಡಿ, ಕಡ್ಡಾಯವಾಗಿ 90 ದಿನಗಳೊಳಗೆ ಕಾಮಗಾರಿ ಆರಂಭಗೊಳ್ಳಬೇಕು. ಇಲ್ಲದೇ ಇದ್ದರೆ ಮೊತ್ತ ಬ್ಲಾಕ್ ಆಗುತ್ತದೆ ಎಂದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್ ಅಲಿ, ಸದಸ್ಯ ರಮೇಶ್ ಕುಡ್ಮೇರು, ತಹಶೀಲ್ದಾರ್ ರಶ್ಮಿ ಎಸ್.ಆರ್. ಉಪಸ್ಥಿತರಿದ್ದರು.
ಫಲಾನುಭವಿಗಳಿಗೆ ಆದೇಶ ಪತ್ರ
ಪೂರ್ಣ ಮನೆ ಕಳೆದುಕೊಂಡ 14 ಮಂದಿಗೆ 5 ಲಕ್ಷ ರೂ., 22 ಮಂದಿಗೆ ಶೇ. 75ರಷ್ಟು
ಹಾನಿಗೆ 1 ಲಕ್ಷ ರೂ. ಮತ್ತು 36 ಮಂದಿಗೆ ಶೇ. 25ರಷ್ಟು ಹಾನಿಗೆ 25 ಸಾವಿರ ರೂ. ಸಹಿತ ಒಟ್ಟು 72 ಮಂದಿಗೆ ಆದೇಶ ಪತ್ರ ನೀಡಲಾಯಿತು. ಪುರಸಭಾ ವ್ಯಾಪ್ತಿಯಲ್ಲಿ ಪೂರ್ಣ ಮನೆ ಹಾನಿಯ 7 ಮಂದಿಗೆ 5 ಲಕ್ಷ ರೂ., 8 ಮಂದಿಗೆ ಶೇ. 75ರಷ್ಟು ಹಾನಿಗೆ
1 ಲಕ್ಷ ರೂ. ಮತ್ತು 11 ಮಂದಿಗೆ ಶೇ. 25ರಷ್ಟು ಹಾನಿಗೆ 25 ಸಾವಿರ ರೂ. ಸಹಿತ ಒಟ್ಟು 26 ಮಂದಿಗೆ ಆದೇಶ ಪತ್ರ ನೀಡಲಾಯಿತು.