ಬಂಟ್ವಾಳ: ಹಲವು ಕಾರಣಗಳಿಂದ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಪ್ರಮುಖ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಅಷ್ಟೇನೂ ಕಾದಾಟ ಇಲ್ಲವಾದರೂ ಹೆಚ್ಚುತ್ತಿರುವ ತಾಪಮಾನದಂತೆಯೇ ಚುನಾವಣೆಯ ಕಾವು ನಿಧಾನಗತಿಯಲ್ಲಿ ಏರುತ್ತಿದೆ. ಇಲ್ಲಿ ಯಾರಿಗೆ ಟಿಕೆಟ್‌ಎನ್ನುವು ದಕ್ಕಿಂತಲೂ ಈ ಬಾರಿ ಗೆಲುವು ಯಾರದ್ದು ಎಂಬುದರ ಬಗ್ಗೆಯೇ ಚರ್ಚೆ.
ಬಿಜೆಪಿಯಿಂದ ಹಾಲಿ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಸ್ಪರ್ಧಿಸುವುದು ಬಹುತೇಕ ಖಚಿತ ಗೊಂಡಿದೆ. ಕಾಂಗ್ರೆಸ್‌ನಲ್ಲಿ ಹಲವರು ಅರ್ಜಿ ಗುಜರಾಯಿಸಿರುವರಾದರೂ ಮಾಜಿ ಸಚಿವ ಬಿ. ರಮಾನಾಥ ರೈ ಅವರಿಗೆ ಈ ಬಾರಿಯೂ ಟಿಕೆಟ್ ಪಕ್ಕಾ ಎನ್ನಲಾಗುತ್ತಿದೆ. ಬಿಜೆಪಿ-ಕಾಂಗ್ರೆಸ್ ನೇರ ಸ್ಪರ್ಧೆ ಬಂಟ್ವಾಳದಲ್ಲಿ ಎಷ್ಟೇ ಪಕ್ಷಗಳು ಸ್ಪರ್ಧಿಸಿದರೂ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ. ಉಳಿದ ಅಭ್ಯರ್ಥಿಗಳು ಪಡೆಯುವ ಮತಗಳ ಪ್ರಮಾಣದ ಆಧಾರದಲ್ಲಿ ಈ ಎರಡು ಪಕ್ಷಗಳ ಅಭ್ಯರ್ಥಿಗಳ ಮತಗಳಿಕೆ ಪ್ರಮಾಣದಲ್ಲಿ ಏರುಪೇರಾಗಬಹುದು. ಹಾಗೆಂದು ಉಳಿದವರ ಉಮೇದುವಾರಿಕೆಯನ್ನು ನಿರ್ಲಕ್ಷ್ಯಿಸುವಂತಿಲ್ಲ. ಇವರು ಯಾವ ಪಕ್ಷದ ಮತಬುಟ್ಟಿಗೆ ಕೈ ಹಾಕಿದ್ದಾರೆ ಎಂಬುದೇ ಬಲು ಮುಖ್ಯ. ಜತೆಗೆ ಇದು ಗೆಲುವಿನ ಮತಗಳ ಅಂತರದಲ್ಲೂ ನಿರ್ಣಾಯಕವೆನಿಸಿದ ಕೆಲವು ಉದಾಹರಣೆಗಳಿವೆ.
ಚಾಲ್ತಿಯಲ್ಲಿರುವ ಹೆಸರುಗಳು ಬಂಟ್ವಾಳದಲ್ಲಿ ಬಿಜೆಪಿಯಿಂದ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಹೆಸರು ಹೊರತುಪಡಿಸಿ ಬಹಿರಂಗವಾಗಿ ಯಾವುದೇ ಆಕಾಂಕ್ಷಿಗಳ ಹೆಸರು ಕೇಳಿ ಬರುತ್ತಿಲ್ಲ. ಜತೆಗೆ ಇತರ ಕ್ಷೇತ್ರಗಳಲ್ಲಿ ಇರುವಂತೆ ಬಿಜೆಪಿ ಪರಿವಾರ ಸಂಘಟನೆಗಳೂ ಯಾವುದೇ ಹೆಸರನ್ನು ಇದುವರೆಗೂ ಪ್ರಸ್ತಾವಿಸಿಲ್ಲ.
ಕೆಪಿಸಿಸಿಯು ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದ ಸಂದರ್ಭ ಬಂಟ್ವಾಳ ಕ್ಷೇತ್ರದಿಂದ ಮಾಜಿ ಸಚಿವ ಬಿ. ರಮಾನಾಥ ರೈ, ಇಂಟಕ್ ಮುಂದಾಳು ರಾಕೇಶ್ ಮಲ್ಲಿ ಹಾಗೂ ಹಿರಿಯ ನ್ಯಾಯವಾದಿ ಅಶ್ವಿನಿಕುಮಾರ್ ರೈ ಅವರು ಅರ್ಜಿ ಸಲ್ಲಿಸಿದ್ದಾರೆ.
Related Articles
ಕಾಂಗ್ರೆಸ್‌ನಿಂದ ಪ್ರಾರಂಭದಲ್ಲಿ ಬಿಲ್ಲವ ಮುಖಂಡ ಪದ್ಮರಾಜ್ ಹಾಗೂ ಮನಪಾ ಮಾಜಿ ಮೇಯರ್ ಕವಿತಾ ಸನಿಲ್ ಅವರ ಹೆಸರು ಕೇಳಿ ಬಂದಿತ್ತಾದರೂ ಪ್ರಸ್ತುತ ಆ ಹೆಸರುಗಳು ಬದಿಗೆ ಸರಿದು ಬಿ. ರಮಾನಾಥ ರೈ ಅವರ ಹೆಸರೇ ಮುಂಚೂಣಿಯಲ್ಲಿದೆ. ರೈ ಅವರು ಈಗಾಗಲೇ ಕ್ಷೇತ್ರಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ನಡೆಸುತ್ತಿದ್ದಾರೆ. ಎದುರಾಳಿ ಅಭ್ಯರ್ಥಿ ಕುರಿತು ಬಿಜೆಪಿಗರಲ್ಲಿ ಕೇಳಿದರೆ ಕಾಂಗ್ರೆಸ್ ಅಭ್ಯರ್ಥಿ ಯಾರೇ ಆದರೂ ಈ ಬಾರಿ ಗೆಲುವು ನಮ್ಮದೇ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಅದರಂತೆಯೇ ಕಾಂಗ್ರೆಸಿಗರ ಬಳಿ ಕೇಳಿದರೆ ಬಿ. ರಮಾನಾಥ ರೈ ಸ್ಪರ್ಧಿಸಿದರೆ ಬಿಜೆಪಿಗೆ ಪ್ರಬಲ ಸ್ಪರ್ಧೆ ನೀಡಿ ಜಯವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ ಎಂದು ಗಟ್ಟಿ ದನಿಯಲ್ಲೇ ನುಡಿಯುತ್ತಾರೆ.
ಎಸ್‌ಡಿಪಿಐ ಅಭ್ಯರ್ಥಿಯಾಗಿ ಇಲ್ಯಾಸ್ ತುಂಬೆ ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದಾರೆ. ಕಳೆದ ಬಾರಿ ಎಸ್‌ಡಿಪಿಐ ನಾಮಪತ್ರ ಸಲ್ಲಿಸಿ ಬಳಿಕ ಹಿಂಪಡೆದುಕೊಂಡಿತ್ತು. ಸಿಪಿಐ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಈ ಬಾರಿ ಬಂಟ್ವಾಳದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರ ಕೈಗೊಂಡಿದೆ. ಆದರೆ ಅಭ್ಯರ್ಥಿಯ ಹೆಸರು ಅಂತಿಮಗೊಳ್ಳಬೇಕಿದೆ. ಉಳಿದಂತೆ ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷಗಳು ಬಂಟ್ವಾಳದಿಂದ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಇನ್ನೂ ಯಾವುದೇ ಖಚಿತ ನಿರ್ಧಾರಕ್ಕೆ ಬಂದಿಲ್ಲ.
ಮೂರನೇ ಬಾರಿ ಮುಖಾಮುಖಿ
ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಈ ಹಿಂದಿನ ಅಭ್ಯರ್ಥಿಗಳೇ ಅಂತಿಮಗೊಂಡರೆ ಇದು ರಾಜೇಶ್ ನಾೖಕ್ ಹಾಗೂ ರಮಾನಾಥ ರೈ ಅವರ ನಡುವಣ ಮೂರನೇ ಸ್ಪರ್ಧೆಯಾಗಲಿದೆ. ಇದರಲ್ಲಿ 2013ರಲ್ಲಿ ರಮಾನಾಥ ರೈ ಹಾಗೂ 2018ರಲ್ಲಿ ರಾಜೇಶ್ ನಾೖಕ್ ಗೆಲುವು ಸಾಧಿಸಿದ್ದು ಮೂರನೇ ಬಾರಿಯ ಪೈಪೋಟಿಯಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂಬುದೇ ಕುತೂಹಲ. ರಾಜೇಶ್ ನಾೖಕ್ ಅವರಿಗೆ ಇದು ಮೂರನೇ ಚುನಾವಣೆಯಾಗಿದ್ದರೆ ರಮಾನಾಥ ರೈ ಅವರದು 9ನೇ ಸ್ಪರ್ಧೆ. ಹಿಂದೆ ಸ್ಪರ್ಧಿಸಿದ್ದ 8 ಚುನಾವಣೆಗಳಲ್ಲಿ 6ರಲ್ಲಿ ಗೆಲುವು ಸಾಧಿಸಿ 2 ಬಾರಿ ಸೋತಿದ್ದರು.
ಕಿರಣ್ ಸರಪಾಡಿ