Advertisement

ಬಂಟರ ಸಂಘದ ವಿವಾಹ ವೇದಿಕೆಯಿಂದ ಬಂಟ ವಧೂವರರ ಚಾವಡಿ ಉದ್ಘಾಟನೆ

05:57 PM Aug 19, 2018 | |

ಮುಂಬಯಿ: ಮೂಲತಃ ಕೃಷಿಕರಾದ ಬಂಟರು ಕೂಡು ಕುಟುಂಬದ ಸದಸ್ಯರು ಸಂಸಾರದ ಹೆಣ್ಣು ಮಕ್ಕಳ ಮದುವೆಯ ಜವಾಬ್ದಾರಿಯನ್ನು ಮನೆಯ ಯಜಮಾನನಾದ ಸೋದರ ಮಾವನು ವಹಿಸಿಕೊಂಡು ತಂದೆಯ ಸ್ಥಾನವನ್ನು ತುಂಬಿಕೊಡುತ್ತಿದ್ದರು. ವಧೂವರರು ತಮ್ಮ ಮಾವನ ಮಾತನ್ನು ಯಾವ ಕಾರಣಕ್ಕೂ ಮೀರುತ್ತಿರಲಿಲ್ಲ. ಹಿಂದೆ ಅದೆಷ್ಟೋ ಮಂದಿ ಮದುಮಗ-ಮದುಮಗಳ ಮುಖವನ್ನು ಮದುವೆ ಮಂಟಪದಲ್ಲಿಯೇ ನೋಡುತ್ತಿದ್ದರು. ಹಾಗೆ ನಡೆದ ಮದುವೆ ಸುದೀರ್ಘ‌ವಾಗಿ ಬಾಳಿ ಬದುಕಿ ಬೆಳಗುತ್ತಿದ್ದವು. ಪರಿವರ್ತನಾಶೀಲ ಪ್ರಪಂಚದಲ್ಲಿ ಈಗ ಪರಿಸ್ಥಿತಿ ಬದಲಾಗಿದೆ. ನಾವೂ ಬದಲಾಗಿದ್ದೇವೆ ಎಂದು ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ನುಡಿದರು.

Advertisement

ಆ. 17ರಂದು ಬೆಳಗ್ಗೆ ಕುರ್ಲಾ ಪೂರ್ವದ ಬಂಟರ ಭವನದ ಮುಂಭಾಗದ ಶಶಿ ಮನಮೋಹನ್‌ ಶೆಟ್ಟಿ ಉನ್ನತ ಶಿಕ್ಷಣ ಸಂಕೀರ್ಣದ ರಮಾನಾಥ ಪಯ್ಯಡೆ ಕಾಲೇಜ್‌ ಆಫ್‌ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ ಕೆಪಿಟೇರಿಯಾದಲ್ಲಿ ಸಂಘದ ವಿವಾಹ ವೇದಿಕೆ ಸಮಿತಿಯ ಕಾರ್ಯಾಧ್ಯಕ್ಷ ಸುರೆಶ್‌ ಎನ್‌. ಶೆಟ್ಟಿ ಅವರ ನೇತೃತ್ವದಲ್ಲಿ ಜರಗಿದ ವಧೂವರರ ಚಾವಡಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ವಿವಾಹ ವೇದಿಕೆ ವಧೂವರರ ಚಾವಡಿ ಎಂಬ ಪರಿಕಲ್ಪನೆಯಲ್ಲಿ ಹೆಣ್ಣು-ಗಂಡು ಹಾಗೂ ಅವರ ಪರಿವಾರದ ಸದಸ್ಯರನ್ನು ಒಂದೇ ಚಾವಡಿಯಲ್ಲಿ ಸೇರಿಸಿಕೊಂಡು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು  ಹಂಚಿಕೊಂಡು ದಾಂಪತ್ಯ ಎಂಬ ನಂಟಿಗೆ ಭದ್ರಬುನಾದಿಯನ್ನು  ಹಾಕಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿರುವುದು ನಿಜಕ್ಕೂ ಅಭಿಂದನಾರ್ಹ ವಿಚಾರವಾಗಿದೆ. ಕಾರ್ಯಾಧ್ಯಕ್ಷ ಸುರೇಶ್‌ ಶೆಟ್ಟಿ ಅವರ ದೂರ ದೃಷ್ಟಿತ್ವಕ್ಕೆ ಇಂದಿನ ಕಾರ್ಯಕ್ರಮದ ಯಶಸ್ವಿ ಸಾಕ್ಷಿಯಾಗಿದೆ. ಸಂಘದ ಸಾಧನಾ ಪುಟದಲ್ಲಿ ಈ ಕಾರ್ಯಕ್ರಮ ಸ್ಥಾಯಿಯಾಗಿ ಶೋಭಿಸುತ್ತದೆ. ಸಂಘದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಬಾರಿ ಕಂಕಣಕ್ಕೆ ಹೊಸ ಅಂಕಣ ಬರೆದ ಸಮಾಗಮ ಇದಾಗಿದೆ. ನಮ್ಮ ಯುವ ಪೀಳಿಗೆಗೆ ಬಂಟರ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಿ, ಅಂತರ್‌ಜಾತಿ, ವಿವಾಹವನ್ನು ತಡೆಯುವ ಪ್ರಯತ್ನವನ್ನು ನಾವಿಂದು ಮಾಡಬೇಕಾಗಿದೆ. ಸ್ವಾಭಿಮಾನಿಗಳಾದ ಬಂಟರು ತಮ್ಮ ಆರ್ಥಿಕ ದುಸ್ಥಿತಿಯನ್ನು ಮತ್ತೂಬ್ಬರಿಗೆ ತಿಳಿಸುವುದಕ್ಕೆ ಹಿಂಜರಿಯುತ್ತಿದ್ದು, ಇದರಿಂದಾಗಿ ಅನೇಕ ಹೆಣ್ಣು ಮಕ್ಕಳಿಗೆ ಮದುವೆಯಾಗುವಲ್ಲಿ ಅಡಚಣೆ ಉಂಟಾಗುತ್ತಿದೆ. ಇದಕ್ಕಾಗಿ ಇಂದಿನ ಈ ವಧೂವರರ ಚಾವಡಿಯ ಮೂಲಕ ಹೊಂದಾಣಿಕೆಯಾದ ಜೋಡಿಗಳು ಬಯಸಿದರೆ, ಮದುವೆಯ ಸಂಪೂರ್ಣ ವೆಚ್ಚವನ್ನು ಭರಿಸಿ ಗೌರವಯುತವಾಗಿ ವಿಜೃಂಭ ಣೆಯಿಂದ ವಿವಾಹ ನಡೆಸಲು ಸಂಘವು ತಯಾರಾಗಿದೆ ಎಂದು ನುಡಿದು,  ಜಾತಕದ ಸೂತಕದಿಂದ ಹೊರ ಬರುವಂತೆ ಹಾಗೂ ಅಂತಹ ನಂಬಿಕೆಯಿಂದ ದೂರವಿರುವಂತೆ ಸಮುದಾಯಕ್ಕೆ ಮನವಿ ಮಾಡಿದರು.

ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ ಮಾತನಾಡಿ, ಶ್ರಾವಣ ತಿಂಗಳ ಮೊದಲ ಶುಕ್ರವಾರ ಸಂಕ್ರಾಂತಿಯ ಪವಿತ್ರ ದಿನದಂದು ವಧೂವರರ ಚಾವಡಿಯ ಪ್ರಪ್ರಥಮ ಕಾರ್ಯಕ್ರಮ ಜರಗುತ್ತಿರುವುದು ಶುಭದ ಸಂಕೇತವಾಗಿದೆ. ಸಂಘದ ಮಹಿಳಾ ವಿಭಾಗ ಇಂದಿನ ದಿನ 40 ವರ್ಷ ಪೂರೈಸುತ್ತಿದೆ ಎನ್ನಲು ಸಂತೋಷವಾಗುತ್ತಿದೆ. ಮಹಿಳಾ ವಿಭಾಗದ ಈ ಸಮಿತಿಯ ಎಲ್ಲಾ ಕಾರ್ಯಕ್ರಮಗಳಿಗೂ ಸಹಕಾರ ನೀಡುತ್ತದೆ. ದಾಂಪತ್ಯ ಜೀವನವೆಂದರೆ ಸಾಮರಸ್ಯದ ಬದುಕು ಹೊಂದಾಣಿಕೆಯ ಕಾಯಕ ಎಂದರು.ಇದೇ ಸಂದರ್ಭದಲ್ಲಿ ಸಮಿತಿಯ ಸದಸ್ಯರುಗಳಾದ ಮನೋಹರ್‌ ಶೆಟ್ಟಿ, ಮಮತಾ ಎಂ. ಶೆಟ್ಟಿ ದಂಪತಿಯನ್ನು ವಿವಾಹ ವೇದಿಕೆಗೆ ಅವರು ನೀಡಿದ ಅವಿರತ ಸೇವೆ ಯನ್ನು ಗುರುತಿಸಿ ಸಮ್ಮಾನಿಸಲಾಯಿತು. ನಲ್ವತ್ತು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯ ದಾಂಪತ್ಯ ಜೀವನವನ್ನು ಪೂರೈಸಿದ ರಂಜನಿ ಸುಧಾಕರ ಹೆಗಡೆ, ಆನಂದ ಶೆಟ್ಟಿ ಇನ್ನ ದಂಪತಿ, ಪ್ರಭಾ ಕೋಡು ಭೋಜ ಶೆಟ್ಟಿ, ವಿನೋದಾ ಆರ್‌. ಕೆ. ಚೌಟ ಮೊದಲಾದವರನ್ನು ಗೌರವಿಸಲಾಯಿತು.

ಆರಂಭದಲ್ಲಿ ವಿನೋದಾ ಆರ್‌. ಕೆ. ಚೌಟ ಪ್ರಾರ್ಥನೆಗೈದರು. ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ವಧೂವರರ ಚಾವಡಿಗೆ ಚಾಲನೆ ನೀಡಿದರು. ಬಂಟಗೀತೆಯನ್ನು ಮೊಳಗಿಸಿ, ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರ ಮಕ್ಕೆ ಚಾಲನೆ ನೀಡಿದರು. ಆ. 16 ರಂದು ನಿಧನರಾದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್‌ ಭೋಜ ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ ಉಪಸ್ಥಿತರಿದ್ದರು. ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ವಧೂವರರನ್ನು ಅಶೋಕ್‌ ಪಕ್ಕಳ ಹಾಗೂ ಕರ್ನೂರು ಮೋಹನ್‌ ರೈ ಅವರು ಪರಿಚಯಿಸಿದರು.

 ಇದು ನಮ್ಮ ಪ್ರಥಮ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ತಮ್ಮ ಸಹಕಾರದೊಂದಿಗೆ ಬಂಟ 
ವಧೂವರರಿಗೆ ಅನುಕೂಲವಾಗುವಂತೆ ಇನ್ನಷ್ಟು  ಪ್ರಗತಿಪರ ಕಾರ್ಯವನ್ನು ಕೈಗೊಳ್ಳುತ್ತೇವೆ. 
ಇಂದಿನ ಪ್ರತಿಕ್ರಿಯೆಯನ್ನು 
ಕಂಡಾಗ ನಮ್ಮ ಪ್ರಯತ್ನ ಫಲ 
ನೀಡುತ್ತಿದೆ ಎಂದು 
ಸಮಾಧಾನವಾಗುತ್ತಿದೆ .
ಸುರೇಶ್‌ ಎನ್‌. ಶೆಟ್ಟಿ , 
ಕಾರ್ಯಾಧ್ಯಕ್ಷರು : ವಿವಾಹ ವೇದಿಕೆ ಬಂಟರ ಸಂಘ ಮುಂಬಯಿ

Advertisement

ವಿವಾಹ ಸಂಬಂಧ ಕೂಡಿಸುವುದು   ಪುಣ್ಯದ ಕಾರ್ಯ ಈ ಕಾರ್ಯಕ್ಕೆ ನಾನು ಹಿಂದಿನಿಂದಲೂ ಪ್ರೋತ್ಸಾಹ ಸಹಕಾರ ನೀಡುತ್ತಾ ಬಂದಿದ್ದೇವೆ. ಮುಂದೆಯೂ ನನ್ನ ಸಂಪೂರ್ಣ ಸಹಕಾರ ನೀಡುವುದಾಗಿ  ಭರವಸೆ ನೀಡಿದರು. ಸಂಘದ ವಿವಾಹ ವೇದಿಕೆಯ ವಧೂವರರ ಚಾವಡಿ ಪ್ರತಿವರ್ಷ ನಡೆಯಲಿ. ಬಂಟ ಕುಟುಂಬದಲ್ಲಿರುವ ಮಕ್ಕಳ ಕಂಕಣ ಭಾಗ್ಯಕ್ಕೆ ಈ ವೇದಿಕೆ ಸಹಕಾರ ನೀಡಲಿ
ರವೀಂದ್ರ ಎಂ. ಅರಸ, 
ಅಧ್ಯಕ್ಷರು : ಬಂಟ್ಸ್‌ ನ್ಯಾಯಮಂಡಳಿ ಮುಂಬಯಿ

ಚಿತ್ರ-ವರದಿ:ಪ್ರೇಮನಾಥ್‌ ಶೆಟ್ಟಿ  ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next