ಮಂಗಳೂರು: ಬಂಟರಲ್ಲಿ ನಾಯಕತ್ವದ ಗುಣಗಳಿವೆ. ವೈದ್ಯಕೀಯ, ಕ್ರೀಡೆ, ಸಾಂಸ್ಕೃತಿಕ, ಹೊಟೇಲ್, ಉದ್ಯಮ ಸಹಿತ ಎಲ್ಲ ಕ್ಷೇತ್ರಗಳಲ್ಲೂ ರಾಜ್ಯ ರಾಷ್ಟ್ರಮಟ್ಟದಲ್ಲಿ ಇಂದು ಬಂಟರು ಗುರುತಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಬಂಟರ ಕೊಡುಗೆ ಅಮೂಲ್ಯವಾದದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್ ಹೇಳಿದರು.
ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ಆಯೋಜಿಸಲಾದ ಧಾರ್ಮಿಕಸಭೆಯಲ್ಲಿ ಅವರು ಮಾತಾಡಿದರು.
ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಬಂಟರು, ನಾಡವರು ಅಂದರೆ ಶಕ್ತಿವಂತರು. ನಾಯಕತ್ವ ಗುಣಗಳಿಗೆ ಹೆಸರಾದ ಬಂಟರು ಸಮಾಜದಲ್ಲಿ ಎಲ್ಲ ವರ್ಗದ ಜನರನ್ನು ಒಂದೇ ವೇದಿಕೆಯಲ್ಲಿ ತರುವ ಕಾರ್ಯಕ್ರಮಗಳನ್ನು ಆಯೋಜಿಸುವುದು ಶ್ಲಾಘನೀಯ ಎಂದರು.
ಹೇರಂಭ ಇಂಡಸ್ಟ್ರೀಸ್ ಆಡಳಿತ ನಿರ್ದೇಶಕ ಸದಾಶಿವ ಶೆಟ್ಟಿ ಕನ್ಯಾನ ಮಾತನಾಡಿ, ನಾನು ಕೂಡ ಬಂಟರ ಸಂಘದ ನೆರವಿನಿಂದ ಶಿಕ್ಷಣ ಪಡೆದು ಈ ಮಟ್ಟಕ್ಕೆ ಏರಿದ್ದೇನೆ. ಶಿಕ್ಷಣದ ಮಹತ್ವವನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಶಿಕ್ಷಣದಿಂದ ಪ್ರಗತಿ ಸಾಧ್ಯ ಎಂದರು.
ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಬ್ಯಾಂಕ್ ಆಫ್ ಬರೋಡ ವಲಯ ಮುಖ್ಯಸ್ಥೆ ಗಾಯತ್ರಿ ಆರ್., ಮುಂಬಯಿ ಉದ್ಯಮಿ ಕೆ.ಕೆ. ಶೆಟ್ಟಿ ಕಾಸರಗೋಡು, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಮುರಳೀಧರ ಹೆಗ್ಡೆ, ಉಚ್ಚಿಲ ಮೊಗವೀರ ಮಹಾಸಭಾದ ಅಧ್ಯಕ್ಷ ಜಯ ಸಿ.ಸುವರ್ಣ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ಲಯನ್ಸ್ ಗವರ್ನರ್ ಮೆಲ್ವಿನ್ ಡಿ’ಸೋಜಾ, ದ.ಕ. ಜಿಲ್ಲಾ ಸಂಚಾಲಕ ಬಿ. ನಾಗರಾಜ್ ಶೆಟ್ಟಿ, ಕಾಸರಗೋಡು ಜಿಲ್ಲಾ ಸಂಚಾಲಕ ಸಂಜೀವ ಶೆಟ್ಟಿ, ಬಂಟರ ಮಾತೃ ಸಂಘದ ಪ್ರದಾನ ಕಾರ್ಯದರ್ಶಿ ಕೆ.ಎಂ. ಶೆಟ್ಟಿ, ಕೋಶಾಧಿಕಾರಿ ಸಿ.ಎ. ರಾಮ ಮೋಹನ್ ರೈ, ಸಂಜೀವ ಶೆಟ್ಟಿ ಸಂಪಿಗೆ ಅಡಿ ಮುಂತಾದವರು ಉಪಸ್ಥಿತರಿದ್ದರು.
ವೈದ್ಯಕೀಯ ಕ್ಷೇತ್ರದ ಸಾಧಕಿ ಡಾ|ಅಮೃತ ಭಂಡಾರಿ, ಕಂಬಳ ಕ್ಷೇತ್ರದ ಸಾಧಕ ಕೊಳಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ, ಕೈಗಾರಿಕಾ ಕ್ಷೇತ್ರದ ಸಾಧಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರನ್ನು ಸಮ್ಮಾನಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮಾನಾಥ ಶೆಟ್ಟಿ ಪ್ರಸ್ತಾವಿಸಿದರು. ಆಶಾಜ್ಯೋತಿ ರೈ ವಂದಿಸಿದರು. ಮಂಜುಳಾ ಶೆಟ್ಟಿ, ಪ್ರಕಾಶ್ ಮೆಲಾಂಟ ನಿರೂಪಿಸಿದರು.