Advertisement

ಬಂಟರವಾಣಿ ಪ್ರತಿಭಾ ಸ್ಪರ್ಧೆ, ರಾತ್ರಿ ಶಾಲೆಗಳ ವಾರ್ಷಿಕೋತ್ಸವ 

01:32 PM Feb 21, 2017 | |

ಮುಂಬಯಿ: ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಬಯಿ ಬಂಟರ ಸಂಘದ ಕೊಡುಗೆ ಅಪಾರವಾಗಿದೆ. ಅದರ ಎರಡು ಕಣ್ಣುಗಳಂತಿರುವ ಎರಡು ರಾತ್ರಿ ಶಾಲೆಗಳಿಂದಾಗಿ ಅನೇಕ ಮಹನಿಯರು ಶಿಕ್ಷಣವನ್ನು ಪಡೆದು ಇಂದು ಪ್ರತಿಷ್ಠಿತ ವ್ಯಕ್ತಿಗಳಾಗಿ ಕಂಗೊಳಿಸುತ್ತಿದ್ದಾರೆ. ಇದೇ ಬಂಟರ ಸಂಘ ರಾತ್ರಿಶಾಲೆಯಿಂದಾಗಿ ನಾನು ಶಿಕ್ಷಣವನ್ನು ಪಡೆಯಲು ಸಾಧ್ಯವಾಯಿತು. ನನ್ನ ಯಶಸ್ಸಿಗೆ ಈ ಬಂಟರ ಸಂಘವೇ ಕಾರಣವಾಗಿದೆ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ. ಆದ್ದರಿಂದ ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭಾ ಸಂಪನ್ನರಾಗಿ ಬೆಳೆಯಬೇಕು ಎಂದು ಭವಾನಿ ಶಿಪ್ಪಿಂಗ್‌ ಸರ್ವಿಸ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೆ. ಡಿ. ಶೆಟ್ಟಿ ಅವರು ಅಭಿಪ್ರಾಯಿಸಿದರು.

Advertisement

ಫೆ. 18ರಂದು ಅಪರಾಹ್ನ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆದ ಸಂಘದ ಮುಖವಾಣಿ ಬಂಟರವಾಣಿ ಅಂತರ್‌ಶಾಲಾ-ಕಾಲೇಜು ಪ್ರತಿಭಾಸ್ಪರ್ಧೆ ಹಾಗೂ ಸಂಘದ ರಾತ್ರಿ ಶಾಲೆಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ  ಮಾತನಾಡಿದ ಅವರು, ಬಂಟರ ಸಂಘದ ಹೆಮ್ಮೆಯ ಪತ್ರಿಕೆ ಬಂಟರವಾಣಿ ಶಾಂತಾರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಉತ್ತಮ ರೀತಿಯಲ್ಲಿ ಮೂಡಿಬರುತ್ತಿದ್ದು, ಪತ್ರಿಕೆಗೆ ಒಂದು ವಿಶೇಷ ಮೆರುಗನ್ನು ನೀಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಬಂಟರವಾಣಿ ಮತ್ತು ಬಂಟರ ಸಂಘವು ಮಕ್ಕಳಿಗೆ ವಿಶೇಷ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಸಂಘ ಹಾಗೂ ಪತ್ರಿಕೆಯ ಸದುಪಯೋಗವನ್ನು ಮಕ್ಕಳು ಪಡೆಯಬೇಕು ಎಂದರು.

ನಮ್ಮ ಏಕತೆ ಇತರರಿಗೆ ಮಾದರಿ
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಎಸ್‌. ಎಂ. ಶೆಟ್ಟಿ  ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಜಯರಾಮ ಎನ್‌. ಶೆಟ್ಟಿ ಅವರು ಮಾತನಾಡಿ, ಬಂಟರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಮನೋಭಾವವನ್ನು ಹೊಂದಿದ್ದಾರೆ. ನಮ್ಮ ಏಕತೆಯ ಇತರರಿಗೆ ಮಾದರಿಯಾಗಿದೆ. ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಎನ್‌. ವಿವೇಕ್‌ ಶೆಟ್ಟಿ ಹಾಗೂ ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಶೆಟ್ಟಿ ಅವರು ಯಾವುದೇ ಕಾರ್ಯಕ್ರಮವನ್ನು ನಡೆಸಿದರೂ ಅದು ಯಶಸ್ವಿಯಾಗುತ್ತದೆ ಎಂದು ನುಡಿದು ಅವರನ್ನು ಅಭಿನಂದಿಸಿದರು. ವಿದ್ಯಾರ್ಥಿಗಳು ವಿದ್ಯೆಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಬೇಕು. ಅದರಲ್ಲೂ ಎಸ್‌ಎಸ್‌ಸಿಯಲ್ಲಿರುವ ಮಕ್ಕಳಿಗೆ ಈ ಹಂತವು ಜೀವನದ ಬಹಳ ಪ್ರಾಮುಖ್ಯತೆ ಇರುವ ಹಂತವಾಗಿದೆ ಎಂದರು.

ಸಂಘದ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭಲ್ಲಿ ಕವಿ, ಸಾಹಿತಿ, ಪತ್ರಪುಷ್ಪದ ಸಂಪಾದಕ ರಾಮ್‌ಮೋಹನ್‌ ಶೆಟ್ಟಿ ಬಳುRಂಜೆ ಅವರನ್ನು  ಸಮ್ಮಾನಿಸಲಾಯಿತು.

ಸ್ವಾಗತಿಸಿ ಮಾತನಾಡಿದ ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಶೆಟ್ಟಿ ಅವರು, ಬಂಟರವಾಣಿಯನ್ನು ವಿಶೇಷ ರೀತಿಯಲ್ಲಿ ಹೊರ ತರುವಲ್ಲಿ ನನಗೆ ಎಲ್ಲರ ಸಹಕಾರ ದೊರೆತಿದ್ದು, ಕಳೆದ ಮೂರು ವರ್ಷಗಳಿಂದ ಈ ಪತ್ರಿಕೆಯು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿ, ಬೆಳೆಯುತ್ತಿರುವ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲೂ ಯಶಸ್ವಿಯಾಗಿದೆ. ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ, ಸಂಪಾದಕ ಪ್ರೇಮನಾಥ್‌ ಶೆಟ್ಟಿ  ಮುಂಡ್ಕೂರು, ಪತ್ರಿಕಾ ಮುದ್ರಕರಾದ ಸರಿತಾ ಆರ್ಟ್ಸ್ ಪ್ರಿಂಟರ್ನ ನಾರಾಯಣ ಶೆಟ್ಟಿ ಅವರ ಸೇವೆ ಅನನ್ಯವಾಗಿದೆ. ಬಂಟರ ಸಂಘ, ದಾನಿಗಳು, ಲೇಖಕರು, ಸಾಹಿತಿಗಳ  ಸಹಕಾರದಿಂದ ಪತ್ರಿಕೆಯು ಇಂದು ವೈವಿಧ್ಯತೆಗಳಿಂದ ಮೂಡಿ ಬರುತ್ತಿದ್ದು, ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Advertisement

ಮಕ್ಕಳಿಗೆ  ಪ್ರೋತ್ಸಾಹ‌ 
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಎನ್‌. ವಿವೇಕ್‌ ಶೆಟ್ಟಿ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಸಂಘವು ಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ಕಾಳಜಿ ವಹಿಸುತ್ತಿದೆ. ಪ್ರತಿವರ್ಷವೂ ರಾತ್ರಿಶಾಲಾ ಮಕ್ಕಳಿಗಾಗಿ ಹಲವು ರೀತಿಯಿಂದ ಸಹಕರಿಸುತ್ತಿದೆ. ರಾತ್ರಿಶಾಲೆಗಳಲ್ಲಿ ಕಲಿಯುವ ಮಕ್ಕಳ ಸಂಖ್ಯೆ ಕಡಿಮೆಯಿದ್ದರೂ ಕೂಡಾ ಬರುವಂತಹ ಮಕ್ಕಳಿಗೆ ನಾವು ಪ್ರೋತ್ಸಾಹ ನೀಡುತ್ತಾ, ಅವರಿಗೆ ಎಲ್ಲಾ ರೀತಿಯಿಂದಲೂ ಸ್ಪಂದಿಸುತ್ತಿದ್ದೇವೆ. ಪಾಲಕರು ಇಂದು ಮಕ್ಕಳ ಶಿಕ್ಷಣಕ್ಕೆ  ಪ್ರಾಧಾನ್ಯತೆ ನೀಡುತ್ತಿದ್ದಾರೆಂಬುದು ಸಂತೋಷದ ಸಂಗತಿ  ಎಂದು ಹೇಳಿದರು.

ವಿಶೇಷ ಆಕರ್ಷಣೆಯಾಗಿ ತಾರಕ್‌ ಮೆಹ¤ ಕಾ ಉಲ್ಟಾ ಚಷ್ಮಾ ಧಾರವಾಹಿಯ ಕಲಾವಿದರುಗಳಾದ ಬಾಗಾ ಯಾನೆ ತನ್ಮಯ್‌ವೆಕಾರಿಯಾ ಅವರು ಉಪಸ್ಥಿತರಿದ್ದು ಮಕ್ಕಳನ್ನು ರಂಜಿಸಿದರು. ಇದೇ ಸಂದರ್ಭದಲ್ಲಿ ಸಂಘದ ವಿವಿಧ ಪ್ರಾದೇಶಿಕ ಸಮೀತಿಗಳ ಮಹಿಳಾ ವಿಭಾಗ, ಯುವ ವಿಭಾಗಕ್ಕೆ ಸಾಮೂಹಿಕ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯ ತೀರ್ಪುಗಾರರಾಗಿ ಪದ್ಮನಾಭ ಸಸಿಹಿತ್ಲು, ಗಣೇಶ್‌ ಎರ್ಮಾಳ್‌, ಮನೋಹರ್‌ ಶೆಟ್ಟಿ ನಂದಳಿಕೆ, ಸನತ್‌ ಕುಮಾರ್‌ ಜೈನ್‌, ಲತಾ ಸಂತೋಷ್‌ ಶೆಟ್ಟಿ, ಪ್ರಶಾಂತಿ ಡಿ. ಶೆಟ್ಟಿ ಅವರು ಸಹಕರಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಜತೆ ಕೋಶಾಧಿಕಾರಿ ಮಹೇಶ್‌ ಎಸ್‌. ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯದರ್ಶಿ ಭಾಸ್ಕರ್‌ ಶೆಟ್ಟಿ ಕಾರ್ನಾಡ್‌, ಶಾಲಾ ಮೇಲ್ವಿಚಾರಕ ಸಂಜೀವ ಎಂ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ ಅವರು ಉಪಸ್ಥಿತರಿದ್ದರು. ಬಂಟರವಾಣಿಯ ಸಂಪಾದಕ ಪ್ರೇಮನಾಥ ಶೆಟ್ಟಿ ಮುಂಡ್ಕೂರು ಸಮ್ಮಾನ ಪತ್ರ ವಾಚಿಸಿದರು. ಗೌರವ ಸಂಪಾದಕ ಅಶೋಕ್‌ ಪಕ್ಕಳ, ಸಂಘಟಕ ಕರ್ನೂರು ಮೋಹನ್‌ ರೈ ಅವರು ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕೋಶಾಧಿಕಾರಿ ಸಿಎ ರಮೇಶ್‌ ಎ. ಶೆಟ್ಟಿ ವಂದಿಸಿದರು.
ಚಿತ್ರ-ವರದಿ : ಸುಭಾಷ್‌  ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next