ಶಿರ್ವ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನಲ್ಲಿ ಅಂತರ ಕಾಲೇಜು ತಾಂತ್ರಿಕ-ಸಾಂಸ್ಕೃತಿಕ ಉತ್ಸವ ಅನಂತೋತ್ಸವ ಕಾರ್ಯಕ್ರಮವು ಮಾ.23ರಂದು ಸಂಸ್ಥೆಯ ಆವರಣದಲ್ಲಿ ನಡೆಯಿತು. ಇತ್ತೀಚೆಗೆ ನಿಧನರಾದ ಕಾಲೇಜಿನ ಪ್ರಾಧ್ಯಾಪಕ ಅನಂತೇಶ್ ರಾವ್ ಅವರಿಗೆ ಶ್ರದ್ಧಾಂಜಲಿ ಸಮರ್ಪಣೆಯಾಗಿ ವರ್ಣೋತ್ಸವವನ್ನು ಅನಂತೋತ್ಸವವನ್ನಾಗಿ ನಡೆಸಲಾಗಿದೆ.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶ್ರೀ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು ಆರ್ಶಿರ್ವಚನ ನೀಡಿ ಸರಿಯಾದ ಪ್ರಯತ್ನ ಮತ್ತು ಉತ್ಸಾಹದಿಂದ ಜೀವನದಲ್ಲಿ ಏನನ್ನಾದರು ಸಾಧಿಸಬಹುದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮುಖ್ಯ ಅತಿಥಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಅನಿಕೃತಿ ಎಂಜಿನಿಯರಿಂಗ್ ಪ್ರೈ.ಲಿ ಮತ್ತು ಪೆಬಲ್ ಗ್ರೇ ಡಿಸೈನ್ ಸ್ಟುಡಿಯೋದ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ವಿ. ಕೋಟ್ಯಾನ್ ಮಾತನಾಡಿ ವಿದ್ಯಾರ್ಥಿ ಜೀವನದ ನಂತರ ಒಬ್ಬ ವ್ಯಕ್ತಿಯು ವೃತ್ತಿ ಜೀವನದಲ್ಲಿ ನಿಜವಾದ ಕಲಿಕೆಯನ್ನು ನಡೆಸಬೇಕಾಗಿದ್ದು,ಅದಕ್ಕೆ ಸೂಕ್ತ ರೀತಿಯ ತಯಾರಿಯನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮಾಡುವುದು ತೀರಾ ಅಗತ್ಯ ಎಂದು ಹೇಳಿದರು.
ಹಳೆವಿದ್ಯಾರ್ಥಿ ಸಿಂಗಾಪುರ ಆಸ್‌ಪೈರ್ ಎಫ್‌ಟಿಯ ಹಿರಿಯ ಪ್ರಾಡೆಕ್ಟ್ ಡಿಸೈನರ್ ನಿಖೀಲ್ ಆಚಾರ್ಯ ಮಾತನಾಡಿ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಜಯಿಸಲು ಹೊಂದಾಣಿಕೆಯ ಪ್ರಾಮುಖ್ಯತೆಯ ಬಗ್ಗೆ ಹೇಳಿದರು. ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಮಾತನಾಡಿದರು.
Related Articles
ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ವರ್ಷದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಮೆಶಿನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿ ಮನೀಶ್ ದಾರ ಮತ್ತು ಮೊಳೆಯಿಂದ ಮಾಡಿದ ಸ್ವಾಮೀಜಿಯವರ ಭಾವಚಿತ್ರವನ್ನು ಸ್ವಾಮೀಜಿಯವರಿಗೆ ಹಸ್ತಾಂತರಿಸಲಾಯಿತು.
ಸಂಸ್ಥೆಯ ಪ್ರಾಂಶುಪಾಲ ಡಾ| ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಡಾ| ಗಣೇಶ್ ಐತಾಳ್ ವಂದಿಸಿದರು.
ಸಮಾರೋಪ ಸಮಾರಂಭ
ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರ ಕಾಲೇಜು ಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನೊಳಗೊಂಡ ಅನಂತೋತ್ಸವ ಸಮಾರೋಪ ಸಮಾರಂಭವು ಮಾ.23ರಂದು ಕಾಲೇಜಿನ ಆವರಣದಲ್ಲಿ ನಡೆಯಿತು. ಕರ್ನಾಟಕದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಂಸ್ಕೃತಿಕ ಹಬ್ಬದಲ್ಲಿ ಭಾಗವಹಿಸಿದ್ದರು.
ಮುಖ್ಯ ಅತಿಥಿ ಏಷ್ಯನ್ ಪೈಂಟ್ಸ್‌ನ ಮಾಜಿ ಸಿಇಒ ಜಗದೀಶ್ ಆಚಾರ್ಯ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸತ್ಯ ಮತ್ತು ನಮ್ರತೆಯನ್ನು ಹೊಂದಿರಬೇಕಿದ್ದು, ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ದೀರ್ಘಾವಧಿಯ ಪರಿಣಾಮಗಳ ಬಗ್ಗೆ ಯೋಚಿಸಬೇಕು. ಜೀವನದಲ್ಲಿ ಸಂತೋ‚ವನ್ನು ಅನುಭವಿಸಲು ಜೀವನದಲ್ಲಿ ಸಮತೋಲನವನ್ನು ಹೊಂದಿರಬೇಕು ಎಂದರು.
ವಿವಿಧ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಂಗಳೂರಿನ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯ ತಂಡ ಪ್ರಥಮ ಸ್ಥಾನ ಹಾಗೂ ಪುತ್ತೂರಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯ ತಂಡ ದ್ವಿತೀಯ ಸ್ಥಾನ ಪಡೆಯಿತು. ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ| ತಿರುಮಲೇಶ್ವರ ಭಟ್, ಉಪಪ್ರಾಂಶುಪಾಲ ಡಾ| ಗಣೇಶ್ ಐತಾಳ್ ವೇದಿಕೆಯಲ್ಲಿದ್ದರು. ರೆನಿಟಾ ಮೋನಿಸ್ ಅನಂತೋತ್ಸವದ ವರದಿ ವಾಚಿಸಿದರು. ಸವಿತಾ ಶೆಣೈ ಪರಿಚಯಿಸಿದರು. ಪ್ರಾಧ್ಯಾಪಕರಾದ ಅರುಣ್ ಉಪಾಧ್ಯಾಯ ಮತ್ತು ವಿಜೇತಾ ತಾಂತ್ರಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವಿಜೇತರ ಪಟ್ಟಿ ವಾಚಿಸಿದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ|ಲೊಲಿಟಾ ಪ್ರಿಯ ಕ್ಯಾಸ್ಟಲಿನೋ ಸ್ವಾಗತಿಸಿದರು. ಖುಶಿ ಬಂಗೇರ ಮತ್ತು ಅದಿತಿ ನಾಯಕ್ ಕಾರ್ಯಕ್ರಮ ನಿರೂಪಿಸಿ,ನಾಗರಾಜ್ ರಾವ್ ವಂದಿಸಿದರು.