Advertisement

ಮದ್ಯ ನಿಷೇಧಿಸಿ,ಮಹಿಳೆಯರಿಂದ ಹಣ ಕೊಡಿಸುವೆ: ಮೇಧಾ ಪಾಟ್ಕರ್‌ ​​​​​​​

03:45 AM Feb 12, 2017 | Team Udayavani |

ಆಳಂದ: ಕರ್ನಾಟಕಕ್ಕೆ 16 ಸಾವಿರ ಕೋಟಿ ರೂ. ಆದಾಯ ತಂದು ಕೊಡುವ ಮದ್ಯವನ್ನು ನಿಷೇಧಿಸಲು ಸಾಧ್ಯವಾಗದೆಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಸರ್ಕಾರ ಮದ್ಯ ನಿಷೇಧಿಸಿದರೆ ಅಷ್ಟೂ ಮೊತ್ತವನ್ನು ಮಹಿಳೆಯರಿಂದ ಸಂಗ್ರಹಿಸಿಕೊಡುತ್ತೇವೆ ಎಂದು ಪರಿಸರವಾದಿ, ನಶಾಮುಕ್ತ ಭಾರತ ಆಂದೋಲನ ಅಧ್ಯಕ್ಷೆ ಮೇಧಾ ಪಾಟ್ಕರ್‌ ಆಗ್ರಹಿಸಿದರು.

Advertisement

ಪಟ್ಟಣದ ಬಾಲಕರ ಜೂನಿಯರ್‌ ಕಾಲೇಜು ಆವರಣದಲ್ಲಿ ಮಹಿಳಾ ಜನ ಜಾಗೃತಿ ಆಂದೋಲನ ಸಮಿತಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್‌ ಸ್ತ್ರೀ ಶಕ್ತಿ ಸಮಾವೇಶದಲ್ಲಿ ಅವರು ಮಾತನಾಡಿದರು. ಮದ್ಯ ಮಾರಾಟದಿಂದ ಬರುವ ಆದಾಯದ ಕಡೆಗೆ ನೋಡುವ ಮುಖ್ಯಮಂತ್ರಿಗಳಿಗೆ ಮದ್ಯಪಾನದಿಂದ ಜನರು ಮನೆ, ಮಠ ಕಳೆದುಕೊಂಡು ಬೀದಿಪಾಲಾಗುತ್ತಿರುವುದು ಕಾಣುತ್ತಿಲ್ಲ. ಸರ್ಕಾರ ಮದ್ಯ ನಿಷೇಧಿಸಿದರೆ ಅದಕ್ಕೆ ಪರ್ಯಾಯವಾಗಿ 16 ಸಾವಿರ ಕೋಟಿ ರೂ.ಗಳನ್ನು ಮಹಿಳೆಯರಿಂದಲೇ ಸಂಗ್ರಹಿಸಿಕೊಡುತ್ತೇವೆಂದು ಸವಾಲು ಹಾಕಿದರು.

ಕೆಲ ರಾಜ್ಯಗಳಲ್ಲಿ ಮದ್ಯ ನಿಷೇಧವಿದ್ದರೂ ಎಸ್‌ಎಂಎಸ್‌ ಮೂಲಕ ಮನೆ ಬಾಗಿಲಿಗೆ ಮದ್ಯ ಬರುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಬಸವಣ್ಣ, ಅಕ್ಕಮಹಾದೇವಿ ಜನಿಸಿದ ನಾಡಿನಲ್ಲಿ ಮದ್ಯ ಮಾರಾಟ ಬೇಡ. ಮದ್ಯಮುಕ್ತ ಸಮಾಜಕ್ಕೆ ಕರ್ನಾಟಕದಿಂದಲೇ ಆಂದೋಲನ ಆರಂಭವಾಗಿ ದೇಶವ್ಯಾಪಿಗೊಳಿಸಿ ಪರಿವರ್ತನೆಗೆ ನಾಂದಿ ಹಾಡಲು ಮುಂದಾಗಬೇಕೆಂದು ಮಹಿಳಾ ಸಮುದಾಯಕ್ಕೆ ಕರೆ ನೀಡಿದರು.

ಈ ಭಾಗದಲ್ಲಿ ಶಾಸಕ ಬಿ.ಆರ್‌ ಪಾಟೀಲರು ಕೈಗೊಳ್ಳುತ್ತಿರುವ ಜನಪರ ಆಂದೋಲನಗಳಿಗೆ ಮಹಿಳೆಯರು ಸಾತ್‌ ನೀಡಬೇಕು. ಅದಕ್ಕೆ ಪ್ರತಿಯಾಗಿ ಶಾಸಕರು ಮಹಿಳೆಯರ ಪರ ಧ್ವನಿಯಾಗಿ ನಿಂತುಕೊಳ್ಳಲಿದ್ದಾರೆ ಎಂದು ಹೇಳಿದ ಮೇಧಾ, ನಿಂಬಾಳ ಗ್ರಾಮದಲ್ಲಿ ಮದ್ಯ ಮುಕ್ತ ಮಾಡಲು ಮುಂದಾಗಿದ್ದ ಮಹಿಳೆಯರನ್ನು ವೇದಿಕೆಗೆ ಆಹ್ವಾನಿಸಿ ಮೆಚ್ಚುಗೆ ವ್ಯಕ್ತಪಡಿಸಿ ಬೆಂಬಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next