Advertisement

ಹೊಸ ವರ್ಷದ ನೆಪದಲ್ಲಿ ಬ್ಯಾನರ್‌ ಭರಾಟೆ

12:20 PM Jan 01, 2018 | Team Udayavani |

ಬೆಂಗಳೂರು: “ನಗರದಲ್ಲಿ ಎಲ್ಲೆಂದರಲ್ಲಿ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ ಹಾಕುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಈಚೆಗಷ್ಟೇ ನಡೆದ ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

Advertisement

ಆದರೆ ಹೀಗೆ ನಿರ್ಣಯ ಕೈಗೊಂಡ ಬೆನ್ನಲ್ಲೇ ಹೊಷ ವರ್ಷ ಬಂದಿರುವುದು ಹಾಗೂ ಚುನಾವಣೆ ಸಮೀಪಿಸಿರುವುದು ರಾಜಕಾರಣಿಗಳ ಪ್ರಚಾರದ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ಹೀಗಾಗಿ ನಗರಾದ್ಯಂತ ಎಲ್ಲೆಲ್ಲೂ ರಾಜಕಾರಣಿಗಳು ಮತ್ತವರ ಬೆಂಬಲಿಗರ ಹೊಸ ವರ್ಷದ “ಶುಭಾಷಯ’ ಕೋರುವ ಬ್ಯಾನರ್‌, ಫ್ಲೆಕ್ಸ್‌ಗಳದ್ದೇ ಭರಾಟೆ. 

ಅನಧಿಕೃತವಾಗಿ ಬ್ಯಾನರ್‌, ಹೋರ್ಡಿಂಗ್ಸ್‌ ಹಾಕುವುದು ಶಿಕ್ಷಾರ್ಹ ಅಪರಾಧ ಎಂಬ ಕಾನೂನಿಗೇ ಸವಾಲು ಎಂಬಂತೆ ಹಾಲಿ ಶಾಸಕರು ಹಾಗೂ ಮುಂದಿನ ವಿಧಾನಸಭೆ ಚುನಾವಣೆಗೆ ಟಿಕೆಟ್‌ ಆಕಾಂಕ್ಷಿಗಳಾಗಿರುವ ರಾಜಕೀಯ ನೇತಾರರ ಬ್ಯಾನರ್‌, ಬಂಟಿಂಗ್ಸ್‌ ಹಾಗೂ ಫ್ಲೆಕ್ಸ್‌ಗಳು ನಗರದ ತುಂಬೆಲ್ಲಾ ರಾರಾಜಿಸುತ್ತಿವೆ.

ಕ್ಷೇತ್ರದ ಜನತೆಗೆ ಹೊಸ ವರ್ಷದ ಶುಭಾಷಯ ಕೋರುವ ನೆಪದಲ್ಲಿ ಈ ನೇತಾರರು ಚುನಾವಣಾ ಪ್ರಚಾರಕ್ಕೆ ಇಳಿದಂತಿದೆ. ಇದೇ ವೇಳೆ ಕೆಲವು ಕ್ಷೇತ್ರಗಳಲ್ಲಿ ಹೊಸ ವರ್ಷದ ಹಿಂದಿನ ದಿನವೇ ಶಾಸಕರು ಮತದಾರರಿಗೆ “ಕಾಣಿಕೆ’ಗಳನ್ನು ನೀಡಿದ್ದಾರೆ. 

ಇವರೇ ಕಾಂಗ್ರೆಸ್‌ ಅಭ್ಯರ್ಥಿ: ತಿ.ನರಸೀಪುರ ಕ್ಷೇತ್ರದ ಶಾಸಕರಾಗಿರುವ ಲೋಕೋಪಯೋಗಿ ಸಚಿವ ಡಾ. ಎಚ್‌.ಸಿ.ಮಹದೇವಪ್ಪ ಮುಂದಿನ ಚುನಾವಣೆಯಲ್ಲಿ ಸರ್‌ ಸಿ.ವಿ.ರಾಮನ್‌ ನಗರದಿಂದ ಸ್ಪರ್ಧಿಸಿಲಿದ್ದಾರೆ ಎಂಬ ವಿಚಾರದಲ್ಲಿ ತಿ.ನರಸೀಪುರ ಹಾಗೂ ಸರ್‌ ಸಿ.ವಿ.ರಾಮನ್‌ನಗರ ಕ್ಷೇತ್ರದ ಕಾರ್ಯಕರ್ತರಲ್ಲಿ ದೊಡ್ಡ ಗಲಾಟೆಯಾಗಿ, ಈ ವಿಚಾರ ಮುಖ್ಯಮಂತ್ರಿಯವರ ಮಟ್ಟಕ್ಕೂ ಹೋಗಿತ್ತು.

Advertisement

ಆದರೆ, “2018ರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ’ ಎಂದು ಸಿ.ವಿ.ರಾಮನ್‌ ನಗರ ಕ್ಷೇತ್ರಾದ್ಯಂತ ಡಾ. ಎಚ್‌.ಸಿ. ಮಹದೇವಪ್ಪ ಅವರ ಭಾವಚಿತ್ರವಿರುವ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಜತೆಗೆ ಇದೇ ಕ್ಷೇತ್ರದ ಹಾಲಿ ಶಾಸಕ ಎಸ್‌.ರಘು ಅವರು ಶುಭಾಷಯ ಕೋರುವ ಬ್ಯಾನರ್‌ಗಳ ಸಂಖ್ಯೆಯೂ ಕಡಿಮೆಯಿಲ್ಲ. 

ರಾತ್ರೋರಾತ್ರಿ ಗಿಫ್ಟ್ ಹಂಚಿಕೆ: ಅದೇ ರೀತಿ ಹೊಸ ವರ್ಷಾಚರಣೆಯ ಕೇಂದ್ರ ಸ್ಥಳ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ಶಾಂತಿನಗರ ಶಾಸಕ ಎನ್‌.ಎ.ಹ್ಯಾರಿಸ್‌ ಅವರ “ಶುಭಾಷಯ’ದ ಬ್ಯಾನರ್‌ಗಳನ್ನು ಹಾಕಲಾಗಿದೆ.

ಅಲ್ಲದೇ ಶನಿವಾರ ರಾತ್ರಿ 40ರಿಂದ 50 ಜನರಿದ್ದ ಶಾಸಕರ ಬೆಂಬಲಿಗರ ತಂಡ ಕ್ಷೇತ್ರಾದ್ಯಂತ ಮತದಾರರಿಗೆ ಹೊಸವರ್ಷದ “ಗಿಫ್ಟ್’ ನೀಡಿದೆ. ಹಸ್ತದ ಚಿಹ್ನೆಯೊಂದಿಗೆ ಶಾಸಕ ಹ್ಯಾರಿಸ್‌ ಅವರ ಹೆಸರಿರುವ ಕವರ್‌ಗಳಲ್ಲಿ ಶಾಲು ಮತ್ತು ಬ್ಲಾಂಕೆಟ್‌ಗಳನ್ನು ಹಂಚಲಾಗಿದೆ.

ಶಿವಾಜಿನಗರದ ಶಾಸಕ ಹಾಗೂ ನಗರಾಭಿವೃದ್ಧಿ ಸಚಿವ ಆರ್‌. ರೋಷನ್‌ ಬೇಗ್‌ ಕೂಡ ತಮ್ಮ ಪುತ್ರನ ಭಾವಚಿತ್ರ ಒಳಗೊಂಡಿರುವ ಹೊಸ ವರ್ಷದ ಶುಭಾಷಯಗಳ ಹೋರ್ಡಿಂಗ್ಸ್‌ಗಳನ್ನು ಕ್ಷೇತ್ರದ ಎಲ್ಲ ಕಡೆ ಅವಳವಡಿಸಿದ್ದಾರೆ.

ಹೆಬ್ಟಾಳ ಕ್ಷೇತ್ರದ ಶಾಸಕ ವೈ.ಎ.ನಾರಾಯಣಸ್ವಾಮಿ ಅವರ ಶುಭಾಷಯದ ಬ್ಯಾನರ್‌ಗಳ ಜತೆಗೆ, ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿರುವ ಹಾಲಿ ವಿಧಾನ ಪರಿಷತ್‌ ಸದಸ್ಯ ಭೈರತಿ ಸುರೇಶ್‌ ಅವರ ಬ್ಯಾನರ್‌, ಪ್ಲೆಕ್ಸ್‌ಗಳು ರಾರಾಜಿಸುತ್ತಿವೆ.

ಇದೇ ರೀತಿ ನಗರದ ಬಹುತೇಕ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಹಾಲಿ ಶಾಸಕರು ಹಾಗೂ ಟಿಕೆಟ್‌ ಆಕಾಂಕ್ಷಿಗಳ “ಶುಭಾಷಯ’ ಬ್ಯಾನರ್‌ಗಳದ್ದೇ ಭರಾಟೆ ಜೋರಾಗಿದೆ. ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿರುವ ಪಾಲಿಕೆ ಏನು ಮಾಡಲಿದೆ ಎಂದು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next