ನವದೆಹಲಿ: ಜನಪ್ರಿಯ ವಿಎಲ್ ಸಿ ಮೀಡಿಯಾ ಪ್ಲೇಯರ್ ಆ್ಯಪ್ ಅನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಆ್ಯಪಲ್ ಆ್ಯಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್ ನಲ್ಲಿ ವಿಎಲ್ ಸಿ ಮೀಡಿಯಾ ಪ್ಲೇಯರ್ ಡೌನ್ ಲೋಡ್ ಗೆ ಲಭ್ಯವಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಹೂಡಿಕೆ ನೆಪದಲ್ಲಿ ಹೋಟೆಲ್‌ಗೆ ಕರೆಸಿಕೊಂಡು ಅತ್ಯಾಚಾರ,ಕೊಲೆ ಬೆದರಿಕೆ: ಪ್ರಕರಣ ದಾಖಲು
ವರದಿಯ ಪ್ರಕಾರ, ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಅಡಿಯಲ್ಲಿ www.videolan.org ವೆಬ್ ಸೈಟ್ ಅನ್ನು ಭಾರತ ಸರ್ಕಾರ ನಿರ್ಬಂಧಿಸಿರುವುದಾಗಿ ವಿವರಿಸಿದೆ. ವಿಂಡೋಸ್ ಡಿವೈಸ್ ಗಳಲ್ಲಿ ವಿಎಲ್ ಸಿ ಮೀಡಿಯಾ ಪ್ಲೇಯರ್ ಅನ್ನು ಈಗಲೂ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಒಂದು ವೇಳೆ ನೀವು ಈಗಾಗಲೇ ವಿಎಲ್ ಸಿ ಮೀಡಿಯಾ ಪ್ಲೇಯರ್ ಅನ್ನು ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ ಟಾಪ್ ಗಳಲ್ಲಿ ಬಳಸುತ್ತಿದ್ದರೆ ಯಾವುದೇ ಸಮಸ್ಯೆ ಇಲ್ಲದೆ ಕಾರ್ಯನಿರ್ವಹಿಸಲಿದೆ ಎಂದು ವರದಿ ತಿಳಿಸಿದೆ.
ಭಾರತದಲ್ಲಿ ವಿಎಲ್ ಸಿ ಮೀಡಿಯಾ ಪ್ಲೇಯರ್ ನ ವೆಬ್ ಸೈಟ್ ಗೆ ಯಾಕೆ ನಿರ್ಬಂಧ ವಿಧಿಸಲಾಗಿದೆ ಎಂಬ ಬಗ್ಗೆ ಸರ್ಕಾರದಿಂದ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇನ್ನುಳಿದಂತೆ ಏರ್ ಟೆಲ್, ರಿಲಯನ್ಸ್ ಜಿಯೋ, ವೊಡಾಪೋನ್-ಐಡಿಯಾ ಸೇರಿದಂತೆ ಪ್ರಮುಖ ಇಂಟರ್ನೆಟ್ ಸರ್ವೀಸ್ ಪ್ರೊವೈಡರ್ಸ್ ಗಳು ಕೂಡಾ ಭಾರತದಲ್ಲಿ ವಿಎಲ್ ಸಿ ವೆಬ್ ಸೈಟ್ ಬಳಸಲು ಬಳಕೆದಾರರಿಗೆ ಅವಕಾಶ ನೀಡಿಲ್ಲ. ಯಾವುದೇ ವಿಪಿಎನ್ ಸರ್ವೀಸ್ ಬಳಸಿಕೊಂಡು ಫೋನ್ ಅಥವಾ ಲ್ಯಾಪ್ ಟಾಪ್ ನಲ್ಲಿ ವಿಎಲ್ ಸಿ ವೆಬ್ ಸೈಟ್ ಬಳಕೆ ಮಾಡಿಕೊಳ್ಳಬಹುದಾಗಿದೆ.
ವಿಎಲ್ ಸಿ ಮೀಡಿಯಾ ಪ್ಲೇಯರ್ ಅನ್ನು ಸುಮಾರು ಐದು ತಿಂಗಳ ಹಿಂದೆಯೇ ಸರ್ಕಾರದಿಂದಲಾಗಲಿ ಅಥವಾ ವಿಡಿಯೊಲಾನ್ ಸಂಸ್ಥೆಯಿಂದ ಯಾವುದೇ ಸೂಚನೆ ಇಲ್ಲದೇ ನಿಷೇಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಭಾರತದಲ್ಲಿ ವಿಎಲ್ ಸಿ ಮೀಡಿಯಾ ಪ್ಲೇಯರ್ ನಿಷೇಧಿಸಲು ಕಾರಣವೇನು?
ಚೀನಾ ಸರ್ಕಾರದ ರಹಸ್ಯ ಭಾಗವಾಗಿರುವ ಸಿಕಾಡಾ ಎಂಬ ಹೆಸರಿನ ಹ್ಯಾಕರ್ ಗಳ ಗುಂಪು ವಿಎಲ್ ಸಿ ಮೀಡಿಯಾ ಪ್ಲೇಯರ್ ಅನ್ನು ಬಳಸಿಕೊಂಡು ಮಾಲ್ವೇರ್ ಮೂಲಕ ಸೈಬರ್ ದಾಳಿ ನಡೆಸುತ್ತಿವೆ ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಆರೋಪಿಸಿದ್ದರು. ಆದರೆ ಈ ಕೃತ್ಯದಲ್ಲಿ ಚೀನಾ ಸರ್ಕಾರ ಶಾಮೀಲಾಗಿದೆ ಎಂಬ ಬಗ್ಗೆ ಭಾರತ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಪ್ರಸ್ತುತ ಈ ಕಾರಣದಿಂದಾಗಿಯೇ ವಿಎಲ್ ಸಿ ಮೀಡಿಯಾ ಪ್ಲೇಯರ್ ವೆಬ್ ಸೈಟ್ ಅನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ವರದಿ ತಿಳಿಸಿದೆ.