ಲಕ್ನೋ: ಕೇಸರಿ ವಸ್ತ್ರ ಧರಿಸಿದ್ದನೆಂಬ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ನಮಾಜ್ ಮಾಡಲು ಅವಕಾಶ ನೀಡದೇ, ಸಾರ್ವಜನಿಕವಾಗಿ ನಿಂದಿಸಿದ ಆರೋಪದ ಹಿನ್ನೆಲೆ ಮಸೀದಿಯ ಇಮಾಮ್ ಒಬ್ಬರ ವಿರುದ್ಧ ಕೇಸು ದಾಖಲಿಸಿರುವ ಘಟನೆ ಉತ್ತರ ಪ್ರದೇಶದ ಫಾರುಖಾಬಾದ್‌ನಲ್ಲಿ ವರದಿಯಾಗಿದೆ. ಶಂಸಾಬಾದ್ ನಿವಾಸಿಯಾದ ಆಸಿಫ್ ಅಲಿ ಎಂಬವರು ನಮಾಜ್ ಸಲ್ಲಿಸುವುದಕ್ಕಾಗಿ ಮಸೀದಿಗೆ ತೆರಳಿದ್ದರು. ಈ ವೇಳೆ ಇಮಾಮ್ ಅವರನ್ನು ತಡೆದಿದ್ದು, ಕೇಸರಿ ಹಿಂದೂಗಳ ಸೂಚಕ ಹಾಗಾಗಿ ಇದನ್ನು ಧರಿಸಿ ಮಸೀದಿಗೆ ಒಳಗೆ ಪ್ರವೇಶಿಸಕೂಡದು ಎಂದಿದ್ದಾರೆ. ಈ ವೇಳೆ ಆಸಿಫ್ ಇಮಾಮ್‌ರ ಮಾತನ್ನು ಧಿಕ್ಕರಿಸಿ, ಯಾವ ಬಣ್ಣವನ್ನೂ ಬೇಕಿದ್ದರು ಜನರು ಧರಿಸುವ ಸ್ವತಂತ್ರ್ಯವನ್ನು ಇಸ್ಲಾಮ್ ನೀಡಿದೆ ಎಂದು ವಾದಿಸಿದರು. ಇದರಿಂದ ಕೋಪಗೊಂಡ ಇಮಾಮ್, ಅವರನ್ನು ಸಾರ್ವಜನಿಕವಾಗಿ ಅವಮಾನಿಸಿದ್ದಾರೆ. ಈ ಹಿನ್ನೆಲೆ ಆಸಿಫ್ ದೂರು ನೀಡಿದ್ದಾರೆ. ಆ ದೂರನ್ನು ಆಧರಿಸಿ ಇಮಾಮ್ ವಿರುದ್ಧ ಐಪಿಸಿ ಸೆಕ್ಷನ್ 506ರ ಅನ್ವಯ ಕೇಸು ದಾಖಲಿಸಿ ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.