Advertisement

ಮರ ಉಳಿಸಲು ಕಸರತ್ತು: ಪಕ್ಕದಲ್ಲೇ ಗಿಡ ನೆಡಲು ನಿರ್ಧಾರ

01:55 AM Sep 21, 2018 | Karthik A |

ಉಡುಪಿ: ಬಹುಕಾಲದ ಬೇಡಿಕೆಯಾದ ಉಡುಪಿಯ ಸುಸಜ್ಜಿತ ಕೆ.ಎಸ್‌.ಆರ್‌.ಟಿ.ಸಿ. ಬಸ್‌ ನಿಲ್ದಾಣ ಕಾಮಗಾರಿ ಬನ್ನಂಜೆಯಲ್ಲಿ ಆರಂಭಗೊಂಡಿದ್ದರೂ ಮರಗಳನ್ನು ಕಡಿಯದೆ ಇರುವುದರಿಂದ ಕಾಮಗಾರಿ ವೇಗ ಪಡೆದಿಲ್ಲ. ಇಲ್ಲಿರುವ 25ಕ್ಕೂ ಅಧಿಕ ಮರಗಳಲ್ಲಿ ಕೆಲವು ಮರಗಳನ್ನಾದರೂ ಉಳಿಸಬೇಕೆಂಬುದು ಪರಿಸರ ವಾದಿಗಳ ಬೇಡಿಕೆ. ಇದಕ್ಕೆ ಪೂರಕವಾಗಿ ಅರಣ್ಯ ಇಲಾಖೆ ಕೂಡ ಸಾಧ್ಯವಿರುವಷ್ಟು ಮರ ಉಳಿಸಲು ಕೆಎಸ್‌ಆರ್‌ಟಿಸಿ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದೆ. ಮರ  ಕಡಿಯಲು ಅನುಮತಿ ನೀಡುವ ಪ್ರಕ್ರಿಯೆ ಪೂರ್ಣಗೊಂಡಿಲ್ಲದಿರುವುದರಿಂದ ಮರಗಳ ನಡುವೆ ಇರುವ ಜಾಗವನ್ನು ಸಮತಟ್ಟು ಮಾಡುವ ಕಾಮಗಾರಿ ಮಾತ್ರ ನಡೆಯುತ್ತಿದೆ.

Advertisement

ಸದ್ಯ 8 ಮರಗಳು ಮಾತ್ರ
‘ಒಟ್ಟು 25 ಮರಗಳ ತೆರವಿಗೆ ಅನುಮತಿಗಾಗಿ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದೇವೆ. ಅದರಲ್ಲೂ ಕಟ್ಟಡ ನಿರ್ಮಾಣಗೊಳ್ಳುವ ಸ್ಥಳದಲ್ಲೇ ಇರುವ 8 ಮರಗಳನ್ನು ಈಗ ಕಡಿಯುವುದು ತೀರಾ ಅನಿವಾರ್ಯವಾಗಿದೆ. ಇರುವ ಎರಡೂವರೆ ಎಕರೆ ಕೂಡ ಬಸ್‌ ನಿಲ್ದಾಣಕ್ಕೆ ಅಗತ್ಯವಿದೆ. ಬಸ್‌ ನಿಲ್ದಾಣ ಪ್ರವೇಶ ದ್ವಾರ ಬರುವಲ್ಲಿಯೇ ಮೂರು ಮರಗಳಿವೆ. ಅವುಗಳನ್ನು ತೆಗೆಯಲೇಬೇಕು. ಸದ್ಯಕ್ಕೆ ಮಧ್ಯದ ಜಾಗವನ್ನು ಹೊರತುಪಡಿಸಿ ಪಕ್ಕದಲ್ಲಿರುವ ಗಿಡಗಳನ್ನು ಹಾಗೆಯೇ ಉಳಿಸಿಕೊಂಡು ಕಾಮಗಾರಿ ನಡೆಸಿ ಅನಂತರ ಅಗತ್ಯ ಬಿದ್ದಾಗ ಕೆಲವು ಮರಗಳನ್ನು ತೆಗೆಯುತ್ತೇವೆ. 25 ಮರಗಳನ್ನು ತೆಗೆದರೆ ಇಲ್ಲಿಯೇ ಪಕ್ಕದಲ್ಲಿ ಬಸ್‌ ನಿಲ್ದಾಣದ ಪಶ್ಚಿಮ ಭಾಗದಲ್ಲಿ 50 ಗಿಡಗಳನ್ನು ನೆಡುವ ಯೋಜನೆ ಇದೆ. ಗಿಡ ನೆಡಲು ಈಗಾಗಲೇ ಅರಣ್ಯ ಇಲಾಖೆಗೆ ಹಣ ಪಾವತಿ ಮಾಡಲಾಗಿದೆ. ಕಾಮಗಾರಿ ಒಂದು ವರ್ಷದೊಳಗೆ ಪೂರ್ಣಗೊಳ್ಳಬೇಕಿದೆ’ ಎಂದು ಕೆ.ಎಸ್‌.ಆರ್‌.ಟಿ.ಸಿ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಪ್ರತಿಕ್ರಿಯಿಸಿದ್ದಾರೆ.

ಸಾಧ್ಯವಿರುವಷ್ಟು ಮರ ಉಳಿಸಲು ಸೂಚನೆ
25 ಮರಗಳನ್ನುಕಡಿಯಲು ಅನುಮತಿ ಕೇಳಿದ್ದಾರೆ. ಸಾಧ್ಯವಾದಷ್ಟು ಮರಗಳನ್ನು ಉಳಿಸಲು ಸೂಚಿಸಿದ್ದೇವೆ. ಅನುಮತಿ ಪ್ರಕ್ರಿಯೆ ಪೂರ್ಣಗೊಳ್ಳಲು ಸಹಜವಾಗಿಯೇ ಇನ್ನೂ ಕೆಲವು ದಿನಗಳ ಅಗತ್ಯವಿದೆ. ಷರತ್ತಿನ ಅನ್ವಯ ಅನುಮತಿ ನೀಡಲಾಗುತ್ತದೆ. ಒಂದೆಡೆ ಪ್ರಯಾಣಿಕರ ಸುರಕ್ಷತೆ ಮತ್ತೂಂದೆಡೆ ಮರಗಳನ್ನು ಉಳಿಸುವ ಜವಾಬ್ದಾರಿ ಎರಡನ್ನೂ ನಿಭಾಯಿಸುವ ಪ್ರಯತ್ನ ನಮ್ಮದಾಗಿದೆ. ಸಸಿಗಳನ್ನು ನೆಟ್ಟು ಬೆಳೆಸುವುದಕ್ಕಾಗಿ ಒಂದು ಮರಕ್ಕೆ 1,900 ರೂ.ಗಳನ್ನು ಕೆ.ಎಸ್‌.ಆರ್‌.ಟಿ.ಸಿ.ಯಿಂದ ಪಡೆದುಕೊಳ್ಳಲಾಗುತ್ತದೆ ಎಂದು ಉಡುಪಿ ವಲಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next