Advertisement

ಸ್ವಯಮಾಚಾರ್ಯ ಪುರುಷ ಬನ್ನಂಜೆ ಗೋವಿಂದಾಚಾರ್ಯ

01:20 AM Dec 14, 2020 | sudhir |

ಬಾಣನ ಕಾದಂಬರಿಯ ಅನುವಾದವಂತೂ ಕವಿ ಬೇಂದ್ರೆಯವರ ಮನ ಸೆಳೆದಿತ್ತು. ಭಾಷಾ ಪ್ರೇಮದ ಇನ್ನೊಂದು ಮುಖವಾಗಿ ಬನ್ನಂಜೆ ಕಾವ್ಯ ಇದೆ. ಒಂದು ನೆನಪನ್ನು ಹೇಳಬೇಕು. ಕನಕದಾಸರ ನಾಲ್ಕನೆಯ ಶತಮಾನೋತ್ಸವಕ್ಕೆ ಸಂಬಂಧಿಸಿ ಉಡುಪಿಯಲ್ಲೊಂದು ಕವಿಗೋಷ್ಠಿ ಏರ್ಪಾಟಾಗಿತ್ತು. ಬೇಂದ್ರೆಯವರು ಅಧ್ಯಕ್ಷರು. ಆ ಗೋಷ್ಠಿಯಲ್ಲಿ ಬನ್ನಂಜೆ ಒಂದು ಕವನ ಓದಿದರು. ಆದರ ಮೊದಲೆರಡು ಸಾಲು ಹೀಗಿತ್ತು: “ಕನಕದಾಸನ ಮನೆಗೆ ಕನ್ನ ಹಾಕಿದ ಕಳ್ಳ, ಕನಕ ಸಿಗಲಿಲ್ಲ.’
ಈ ಎರಡು ಸಾಲಿಗೆ ಬೇಂದ್ರ ಚಕಿತರಾದರು. ತಮ್ಮ ಭಾಷಣದಲ್ಲಿ ಈ ಸಾಲುಗಳನ್ನು ಉಲ್ಲೇಖ ಮಾಡಿ ಇದು ಕ್ರಾಂತಿಯ ಕಾವ್ಯ ಎಂದರು. ಈ ಪದ್ಯ ಯಾರಿಗೆ ಎಷ್ಟು ಅರ್ಥವಾಗುತ್ತೋ ಅವರಿಗೆ ಅಷ್ಟೇ ಪ್ರಾಪ್ತಿ ಎನ್ನುತ್ತ ಮತ್ತೆ ಕಳ್ಳ-ಕನಕ ಪದಗಳನ್ನು ಉಚ್ಚರಿಸಿದರು! ಆದರೆ ಇಂಥ ಪದ್ಯ, ಬನ್ನಂಜೆಗೆ ಮತ್ತೆ ಹೆಚ್ಚು ಬರೆಯಲಾಗಲಿಲ್ಲ.

Advertisement

ಕೀರ್ತಿಶೇಷ ಡಾ| ಬನ್ನಂಜೆ ಗೋವಿಂದಾ ಚಾರ್ಯರ ಬಗೆಗೆ ಮೊದಲು ಹೊಳೆಯುವ ಸಂಗತಿ ಇದು: ಆಚಾರ್ಯರಿಗೆ ಅಧ್ಯಯನ, ಅಧ್ಯಾಪನ; ವಾš¾ಯ ಕಲಾಪಗಳೇ ಜೀವನ ಎಂಬುದು- “ಜೀವನ’ ಎನ್ನುವುದರ ನಿಜವಾದ ಅರ್ಥದಲ್ಲಿ. ಆಚಾರ್ಯರಿಗೆ ಇದು ಉಪಜೀವನವಲ್ಲ; ಜೀವನ. ಇಡಿಯ ಬದುಕೇ ಒಂದು ವಾಜ್ಞೆಯ ಕಲಾಪವಾಗುವ ವಿಸ್ಮಯವನ್ನು ಬೇಂದ್ರೆಯವರು, “ಕಾವ್ಯಚರಿತವೆ ಸಾಕು, ಬೇರೆ ಚಾರಿತ್ರ್ಯ ಬೇಕೆ?’ ಎಂದು ಅದ್ಭುತವಾಗಿ ಬಣ್ಣಿಸಿದ್ದುಂಟು. “ಯೋಗ’ ಎನ್ನುವ ಅರ್ಥದಲ್ಲಿ “ಕಾವ್ಯೋದ್ಯೋಗ’ ಎಂಬ ಮಾತನ್ನೂ ಹೇಳಿದ್ದುಂಟು. ವಿದ್ಯೆಯೇ ವ್ಯಕ್ತಿತ್ವವಾಗಿ ಬಿಡುವ ಈ ಬಗೆಯ internalisation ಬನ್ನಂಜೆಯವರಲ್ಲಿ ನಾವು ಕಂಡಿದ್ದೇವೆ! ವಿದ್ಯೆಯೇ ವ್ಯಕ್ತಿತ್ವವಾಗುವಾಗ- ಇಂಥ ವಿದ್ಯೆಗೆ ಒಂದು ಹೊಸತನ; ಒಂದು ಜೀವಕಳೆ; ಇದು ಕಲಿತು ಬಂದದ್ದಲ್ಲ ಎಂಬ ಒಂದು ತಾಜಾಗುಣ ಇರುತ್ತದೆ; ತನ್ನ ಆಂತರಿಕ ಸಂಪನ್ಮೂಲದ ಜತೆ ಸದಾ ಒಡನಾಟ ಇರುತ್ತದೆ. ಇದು ಯಾವುದೋ ಕೆಲವು ಸಂದರ್ಭಗಳಿಗಾಗಿ ಮಾತ್ರ ಸಿದ್ಧವಾಗುವ ರೀತಿಯ ಕೃತಕ ವಿದ್ಯೆಯಲ್ಲ. ಸಂದರ್ಭಗಳೇ ಇದಕ್ಕಾಗಿ ಸೃಷ್ಟಿಯಾಗಬೇಕಲ್ಲದೆ ಇದು ಸಂದರ್ಭಕ್ಕಾಗಿ ಸೃಷ್ಟಿಯಾಗುವುದಲ್ಲ. ತನ್ನ ಅನುಭವವೆಂಬಂತೆ ಉಪನಿಷತ್ತಿನ ಬಗೆಗೆ, ಮಹಾಭಾರತದ ಬಗೆಗೆ, ಆಚಾರ್ಯ ಮಧ್ವರ ಕಾಣ್ಕೆಯ ಬಗೆಗೆ ಬನ್ನಂಜೆ ಮಾತಾಡುವರು. ಅಂಥ ಸಹಜತೆ, ಅನಾಯಾಸ, ಜೀವಂತಿಕೆ, spontainity.

ಸತ್ಯದ ಹುಡುಕಾಟ: ವಿದ್ಯೆಗೂ ವ್ಯಕ್ತಿತ್ವಕ್ಕೂ ಇರುವ ಬೇರ್ಪಡಿಸಲಾಗದ ಈ ಅಪೃಥಕ್‌ಸಿದ್ಧ ಸಂಬಂಧವನ್ನು ಅನುಭವಿಸುವುದೇ ನಿಜ ವಾದ ಭಾರತೀಯ ಗುಣ-ಅದರ ಜಾನಪದ ಮುಖ ದಲ್ಲಿಯೂ, ಅದರ ಶಿಷ್ಟ ಮುಖದಲ್ಲಿಯೂ, ವಿದ್ಯೆಯು ತನ್ನ ತಣ್ತೀಜ್ಞಾನ ಮುಖದಲ್ಲಿ ಅನ್ವೇಷ ಣಾತ್ಮಕವಾಗಿದೆ. ಅಂದರೆ ವಿಶಾಲವಾಗಿ ಹರಡಿ ರುವ ವೇದವಾಜ್ಞೆಯದಲ್ಲಿ ಅಡಗಿರುವ “ಸತ್ಯ’ ಯಾವುದು ಎನ್ನುವುದರ ಹುಡುಕಾಟವಾಗಿದೆ. ಹುಡುಕಾಟವಿಲ್ಲದೆ ಸತ್ಯದರ್ಶನವಿಲ್ಲ. ಆದುದ ರಿಂದಲೇ ಹುಡುಕಾಡುವುದಕ್ಕೆ ಯೋಗ್ಯವಾಗಿರುವಂತೆಯೇ ವಾš¾ಯದ ಅವಸ್ಥೆಯೂ ಹಾಸು-ಬೀಸುಗಳೂ ಇವೆ. ಆಚಾರ್ಯ ಮಧ್ವರಂತೂ ಪ್ರಮಾಣಗಳನ್ನು ಇತಿಹಾಸ ಪುರಾಣಗಳವರೆಗೂ ವಿಸ್ತರಿಸಿದವರು. ಆಚಾರ್ಯ ಶಂಕರರು ಪ್ರಮಾಣಗಳನ್ನು ಕಿರಿದುಗೊಳಿಸಿದರು -ಏಕಾಗ್ರತೆಗೆ ಅನುಕೂಲವಾಗ ಲೆಂದು. ಆದುದರಿಂದಲೇ ಒಂದೇ ವೇದದಲ್ಲಿ ಕರ್ಮಕಾಂಡ-ಜ್ಞಾನಕಾಂಡ ಎಂಬ ಭೇದ ಉಂಟಾಯಿತು. ಇದು ಶಂಕರರ ಮುನ್ನವೇ ಉಂಟಾಗಿತ್ತು ಕೂಡ. ಆಚಾರ್ಯ ಮಧ್ವರು, ಜ್ಞಾನವು ಭಕ್ತಿಮೂಲವಾದುದರಿಂದ, ಭಕ್ತಿಯು ಭಗವಂತನ ಸಂಬಂಧವುಳ್ಳದ್ದಾಗಿ ಎಲ್ಲೆ ಡೆಯೂ ಭಗವಂತನ ಅರಿವನ್ನು ಪಡೆಯುವ ಹಂಬಲವನ್ನು ಹೊತ್ತು ಮೂಲತಃ ವಿಸ್ತಾರಗೊಳ್ಳುವ ಪ್ರವೃತ್ತಿಯುಳ್ಳದ್ದಾಗಿರುವುದರಿಂದ ಪ್ರಮಾಣಗಳನ್ನು ವಿಸ್ತರಿಸಿದರು. ನೆನಪಿನ ವಿಸ್ತಾರದಲ್ಲಿಯೇ ಅವನೇ ಇವನೆಂಬ – ಮರೆತುದು ಒಮ್ಮೆಲೇ ನೆನಪಾದಂತೆ – ಅಭಿಜ್ಞಾನದ ರೋಮಾಂಚನ ಉಂಟಾಗುವುದು.

ಹನುಮ, ಭೀಮರೆಂಬ ವಾಯುಕುಮಾರಕದ ಈ ಎರಡು ಪಾತ್ರಗಳೊಡನೆ ಮಧ್ವರು ತಮ್ಮನ್ನು ಜೋಡಿಸಿಕೊಳ್ಳುತ್ತಾರೆ! ವೇದದಲ್ಲಿ ಬರುವ ಬಳಿತ್ಥಾಸೂಕ್ತ ಎಂದು ಪ್ರಸಿದ್ಧವಾದ ಪಾಣಾಗ್ನಿ ಸೂಕ್ತದಲ್ಲಿರುವ “ಮಧ್ವ’ ಎನ್ನುವ ಪದಕ್ಕೆ ಮಧ್ವ ಆನಂದತೀರ್ಥ ಸ್ಯಾತ್‌ ತೃತೀಯಾ ಮಾರುತೀತನುಃ (ಮಧ್ವ ಎಂದರೆ ವವಾಯುವಿನ ಮೂರನೆಯ ರೂಪವಾದ ಆನಂದತೀರ್ಥ) ಎಂದು ತಮ್ಮನ್ನು ಕುರಿತೇ ಆದರೂ ಪ್ರಾಚೀನ ಪ್ರಮಾಣಗಳನ್ನು ಚಕಿತಗೊಳಿಸುವಂತೆ ಉಲ್ಲೇಖೀಸುತ್ತಾರೆ!

ಮಧ್ವರ ದರ್ಶನಕ್ಕೆ ಬೆರಗು; ಮಹಾಭಾರತ, ರಾಮಾಯಣ, ಪುರಾಣಗಳನ್ನು ಆಧ್ಯಾತ್ಮಿಕವಾಗಿ ನೋಡುವುದು ಹೇಗೆ ಎಂದು ತೋರಿಸಿದರು. “ವಿಸ್ಮತಿ’ಯ ಭಾವ ಬಹಳ ಕಾಡುವ ಆಧುನಿಕರಿಗೆ, ವಾš¾ಯಗಳಲ್ಲಿಯೇ ಹೇಗೆ ಪರಸ್ಪರ ನೆನಪುಗಳು ಹುದುಗಿವೆ ಎಂದು ತೋರಿಸಿದರು! ಬನ್ನಂಜೆ, ಮಧ್ವರ ದರ್ಶನಕ್ಕೆ ಬೆರಗಾಗಿದ್ದಾರೆ.

Advertisement

ಚರಿತ್ರಾರ್ಹ ಕೆಲಸ: ಮಧ್ವದರ್ಶನದ ಸಾರವನ್ನು ತಾಂತ್ರಿಕವಾಗಿ ಗ್ರಹಿಸಿ ಇದೇ ನಿಟ್ಟಿನಲ್ಲಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಮಹಾಭಾರತ ತಾತ್ಪರ್ಯ ನಿರ್ಣಯವನ್ನು ಓದಿದ ಯಾರಿಗೇ ಆದರೂ ಮಧ್ವರು ಶುದ್ಧಪಾಠಕ್ಕೆ ಕೊಟ್ಟ ಮಹತ್ವ ಅರಿವಿಗೆ ಬರುತ್ತದೆ, ನಿಜ. ಆದರೆ ಮಧ್ವರ ಗ್ರಂಥಗಳ ಶುದ್ಧವಾದ ಶೋಧನೆಯ ದಿಕ್ಕಿನಲ್ಲಿ ಕೆಲಸ ಮಾಡಿದವರು ಯಾರು? ಬನ್ನಂಜೆ ಆ ಚರಿತ್ರಾ ರ್ಹವಾದ ಕೆಲಸ ಮಾಡಿದರು. ಮಧ್ವರ ನೇರ ಶಿಷ್ಯರಾದ ಹೃಷಿಕೇಶತೀರ್ಥರು ತಾಡವಾಲೆಯಲ್ಲಿ ಬರೆದಿಟ್ಟ ಸರ್ವಮೂಲ ಗ್ರಂಥಗಳ ಶುದ್ಧ ಸಂಶೋಧಿತ ಸಾರವನ್ನು ಹಗಲಿರುಳು ಶ್ರಮಿಸಿ ಹೊರತಂದರು. ಈ ಪ್ರಕ್ರಿ ಯೆಯಲ್ಲಿಯೇ ಬನ್ನಂಜೆಯವರಲ್ಲಿದ್ದ ಸಂಶೋಧಕ ಪ್ರವೃತ್ತಿಯೂ ಜಾಗೃತಗೊಂಡಿತು. ಬನ್ನಂಜೆ ಸಾವಿರಾರು ತಾಡವಾಲೆಗಳನ್ನು ಪರಿಶೀಲಿ ಸಿದರು. ತುಳುನಾಡಿನಲ್ಲಿ ತಾಡವಾಲೆಗಳ ಈ ಪ್ರಮಾಣದ ಅಧ್ಯಯನ ಮಾಡಿದವರು ಬೇರೆ ಯಾರಿದ್ದಾರೋ ನಾನು ತಿಳಿಯೆ. ಈ ಎಲ್ಲದರ ಫ‌ಲ ಪರಿಪಾಕವೆಂದರೆ:

ಸಂಶೋಧಕ ವಿದ್ವತ್‌: ಮುಖ್ಯವಾಗಿ ಸರ್ವಮೂಲ ಗ್ರಂಥಗಳ ಸಂಖ್ಯೆ 37 ಎಂದಿದ್ದ ಕಲ್ಪನೆ ಕಳಚಿ ಅವು ನಿಜಕ್ಕೂ 51 ಎಂದಾದುದು (ದ್ವಾದಶಸ್ತೋತ್ರಗಳಲ್ಲಿ 11 ಸ್ತೋತ್ರಗ‌ಳನ್ನು ಬಿಡಿಯಾಗಿ ಗ್ರಹಿಸಿ). ಮಧ್ವರಿಂದ ಪೂರ್ವಾಭಿಮುಖವಾಗಿ ಪ್ರತಿಷ್ಠಿತ ನಾದ ಕೃಷ್ಣ ಪಶ್ಚಿಮಕ್ಕೆ ತಿರುಗಿ ನಿಂತ ಎಂಬ ಶತಮಾನಗಳ ಕಾಲ ನಂಬಿ ಬಂದ ಕಥೆ ಅಡಿ ಮೇಲಾಗಿ, ಪಶ್ಚಿಮಾಭಿಮುಖವಾಗಿಯೇ ಕೃಷ್ಣ ಪ್ರತಿಷ್ಠೆಯಾದುದು ಎಂಬ ವಾಸ್ತವ ತಿಳಿದುದು; ಮಧ್ವರು ಹೇಗೆ ಕೃಷ್ಣ ಪ್ರತಿಷ್ಠೆ ಮಾಡಿದ್ದರೋ ಹಾಗೇ ತೋರಿಸಿದವರು ಬನ್ನಂಜೆ! ಇದು ಬನ್ನಂಜೆ ಸಂಶೋಧಕ ವಿದ್ವತ್ತಿಗೆ ಒಂದು ರೂಪಕವೂ ಹೌದು.

ಭಾಷಾಪ್ರೀತಿ: ಬನ್ನಂಜೆಯವರ ಮೊದಲ ಪ್ರೇಮ ಭಾಷೆಯ ಬಗೆಗೆ ಎಂದು ನನಗೆ ಅನ್ನಿಸುವುದು. ಈ ಭಾಷಾಪ್ರೀತಿ, ಒಂದು ಬದಿಯಲ್ಲಿ, ವೇದಗಳಲ್ಲಿ ಬಳಕೆಯಾದ ಪ್ರಾಚೀನ ಸಂಸ್ಕೃತ ಪದಗಳ ಒಡನಾಡಿಯಾಗಿ ವ್ಯಕ್ತವಾಗಿದೆ. ಈ ಒಡನಾಟದ ಪಕ್ವ ಫ‌ಲವಾಗಿ ಬನ್ನಂಜೆಯವರು ತಮ್ಮ “ನಿರ್ಣಯ ಭಾವಚಂದ್ರಿಕಾ’ ಎಂಬ, ಮಹಾಭಾರತ ತಾತ್ಪರ್ಯ ನಿರ್ಣಯಕ್ಕೆ ಮಾಡಿದ ಸಂಸ್ಕೃತ ವ್ಯಾಖ್ಯಾನದ ಪರಿಶಿಷ್ಟದಲ್ಲಿ “ಪ್ರಯತ್ನ ಪ್ರಯೋಗ ಮೀಮಾಂಸಾ’ ಎಂಬ, ಪಾಣಿನಿಯು ಕೈಬಿಟ್ಟ ಹಳೆಯ ಸಂಸ್ಕೃತದ ಪದಗಳನ್ನು ಕುರಿತಾದ ಮೀಮಾಂಸೆಯನ್ನು ಪ್ರಕಟಿಸಿದ್ದಾರೆ. ನಾಲ್ಕು ಪಾದಗಳಲ್ಲಿ ಎಂಭತ್ತು ಸೂತ್ರಗಳಲ್ಲಿ ಸವ್ಯಾಖ್ಯಾನ ಈ ಅದ್ಭುತ ಮೀಮಾಂಸೆ ನಿರೂಪಿತವಾಗಿದೆ.

ನಿರ್ಣಯ ಭಾವಚಂದ್ರಿಕೆ ಕೂಡ ಒಂದು ಅಸದೃಶ ಕೃತಿ!
ಕನ್ನಡದಲ್ಲಿ ಹೊಸ ಪದ ಪ್ರಯೋಗ: ಇನ್ನೊಂದು ಬದಿಯಲ್ಲಿ ಈ ಭಾಷಾಪ್ರೇಮ, ಕನ್ನಡದಲ್ಲಿ ಹೊಸ ಪದಗಳನ್ನು ಟಂಕಿಸುವುದರಲ್ಲಿ ವ್ಯಕ್ತವಾಗಿದೆ. “ಕೀಳುಹಿರಿಮೆ’ ಎಂಬ ಪದ ಕನ್ನಡದಲ್ಲಿ ನೀವು ಕೇಳಿ ದ್ದೀರ? “ಕೀಳರಿಮೆ’ ಕೇಳಿದ್ದುಂಟು. ಅನುಭವಿಸಿದ್ದೂ ಉಂಟು. ಆದರೆ ಇಲ್ಲಿರುವುದು “ಕೀಳುಹಿರಿಮೆ’. ಅಂದರೆ, ತನ್ನ ಮಿತಿಯ ಅರಿವಿನಿಂದಲೇ ತನ್ನ ಮಿತಿಯನ್ನು ಮೀರಿದ ದೈವದ ಮಹಿಮೆಯನ್ನು ಮನಗಂಡಾಗ ಉಂಟಾಗುವ ರೋಮಾಂಚನ! ಒಂದು ಭಾಷೆ ಆಧ್ಯಾತ್ಮಿಕಗೊಳ್ಳುವುದು ಹೀಗೆ.
ಬನ್ನಂಜೆಯವರು ಬಾಣಭಟ್ಟನ ಕಾದಂಬರಿ ಯಿಂದ ತೊಡಗಿ ಸಂಸ್ಕೃತದ ಅನೇಕ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಭಗವದ್ಗೀತೆ ಭಗವಂತನ ನುಡಿಯಾಗಿ ಬಂದಿದೆ. ಎಲ್ಲೆಲ್ಲೂ ಕನ್ನಡದ ಅಪ್ಪಟ ಸೊಗಸು, ದೇಸಿ.

ಈ ವಾಕ್ಯಗಳನ್ನು ನೋಡಿ: “ಆ ಸದ್ದು ನೆಲಮುಗಿಲು ತಬ್ಬಿ ಪಡಿನುಡಿದು ಅಬ್ಬರಿಸಿ ಧೃತರಾಷ್ಟ್ರನೆಂದು ಹೆಸರಾದ ನಿನ್ನ ಮಕ್ಕಳ ಎದೆಗಳನ್ನು ಗಬ್ಬರಿಸಿತು. ಇಲ್ಲಿ ತೊದಲು ಹೆಜ್ಜೆ ಕೂಡ ಹಾಳಾಗದು. ಇಲ್ಲಿ ತೊಡರುಗಳಿಲ್ಲ. ಈ ಧರ್ಮದ ತುಣುಕು ಕೂಡ ದೊಡ್ಡ ಬೆದರಿನಿಂದ ಪಾರುಮಾಡಬಲ್ಲದು, “ಕುರು ಕುಮಾರ, ಈ ದಾರಿಯಲ್ಲಿ ಮನನದಿಂದ ಹದಗೊಂಡ ಮಾತು ಒಂದೇ ಥರ, ಹದವಿರದವರ, ತುದಿ ಇರದವರ ಹರಟೆಗಳಿಗೆ ಹತ್ತುಹಲವು ಟಿಸಿಲುಗಳು’.

ಉತ್ತರ ರಾಮಚರಿತೆಯ ಈ ಪದ್ಯಾನುವಾದ ನೋಡಿ:
ನಲುಮೆ ತುಂಬಿದ ನಡತೆ
ವಿನಯದಿಂದಿಂಪಾದ ಹಿತಮಿತದ ಮಾತುಕತೆ
ಒಳಿತನೆಳಸುವ ಹುಟ್ಟುಗುಣದ ಹೃದಯ ಹದಗೆಡದ ಪರಿಚಯ
ಹೊಸತಂತೆ ಹಳತಿನಲು ಹಳಸಿ ಮಾಸದ ರಸ
ಕವಡಿರದ ಚೊಕ್ಕಟದ ಅಕ್ಕಸ
ಹೆಜ್ಜೆ ಗುರುತೂ ಕಾಣದೀ ಇಂಥ ಗೂಢಕ್ಕೆ
ಗೆಲುವಕ್ಕೆ ಸಜ್ಜನರ ನಡೆಗೆ ನೇಹಕ್ಕೆ

ಭವಭೂತಿ ಮಾತು: “ಭವಭೂತಿ’ ಬನ್ನಂಜೆಯ ವರಿಗೆ ಬಹಳ ಸಂಪ್ರತಿಪನ್ನನಾದ ಕವಿ, ವಿದ್ವಾಂಸ. ಹಾಗೆಂದು ಬನ್ನಂಜೆಯವರೇ ಹೇಳಿಕೊಂಡಿದ್ದಾರೆ. ಭವ ಭೂತಿಯ ಪ್ರಸಿದ್ಧವಾದ ಮಾತು ಇದು: “ಉತ್‌ ಪತ್ರ್ಯತೇ ಮಮ ತು ಕೋ ಪಿ ಸಮಾನಧರ್ಮಾ | ಕಾಲೋಹ್ಯಯಂ ನಿರವಧಿಃ ವಿಫ‌ುಲಾ ಚ ಪೃಥ್ವೀ’, ತನ್ನ ಯೋಗ್ಯತೆಯನ್ನು ಅರಿಯಲಾರದ ಕ್ಷುದ್ರ ನಿಂದಕರನ್ನು ಕುರಿತು ಹೇಳಿದ ಮಾತು ಇದು. “ನಿಮಗಾಗಿ ನಾನು ಬರೆಯಲಿಲ್ಲ. ನೀವು ನನ್ನ ಕೃತಿಯ ಬಳಿ ಸುಳಿಯದಿರಿ. ನನ್ನ ಮನಸ್ಸನ್ನು ತಿಳಿಯಬಲ್ಲವನೊಬ್ಬ ಸಹೃದಯ ಎಂದಾದರೂ ಕಾಣಿಸಿಕೊಂಡಾನು. ಲೋಕವು ವಿಶಾಲವಾಗಿದೆ. ಕಾಲವು ಅನಂತವಾಗಿದೆಯಲ್ಲವೆ?’

ಈ ಮಾತನ್ನು ಬನ್ನಂಜೆ ತಾವೂ ಹೇಳಿಕೊಂಡಿದ್ದಾರೆ, ತಮ್ಮ ನಿರ್ಣಯಭಾವ ಚಂದ್ರಿಕಾ ಎಂಬ ಅನುಪಮ ಕೃತಿಯ ಕೊನೆಯಲ್ಲಿ, ಭವಭೂತಿಯ ಮಾತು ತನ್ನ ಮಾತೂ ಆಗಿದೆ ಎಂದಿದ್ದಾರೆ. “ಭವಭೂತಿ ವಚಾಂಸ್ಯೆàವ ಭವೇಯುರ್ಮದ್ವಚಾಂಸಿ ಚ’.
ಪ್ರಕೃತಿಯ ನಡೆ: ಈ ಮಾತು ಬನ್ನಂಜೆಯವರ ನೋವನ್ನೂ ಹೇಳುತ್ತದೆ. ಇದು ಎಲ್ಲ ಸೃಷ್ಟಿಶೀಲ ವಿದ್ವಾಂಸರ ನೋವೂ ಹೌದು. ಈಚೆಗೆ ಬನ್ನಂಜೆ ಯವರಿಗೆ ವಿದೇಶಗಳಿಂದಲೂ ಸ್ಪಂದನೆ ಸಿಕ್ಕಿತ್ತು. “ಲೋಕವು ವಿಶಾಲವಾಗಿದೆಯಲ್ಲವೆ!’ ಅಲ್ಲದೆ ಒಂದೆಡೆ ಮುಳುಗಿ ಇನ್ನೊಂದೆಡೆ ತಲೆ ಎತ್ತುವುದು ಪ್ರಕೃತಿಯ ನಡೆಯೇ ಆಗಿದೆ. ದ್ವಾರಕೆ ಮುಳುಗದೆ, ಉಡುಪಿ ಕೃಷ್ಣನ ಕ್ಷೇತ್ರವಾಗಲಿಲ್ಲ! ರಣರಂಗದಲ್ಲಿ ಸೂಕ್ತ ದರ್ಶನವಾಗುವುದು ಕೂಡ ಅಚ್ಚರಿಯಲ್ಲ!

ಶಾಲೆಗೆ ಹೋಗದ ಬನ್ನಂಜೆ
ಸಂಸ್ಕೃತದಲ್ಲಿ, ಕನ್ನಡದಲ್ಲಿ ಇಷ್ಟೆಲ್ಲ ಮಾಡಿದ ಬನ್ನಂಜೆ, ಇಲ್ಲಿ ಶಾಲೆಗೆ ಹೋಗಿ ಹೆಚ್ಚು ಕಲಿತೇ ಇಲ್ಲ ಎನ್ನುವುದೊಂದು ಆಶ್ಚರ್ಯ. ಅಥವಾ ಹಾಗೆ ಶಾಲೆಗೆ ಹೋಗದಿದ್ದುದರಿಂದಲೇ ಇಷ್ಟೆಲ್ಲ ಸಾಧಿಸುವುದಾಯಿತು ಎನ್ನುವುದೇ ಸರಿ! ಅಂದರೆ ಶಾಲೆಯ ಜಡ ಶಿಕ್ಷಣವನ್ನು ಮಾನಸಿಕ ವಾಗಿ ನಿರಾಕರಿಸುತ್ತಲೇ, unlearn ಮಾಡು ತ್ತಲೇ ನಿಜವಾದ learning ಏನೆಂದು ತಿಳಿಯುವುದು ಅವರಿಗೆ ಸಾಧ್ಯವಾಯಿತು. ಆದುದರಿಂದಲೇ ವ್ಯಾಖ್ಯಾನ ಗ್ರಂಥಗಳ ಓದಿಗಿಂತ ಮೂಲಗ್ರಂಥಗಳ ಓದು ಮುಖ್ಯ ಎಂದು ಬೇಗನೇ ಕಂಡುಕೊಳ್ಳುವುದು ಅವರಿಗೆ ಸಾಧ್ಯವಾಯಿತು. “ಸುಧಾ’ ಮಂಗಲಕ್ಕಿಂತ “ಅನುವ್ಯಾಖ್ಯಾನ’ ಮಂಗಳ ಮುಖ್ಯ ಎಂದು ಮೊದಲ ಬಾರಿಗೆ ಹೇಳಿದವರು ಬನ್ನಂಜೆ, ದ್ವೆ„ತಾದ್ವೆ„ತಾದಿ ಖಂಡನೆ-ಮಂಡನೆಗಳ ತರ್ಕ ಪಾಠದ ಪ್ರದರ್ಶನಕ್ಕಿಂತ ಮಧ್ವರ ಮಾತುಗಳನ್ನು ಒಳನೋಟದಿಂದ ಗ್ರಹಿಸುವುದು ಮುಖ್ಯ ಎಂದವರು ಬನ್ನಂಜೆ. ಅವರ ಉಪನ್ಯಾಸಗಳಲ್ಲಿ ಕೂಡ ತಕ -ವಿತರ್ಕಗಳನ್ನು ಮೀರಿದ ಗಹನ ತೆಯ ಅನುಭವವಾಗುತ್ತಿತ್ತು. ಇದೆಲ್ಲ ಅವರ ನಿತಾಂತಸ್ವಾಧ್ಯಾಯದ ಫ‌ಲ. “ಸ್ವಾಧ್ಯಾಯ’ ಎನ್ನುವ ಪದವೇ Internalise ಆಗುವಂತೆ ಕಲಿಯುವುದೇ ನಿಜವಾದ ಅಧ್ಯಯನ ಎನ್ನುವ ಅರ್ಥವನ್ನು ಸೂಚಿಸುತ್ತದೆ. ಈ ಅರ್ಥದಲ್ಲಿ ಬನ್ನಂಜೆ “ಸ್ವಯಮಾಚಾರ್ಯ ಪುರುಷ’.

– ಲಕ್ಷ್ಮೀಶ ತೋಳ್ಪಾಡಿ,

Advertisement

Udayavani is now on Telegram. Click here to join our channel and stay updated with the latest news.

Next