Advertisement

ಬನ್ನಂಜೆ ಗಾಂಧಿ ಭವನಕ್ಕೆ ಬಿಡದ ಗ್ರಹಣ

11:33 AM Feb 16, 2023 | Team Udayavani |

ಉಡುಪಿ: ಮೂರು ದಶಕಗಳ ಹಿಂದೆ ಸಾಂಸ್ಕೃತಿಕ ಕಾರ್ಯಕ್ರಮ, ಸಭೆ ಸಮಾರಂಭಗಳ ಆಯೋಜನೆ ಮೂಲಕ ವಿಜೃಂಭಿಸಿದ್ದ ಬನ್ನಂಜೆ ಗಾಂಧಿ ಭವನ ಕಳೆದ ಏಳೆಂಟು ವರ್ಷಗಳಿಂದ ಪಾಳು ಬಿದ್ದಿದ್ದು, ಇನ್ನೂ ಗ್ರಹಣ ಬಿಡದ ಸ್ಥಿತಿಯಲ್ಲಿದೆ. ನಗರಸಭೆಯ ಶಿರಿಬೀಡು ವಾರ್ಡ್‌ ವ್ಯಾಪ್ತಿಯಲ್ಲಿರುವ ಗಾಂಧಿ ಭವನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಿಂದ ಬನ್ನಂಜೆ ಮುಖ್ಯ ರಸ್ತೆಗೆ ಸಂಪರ್ಕಿಸುವ ಮಾರ್ಗದ ಬದಿಯಲ್ಲಿ 5 ಸೆಂಟ್ಸ್‌ ಜಾಗದಲ್ಲಿದೆ.

Advertisement

ಶಿಥಿಲಾವಸ್ಥೆಗೆ ತಲುಪಿರುವ ಗಾಂಧಿ ಭವನದ ಸಿಮೆಂಟ್‌ ಶೀಟ್‌ಗಳು ಬಿರುಕು ಬಿಟ್ಟಿದ್ದು, ಕೆಲ ಭಾಗದಲ್ಲಿ ಕಟ್ಟಡದ ಮೇಲ್ಛಾವಣಿಯ ಶೀಟುಗಳು ನೆಲಕ್ಕುರುಳುವ ಸ್ಥಿತಿಯಲ್ಲಿವೆ. ಕಿಟಕಿ ಬಾಗಿಲುಗಳು ಮುರಿದುಕೊಂಡು ಬಿದ್ದಿದೆ. ಶೌಚಾಲಯ ಹದಗೆಟ್ಟಿದ್ದು, ಕಟ್ಟಡದ ಆವರಣ ಜಾನುವಾರುಗಳ ವಾಸಸ್ಥಾನವಾಗಿದೆ. ಕಟ್ಟಡದ ಸುತ್ತ ಗಿಡಗಂಟಿ, ಹುಲ್ಲಿನ ಪೊದೆ ಬೆಳೆದು ನಿಂತಿದೆ. ಅಪರಿಚಿತರು ಮದ್ಯದ ಬಾಟಲಿ, ತ್ಯಾಜ್ಯವನ್ನು ಎಸೆದಿದ್ದಾರೆ.

ಪ್ರಸ್ತುತ ರಸ್ತೆ ಬದಿಯಿಂದ ಕಂಡರೆ ಗಾಂಧಿ ಭವನ ಎಲ್ಲಿದೆ ಎಂದು ಗುರುತಿಸುವುದು ಕಷ್ಟ. ಸಮರ್ಪಕ ನಿರ್ವಹಣೆ ಇಲ್ಲದೆ ಕಟ್ಟಡ ಸಂಪೂರ್ಣ ದುಃಸ್ಥಿತಿಗೆ ತಲುಪಿದೆ. ಕಟ್ಟಡವನ್ನು ಉಪಯೋಗ ಶೂನ್ಯ ಸ್ಥಿತಿಯಲ್ಲಿ ಬಿಡುವುದಕ್ಕಿಂತ ಆಧುನಿಕ ಶೈಲಿಯಲ್ಲಿ ಸುಸಜ್ಜಿತಗೊಳಿಸಿದರೆ ಸರಕಾರ, ಸಂಘ,ಸಂಸ್ಥೆಯ ಸಭೆ, ಸಮಾರಂಭ, ಸಾಂಸ್ಕೃತಿಕ, ತರಬೇತಿ ಕಾರ್ಯಕ್ರಮ ನಡೆಸಬಹುದು. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ಮುತುವರ್ಜಿ ವಹಿಸಬೇಕು ಎಂಬ ಆಗ್ರಹ ಕೇಳಿಬರುತ್ತಿವೆ.

ದಾಖಲೆ ತೆರವಿಗೆ ಕ್ರಮ
ಗಾಂಧಿ ಭವನದಲ್ಲಿ ಕಂದಾಯ ಇಲಾಖೆ ಸಂಬಂಧಿಸಿದ ದಾಖಲೆ ಮೂಟೆಗಟ್ಟಲೆ ದಾಸ್ತಾನು ಇರಿಸಿದ್ದಾರೆ. ಈ ಬಗ್ಗೆ ಉಡುಪಿ ತಾಲೂಕು ಕಚೇರಿ ಅಧಿಕಾರಿಗಳಿಗೆ ಪತ್ರ ಬರೆದು ತೆರವಿಗೆ ಸೂಚಿಸಲಾಗುವುದು. ಈ ಭವನವನ್ನು ನಗರಸಭೆ ವತಿಯಿಂದ ವ್ಯವಸ್ಥಿತವಾಗಿಸಿ ಸಮುದಾಯದ ಉಪಯೋಗಕ್ಕೆ ಬಳಕೆ ಮಾಡಲು ಬೇಕಾದ ಕ್ರಮತೆಗೆದುಕೊಳ್ಳಲಿದ್ದೇವೆ.

-ಸುಮಿತ್ರಾ ನಾಯಕ್‌, ಅಧ್ಯಕ್ಷರು, ನಗರಸಭೆ

Advertisement

ಅಂದು ನಗರಾಭಿವೃದ್ಧಿ ಸಚಿವರಿಂದ ಉದ್ಘಾಟನೆ
1985ರಲ್ಲಿ ಉಡುಪಿಯಲ್ಲಿ ನಿರ್ಮಿಸಿದ್ದ ಗಾಂಧಿ ಭವನಕ್ಕೀಗ 37 ವರ್ಷ ತುಂಬಿದೆ. 1985ರಲ್ಲಿ ಅಂದಿನ ನಗರಾಭಿವೃದ್ದಿ ಸಚಿವ ಪ್ರೊ| ಲಕ್ಷ್ಮೀ ಸಾಗರ್‌ ಅವರು ಗಾಂಧಿ ಭವನದ ಉದ್ಘಾಟನೆಯನ್ನು ನೆರವೇರಿಸಿದ್ದರು. 12 ವರ್ಷಗಳ ಹಿಂದೆ ಗಾಂಧಿ ಭವನಕ್ಕೆ ಎರಡು ಲಕ್ಷ ರೂ. ವೆಚ್ಚದಲ್ಲಿ ಪೀಠೊಪಕರಣ ಅಳವಡಿಸಿ, ಕಿಟಕಿ ಬಾಗಿಲು ದುರಸ್ತಿ ಮಾಡಲಾಗಿತ್ತು. ನಾಲ್ಕು ಲಕ್ಷ ರೂ. ವೆಚ್ಚದಲ್ಲಿ ಮಾರ್ಬಲ್ನ ನೆಲಹಾಸು ಇನ್ನಿತರ ದುರಸ್ತಿ ಕೆಲಸ ನಡೆದಿತ್ತು. ಆ ಬಳಿಕ 2016-17ರಲ್ಲಿ ಆಧಾರ್‌ ನೋಂದಣಿ ಕಾರ್ಯ ನಡೆಯುತ್ತಿತ್ತು. ಸ್ವಲ್ಪ ದಿನಗಳ ಅನಂತರ ತಾಂತ್ರಿಕ ಸಮಸ್ಯೆ ಕಾರಣದಿಂದ ಅದನ್ನು ಮುಚ್ಚಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next