ಹೊಸಕೋಟೆ: ರಾಷ್ಟ್ರದ ಬೆಳವಣಿಗೆಯ ಬೆನ್ನೆಲುಬಾಗಿರುವ ರೈತರಿಗೆ ವಿಶಿಷ್ಟವಾದ ಯೋಜನೆಗಳನ್ನು ರೂಪಿಸಲು ಬ್ಯಾಂಕ್ ಆದ್ಯತೆ ನೀಡುತ್ತಿದೆ ಎಂದು ಬ್ಯಾಂಕ್ ಆಫ್ ಬರೋಡದ ಗ್ರಾಹಕ ಸಮನ್ವಯ ವಿಭಾಗದ ಪ್ರಧಾನ ವ್ಯವಸ್ಥಾಪಕ ಬಿ.ಅರ್. ಪಟೇಲ್ ಹೇಳಿದರು. ಅವರು ಸಮೀಪದ ಚೀಮಸಂದ್ರದಲ್ಲಿ ಏರ್ಪಡಿಸಿದ್ದ ಟ್ಯಾಕ್ಟರ್ ಮೇಳ ಉದ್ಘಾಟಿಸಿ ಮಾತನಾಡಿದರು.
ರೈತರ ಹಿತ ಕಾಪಾಡಲು ಬ್ಯಾಂಕ್ ಬದ್ಧವಾಗಿದ್ದು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಲು ಪ್ರೋತ್ಸಾಹಿಸುವ ಉದ್ದೇಶದಿಂದ ಬೇಡಿಕೆಗೆ ಅನುಗುಣವಾಗಿ ಸಾಲ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕೃಷಿಗೆ ಪರ್ಯಾಯವಾಗಿ ಆದಾಯ ವೃದ್ಧಿಗೆ ಪೂರಕವಾಗಿ ಬೆಳೆ ಸಾಲ, ಕುರಿ, ಹಂದಿ, ಕೋಳಿ ಸಾಕಣೆಯೊಂದಿಗೆ ಹೈನುಗಾರಿಕೆಗೂ ಸಹ ಆರ್ಥಿಕ ನೆರವು ನೀಡುತ್ತಿದ್ದು ಶೇ.4ರ ಬಡ್ಡಿ ದರದಲ್ಲಿ ರೈತರಿಗೆ 3 ಲಕ್ಷ ರೂ.ಗಳಷ್ಟು ಸಾಲ ವಿತರಿಸಲಾಗುತ್ತಿದೆ.
ಬ್ಯಾಂಕಿನಿಂದ ರೈತರಿಗೆ ಕೃಷಿಯಲ್ಲಿ ಅಳವಡಿಸಿಕೊಳ್ಳಬಹುದಾದ ಆಧುನಿಕ ತಂತ್ರಜ್ಞಾನ ಅಳವಡಿಕೆ, ಬೆಳೆ ಪದ್ಧತಿ, ರಸಗೊಬ್ಬರ, ಯಂತ್ರೋಪಕರಣಗಳ ಬಳಕೆ, ರೋಗ ನಿರೋಧಕ ಕ್ರಮಗಳ ಬಗ್ಗೆ ಸೂಕ್ತ ಮಾಹಿತಿ, ಮಾರ್ಗದರ್ಶನ ಸಹ ಪಡೆಯಲು ವ್ಯವಸ್ಥೆ ಮಡಲಾಗಿದೆ. ದೇಶಾದ್ಯಂತ ವಿಜಯ ಬ್ಯಾಂಕ್, ದೇನಾ ಬ್ಯಾಂಕ್‌ನ್ನು ವಿಲೀನಗೊಳಿಸಿದ ನಂತರ ಒಟ್ಟು 9500ರಲ್ಲಿ 5500 ಶಾಖೆಗಳು ಗ್ರಾಮೀಣ ಪ್ರದೇಶದಲ್ಲಿದ್ದು ರೈತರ ಸೇವೆ ಸಲ್ಲಿಸುವಲ್ಲಿ ಮುಂಚೂಣಿಯಲ್ಲಿದೆ ಎಂದರು.
ಸಹಾಯಕ ಪ್ರಧಾನ ವ್ಯವಸ್ಥಾಪಕ ರವಿ ರೈತರು ಬ್ಯಾಂಕಿನಿಂದ ಪಡೆಯಬಹುದಾದ ಸವಲತ್ತುಗಳ ಬಗ್ಗೆ ವಿವರಿಸಿದರು. ಬ್ಯಾಂಕಿನ ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆ ವ್ಯಾಪ್ತಿಯ 34 ರೈತರಿಗೆ ಅಂದಾಜು 1.64 ಕೋಟಿ ರೂ.ಗಳ ಮೌಲ್ಯದ ಟ್ರ್ಯಾಕ್ಟರ್ ಸಾಲವನ್ನು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಪ್ರಧಾನ ವ್ಯವಸ್ಥಾಪಕ ಸುದರ್ಶನ್, ವಿಭಾಗೀಯ ವ್ಯವಸ್ಥಾಪಕ ಮನೀಶ್, ಶಾಖಾ ವ್ಯವಸ್ಥಾಪಕ ಶ್ರೀರಾಮಮೂರ್ತಿ ಮುಂತಾದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ರೈತರೊಂದಿಗೆ ಸೇವೆಯನ್ನು ಉತ್ತಮಪಡಿಸುವ ಬಗ್ಗೆ ಸಂವಾದ ಸಹ ನಡೆಯಿತು.