ನವದೆಹಲಿ: ಗ್ರಾಹಕರು ಯಾವುದೇ ಕಾರಣಕ್ಕೂ ತಮ್ಮ ಬ್ಯಾಂಕ್ ಖಾತೆಯ ವಿವರಗಳು, ಎಟಿಎಂ ಪಿನ್ ಹಾಗೂ ಕ್ರೆಡಿಟ್ ಕಾರ್ಡ್ ನಂಬರ್ ಗಳನ್ನು ಬೇರೆಯವರ ಜತೆ ಹಂಚಿಕೊಳ್ಳಬಾರದು ಎಂದು ಬ್ಯಾಂಕ್ ಗಳು ನಿರಂತರವಾಗಿ ಮನವಿ ಮಾಡಿಕೊಳ್ಳುತ್ತಿವೆ. ಒಂದು ವೇಳೆ ಗ್ರಾಹಕರು ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಆನ್ ಲೈನ್ ವಂಚನೆಗೊಳಗಾದರೆ ಇದಕ್ಕೆ ಬ್ಯಾಂಕ್ ಗಳು ಹೊಣೆಯಲ್ಲ ಎಂದು ಗ್ರಾಹಕರ ಕೋರ್ಟ್ ಆದೇಶ ನೀಡಿದೆ.
ಇದನ್ನೂ ಓದಿ:20 ಕಿಲೋಮೀಟರ್ ಗೂ ಹೆಚ್ಚು ದೂರ ಹಿಮ್ಮುಖವಾಗಿ ಚಲಿಸಿದ ರೈಲು: ತಪ್ಪಿದ ಭಾರಿ ದುರಂತ
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಆನ್ ಲೈನ್ ವಂಚನೆ ಪ್ರಕರಣದಲ್ಲಿ ಪರಿಹಾರ ನೀಡಬೇಕೆಂದು ಕೋರಿ ಗುಜರಾತ್ ನ ಅಮ್ರೇಲಿ ಜಿಲ್ಲೆಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಮೊರೆ ಹೋದ ವ್ಯಕ್ತಿಯ ಅರ್ಜಿ ವಿಚಾರಣೆ ನಡೆಸಿದ ವೇಳೆ, ಪರಿಹಾರ ನೀಡಬೇಕೆಂಬ ಬೇಡಿಕೆ ಒಪ್ಪಲು ಸಾಧ್ಯವಿಲ್ಲ, ಇದು ಸ್ವಯಂ ನಿರ್ಲಕ್ಷ್ಬದಿಂದ ಆದ ಪ್ರಕರಣ ಎಂದು ಆದೇಶ ನೀಡಿದೆ.
ಘಟನೆ ಹಿನ್ನಲೆ:
ನಿವೃತ್ತ ಟೀಚರ್ ಕುರ್ಜಿ ಜಾವಿಯಾ ಎಂಬವರು 2018ರ ಏಪ್ರಿಲ್ 2ರಂದು ಆನ್ ಲೈನ್ ವಂಚನೆಗೊಳಗಾಗಿದ್ದರು. ಯಾರೋ ತಾವು ಎಸ್ ಬಿಐ ಬ್ಯಾಂಕ್ ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ ಜಾವಿಯಾ ಅವರ ಎಟಿಎಂ ಕಾರ್ಡ್ ವಿವರವನ್ನು ಪಡೆದಿದ್ದರು. ಮರುದಿನ ಜಾವಿಯಾ ಅವರ ಖಾತೆಗೆ 39,358 ರೂಪಾಯಿ ಪಿಂಚಣಿ ಹಣ ಡೆಪಾಸಿಟ್ ಆಗಿತ್ತು. ಈ ಸಂದರ್ಭದಲ್ಲಿ ಜಾಮಿಯಾ ಖಾತೆಯಿಂದ 41,500 ರೂಪಾಯಿ ಡ್ರಾ ಆಗಿತ್ತು!
ಖಾತೆಯಿಂದ ಹಣ ಡ್ರಾ ಆಗಿರುವುದನ್ನು ಗಮನಿಸಿದ ಜಾವಿಯಾ ಕೂಡಲೇ ಬ್ಯಾಂಕ್ ಗೆ ಕರೆ ಮಾಡಿದ್ದರು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ದೊರಕಿರಲಿಲ್ಲವಾಗಿತ್ತು. ಒಂದು ವೇಳೆ ಬ್ಯಾಂಕ್ ಶೀಘ್ರವಾಗಿ ನನ್ನ ಮನವಿ ಆಲಿಸಿದ್ದರೆ ವಂಚನೆ ತಡೆಯಬಹುದಾಗಿತ್ತು. ಆದರೆ ನಷ್ಟವಾಗಿರುವ ಹಣ ವಾಪಸ್ ನೀಡುವಂತೆ ಜಾವಿಯಾ ಎಸ್ ಬಿಐ ವಿರುದ್ಧ ದೂರು ದಾಖಲಿಸಿದ್ದರು.
ಆದರೆ ಗ್ರಾಹಕ ನ್ಯಾಯಾಲಯ ಜಾವಿಯಾ ಅವರ ದೂರನ್ನು ಸ್ವೀಕರಿಸುವ ಯಾವುದೇ ಅಂಶ ಇದರಲ್ಲಿ ಇಲ್ಲ ಎಂದು ಹೇಳಿದೆ. ಬ್ಯಾಂಕ್ ಗಳು ನಿರಂತರವಾಗಿ ವೈಯಕ್ತಿಕ ಖಾತೆಯ ವಿವರಗಳನ್ನು ಬೇರೆಯವರ ಜತೆ ಹಂಚಿಕೊಳ್ಳಬೇಡಿ ಎಂಬ ಎಚ್ಚರಿಕೆಯ ನಡುವೆಯೂ ಜಾವಿಯಾ ಖಾತೆಯ ವಿವರ ನೀಡಿರುವುದು ನಿರ್ಲಕ್ಷ್ಯವಾಗಿದೆ. ಈ ಪ್ರಕರಣದಲ್ಲಿ ಬ್ಯಾಂಕ್ ಹೊಣೆಯಲ್ಲ ಎಂದು ಆದೇಶದಲ್ಲಿ ತಿಳಿಸಿದೆ ಎಂದು ವರದಿ ವಿವರಿಸಿದೆ.