ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಮೋಸವಾಗುತ್ತಿದೆ ಎಂಬುದು ಇಂದಿನ ಮಾತಲ್ಲ. ಬಹು ಹಿಂದಿನಿಂದಲೂ ಇಂಥದ್ದೊಂದು ಆರೋಪ ಕೇಳಿಬರುತ್ತಲೇ ಇದೆ. ಬ್ಯಾಂಕಿಂಗ್ ಜತೆಗೆ ರೈಲ್ವೆಯಲ್ಲೂ ಕನ್ನಡಿಗರಿಗೆ ಇಂಥದ್ದೇ ಮೋಸಗಳಾಗುತ್ತಿವೆ, ಎಲ್ಲಾ ಉದ್ಯೋಗಗಳು ಕೇವಲ ಉತ್ತರ ಭಾರತೀಯರಿಗೆ ಹೋಗುತ್ತಿವೆ ಎಂಬ ಮಾತುಗಳೂ ಬಹು ಹಿಂದಿನಿಂದಲೂ ಇದ್ದವು. ಆಗಲೂ ಕನ್ನಡಿಗರು ಹೋರಾಟ ನಡೆಸಿ ನಮಗೂ ಉದ್ಯೋಗ ಕೊಡಿ ಎಂಬ ಆಗ್ರಹವನ್ನು ಮಾಡುವುದನ್ನು ನಾವು ಕಾಣಬಹುದಿತ್ತು.
ಈ ಬಾರಿ ಕೇಂದ್ರ ಸರ್ಕಾರ 11 ಬ್ಯಾಂಕುಗಳ 3,000 ಕ್ಲರ್ಕ್ ಹುದ್ದೆಗಳಿಗೆ ಐಬಿಪಿಎಸ್ ಮೂಲಕ ಪರೀಕ್ಷೆ ನಡೆಸಲು ಮುಂದಾಗಿತ್ತು. ಆದರೆ, ಇಲ್ಲಿ ಪರೀಕ್ಷೆ ಬರೆಯಲು ಇಂಗ್ಲಿಷ್ ಮತ್ತು ಹಿಂದಿಯಲ್ಲಷ್ಟೇ ಅವಕಾಶ ಮಾಡಿಕೊಟ್ಟು, ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಲಾಗಿತ್ತು. ಅದರಲ್ಲೂ ರಾಜ್ಯದ ಕೆನರಾ ಬ್ಯಾಂಕಿಗೂ ಕ್ಲರ್ಕ್‌ಗಳ ನೇಮಕಕ್ಕಾಗಿ ಈ ಪರೀಕ್ಷೆ ನಡೆಯುತ್ತಿತ್ತು. ಸ್ಥಳೀಯ ಬ್ಯಾಂಕುಗಳ ಹುದ್ದೆಗಳಿಗೆ ಪರೀಕ್ಷೆ ನಡೆಸುವಾಗ ಕನ್ನಡವನ್ನು ಕೈಬಿಟ್ಟಿದ್ದು ಏಕೆ ಎಂಬುದು ಕನ್ನಡಿಗರ ಪ್ರಶ್ನೆಯಾಗಿತ್ತು. ಈ ಸಂಬಂಧ ರಾಜಕೀಯ ನಾಯಕರೂ ಸೇರಿಕೊಂಡಂತೆ ಕನ್ನಡ ಹೋರಾಟಗಾರರು ದೊಡ್ಡ ಮಟ್ಟದ ಧ್ವನಿಯನ್ನೇ ಎತ್ತಿದ್ದರು. ಇಷ್ಟೆಲ್ಲಾ ಆದ ಮೇಲೆ ಕೇಂದ್ರ ಹಣಕಾಸು ಸಚಿವಾಲಯವು ಐಬಿಪಿಎಸ್ ಪರೀಕ್ಷೆಯನ್ನು ಮುಂದಕ್ಕೆ ಹಾಕಿದ್ದು, ಸ್ಥಳೀಯ ಭಾಷೆಗಳಲ್ಲಿ ಪರೀಕ್ಷೆ ನಡೆಸುವ ಸಲುವಾಗಿ ಸಾಧಕ-ಬಾಧಕಗಳನ್ನು ನೋಡಲು ಸಮಿತಿಯೊಂದನ್ನು ರಚಿಸಿದೆ. ಇದಕ್ಕೆ 15 ದಿನಗಳ ಕಾಲಾವಕಾಶ ನೀಡಿದ್ದು, ಈ ಸಮಿತಿಯ ಶಿಫಾರಸುಗಳ ಅನ್ವಯ ಪರೀಕ್ಷೆ ನಡೆಸುವುದಾಗಿ ಹೇಳಿದೆ.
ಅದರಲ್ಲೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸ್ವಯಂ ಮುತುವರ್ಜಿ ವಹಿಸಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಪರೀಕ್ಷೆಯನ್ನು ತಡೆ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ವಿಚಾರದಲ್ಲಿ ಅವರನ್ನು ಅಭಿನಂದಿಸಲೇ ಬೇಕು. ಹಾಗೆಯೇ, ಈ ಪರೀಕ್ಷೆಗೆ ಸಮಿತಿ ರಚನೆ ಮಾಡಿ, ವರದಿಗಾಗಿ ಕಾಯುವ ಅಗತ್ಯವಿಲ್ಲ, ವಿತ್ತ ಸಚಿವಾಲಯವೇ ಒಂದು ಆದೇಶದ ಮೂಲಕ ಮಾಡಬಹುದು ಎಂದು ರಾಜ್ಯಸಭಾ ಸಂಸದ ಜಿ.ಸಿ. ಚಂದ್ರ ಶೇ ಖರ್ ಹೇಳಿದ್ದಾರೆ. ಈ ಬಗ್ಗೆಯೂ ಕೇಂದ್ರ ಸರ್ಕಾರ ಗಮನ ಹರಿಸಬಹುದು.
ಆದರೆ, ಇದೆಲ್ಲದಕ್ಕಿಂತ ಪ್ರಮುಖವಾದ ಪ್ರಶ್ನೆ ಏನೆಂದರೆ, ಪ್ರತಿ ಬಾರಿಯೂ ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡದಲ್ಲೇ ನಡೆಸಿ ಎಂದು ಕೇಂದ್ರ ಸರ್ಕಾರವನ್ನು ಅಥವಾ ಪರೀಕ್ಷೆ ನಡೆಸುವ ಮಂಡಳಿಯನ್ನು ಕನ್ನಡಿಗರು ಕೇಳಿಕೊಳ್ಳಬೇಕಾ? ಸಾಮಾನ್ಯವಾಗಿ ಬ್ಯಾಂಕಿಂಗ್ ಹುದ್ದೆಗಳು ಆಯಾ ರಾಜ್ಯದ ಸ್ಥಳೀಯ ಭಾಷೆಗಳಿಗೆ ಹೊಂದಿಕೊಂಡಂತೆ ಇರಬೇಕು. ಕರ್ನಾಟಕಕ್ಕೆ ಬೇರೊಂ ರಾಜ್ಯದ ಬ್ಯಾಂಕ್ ಅಧಿಕಾರಿಯೊಬ್ಬರು ಬಂದು, ಇಲ್ಲಿನ ಸ್ಥಳೀಯ ಜನರೊಂದಿಗೆ ವ್ಯವಹರಿಸುವುದು ಕಷ್ಟ. ಬ್ಯಾಂಕಿನ ಸಿಬ್ಬಂದಿ ಜತೆಗೆ ವ್ಯವಹರಿಸಲು ಕನ್ನಡಿಗರು ಬೇರೊಂದು ಭಾಷೆ ಕಲಿಯಬೇಕೇ? ಎಂಬಿತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ. ಹೀಗಾಗಿ, ಇನ್ನು ಮುಂದಾದರೂ, ಬ್ಯಾಂಕಿಂಗ್ ಪರೀಕ್ಷೆಗಳನ್ನು ಸಾಧ್ಯವಾದಷ್ಟು ಕನ್ನಡವೂ ಸೇರಿದಂತೆ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವುದಕ್ಕೆ ಒತ್ತು ನೀಡಬೇಕು. ಜತೆಗೆ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರಕಿಸಲು ರಾಜ್ಯ ಸರ್ಕಾರವೂ ಪ್ರಯತ್ನಿಸಬೇಕು.