Advertisement

ಕನ್ನಡದಲ್ಲೇ ಬ್ಯಾಂಕಿಂಗ್‌ ಪರೀಕ್ಷೆ: ಅಭಿನಂದನೆ

02:18 AM Jul 05, 2019 | Sriram |

ಬೆಂಗಳೂರು: ರಾಜ್ಯದ ಜನತೆಯ ಬಹುದಿನಗಳ ಬೇಡಿಕೆಯಾದ ಪ್ರಾದೇಶಿಕ ಗ್ರಾಮೀಣ ಬ್ಯಾಂಕಿಂಗ್‌ ಸೇವೆ ನೇರ ನೇಮಕಾತಿಗೆ ಕನ್ನಡದಲ್ಲೇ ಪರೀಕ್ಷೆ ಬರೆಯಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅಭಿನಂದನೆ ಸಲ್ಲಿಸಿದ್ದಾರೆ.

Advertisement

ರಾಜ್ಯದ ಜನತೆಯ ಬಹುದಿನಗಳ ಬೇಡಿಕೆಯನ್ನು ಕೇಂದ್ರ ಹಣಕಾಸು ಇಲಾಖೆ ನೆರವೇರಿಸಿದೆ. ಈ ಹಿಂದೆ ರಾಜ್ಯ ಸಂಸದರ ನಿಯೋಗದೊಂದಿಗೆ ನಾನು ಹಾಗೂ ದಿ.ಅನಂತ ಕುಮಾರ್‌ ಅವರು ಅಂದಿನ ಹಣಕಾಸು ಸಚಿವರನ್ನು ಭೇಟಿಯಾಗಿ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದ್ದೆವು. ನಾಡಿನ ಸಾಹಿತಿಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಇತರ ನಿಯೋಗಗಳು ನಮಗೆ ಮನವಿ ಸಲ್ಲಿಸಿದ್ದವು. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಲಾಗಿತ್ತು. ಅದರಂತೆ ಕೇಂದ್ರ ಸರ್ಕಾರ ರಾಜ್ಯದ ಜನತೆಗೆ ದೊಡ್ಡ ಕೊಡುಗೆ ನೀಡಿದೆ ಎಂದು ಸದಾನಂದಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮನು ಬಳಿಗಾರ್‌ ಅಭಿನಂದನೆ: ಕನ್ನಡದಲ್ಲಿ ಬ್ಯಾಂಕಿಂಗ್‌ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಕೇಂದ್ರ ಸರ್ಕಾರವನ್ನು ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸಿದೆ. ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌, ಪ್ರಾದೇಶಿಕ ಭಾಷೆಗಳಲ್ಲಿ ಬ್ಯಾಂಕಿಂಗ್‌ ಪರೀಕ್ಷೆಗಳನ್ನು ನಡೆಸಬೇಕೆಂಬ ಮೂರು ವರ್ಷಗಳ ಹೋರಾಟಕ್ಕೆ ಕೇಂದ್ರ ಸರ್ಕಾರ ಮನ್ನಣೆ ನೀಡಿರುವುದು ಸ್ವಾಗತಾರ್ಹ. ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಇತರ ಸಂಘ ಸಂಸ್ಥೆಗಳ ಜತೆಗೂಡಿ ದೆಹಲಿಗೆ ನಿಯೋಗ ಕೊಂಡೊಯ್ದು ಸಂಬಂಧ ಪಟ್ಟ ಸಚಿವರಿಗೆ ಮನವಿ ಮಾಡಲಾಗಿತ್ತು ಎಂದಿದ್ದಾರೆ.


Advertisement

Udayavani is now on Telegram. Click here to join our channel and stay updated with the latest news.

Next