Advertisement

ಗುರು ದೀಕ್ಷೆ ಪಡೆದ ಮನುಷ್ಯನಿಗಿದೆ ಮೋಕ್ಷ

03:43 PM Apr 26, 2019 | Naveen |

ಬಂಕಾಪುರ: ಗುರುವಿನಿಂದ ದೀಕ್ಷೆ ಪಡೆದ ಮನುಷ್ಯ ಮೋಕ್ಷ ಹೊಂದಿ ನರ ಹರನಾಗಿ ಭಕ್ತ ಮಹೀಶ್ವರನಾಗಬಲ್ಲ ಎಂದು ಅರಳೆಲೆಮಠದ ಶ್ರೀ ರೇವಣ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಅರಳೆಲೆಮಠದ ಸಭಾ ಭವನದಲ್ಲಿ ನಡೆದ ಆಂಧ್ರದ ಕರ್ನೂಲ್ ಜಿಲ್ಲೆಯ ಯಾಗಂಟೆ ಕ್ಷೇತ್ರದ ಮೂರನೇ ಪೀಠಾಧಿಪತಿಯನ್ನಾಗಿ ಬಂಜಾರ ಸಮಾಜದ ರವಿ ಅವರಿಗೆ ಶಿವದೀಕ್ಷೆ ನೀಡಿ, ಶ್ರೀ ರುದ್ರಮುನಿಸ್ವಾಮಿ ಎಂದು ನಾಮಕರಣ ಮಾಡಿದರು.

ಯಾಗಂಟೆ ಕ್ಷೇತ್ರದ ಪ್ರಥಮ ಪೀಠಾಧಿಪತಿಗಳಾಗಿದ್ದ ಬಂಜಾರ ಸಮಾಜದ ಲಕ್ಷ್ಮಣ ಅವರಿಗೆ ಶ್ರೀ ಮಠದ ಲಿಂ| ರುದ್ರಮುನಿ ಶಿವಾಚಾರ್ಯರು ಶಿವದೀಕ್ಷೆ ನೀಡಿ ಶ್ರೀ ಮಲ್ಲಿಕಾರ್ಜುನಸ್ವಾಮಿ ಎಂದು ನಾಮಕರಣ ಮಾಡಿದ್ದರು. ಅವರು ಲಿಂ| ರುದ್ರಮುನೀಶ್ವರರ ಪರಮ ಶಿಷ್ಯರಾಗಿ ವೀರ ಲೀಲಾ ಮೂರ್ತಿಗಳಾಗಿ ಬಂಜಾರ ಸಮಾಜವಷ್ಟೇ ಅಲ್ಲದೇ ಸರ್ವ ಸಮಾಜಕ್ಕೆ ಧರ್ಮ ಬೋಧಿಸಿದ್ದಾರೆ. ಕಾಡಿನ ಗವಿಯೊಂದರಲ್ಲಿ ಜ್ಞಾನ ಮಾಡುತ್ತ ಶಿವನಲ್ಲಿ ಲೀನವಾಗಿ ವಾರ ಕಳೆದರೂ ಯಾವ ಪಶು, ಪಕ್ಷಿ, ಕ್ರಿಮಿ, ಕೀಟಗಳು ಅವರ ದೇಹ ಘಾಸಿಗೊಳಿಸಿರಲಿಲ್ಲ. ಲಿಂ| ಮಲ್ಲಿಕಾರ್ಜುನ ಸ್ವಾಮಿಗಳು ಮಹಾನ್‌ ಯೋಗಿ ಆಗಿದ್ದರು ಎಂದರು.

ಅರಳೆಲೆಮಠಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ವರೆಗೆ ನೂರು ಮಠಾಧೀಶರನ್ನು ಕಂಡಿರುವ ಕೀರ್ತಿ ಇದೆ. ಶ್ರೀಮಠ ಜಾತ್ಯಾತೀತ ನಿಲುವಿನೊಂದಿಗೆ ಸರ್ವ ಸಮಾಜ ಬಾಂಧವರನ್ನು ಒಗ್ಗೂಡಿಸಿ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶ ಸಾರುತ್ತಿದೆ ಎಂದು ಹೇಳಿದರು.

ತನ್ನಿಮಿತ್ಯ ಪ್ರಾಥಃಕಾಲ ಬಂಜಾರ ಸಮಾಜ ಬಾಂಧವರಿಂದ ಲಿಂ| ರುದ್ರಮುನೀಶ್ವರರ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ಜರುಗಿದವು. ನಂತರ ಗದಿಗಯ್ಯಶಾಸ್ತ್ರೀ ಮಹಾಂತಮಠ ಅವರಿಂದ ಶ್ರೀ ಮಠದ ರೇವಣಸಿದ್ಧೇಶ್ವರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ರವಿ (ಶ್ರೀ ರುದ್ರಮುನಿ ಸ್ವಾಮಿ) ಅವರಿಗೆ‌ ಪೀಠಾರೋಹಣದ ಅಂಗವಾಗಿ ಶಾಸ್ತ್ರೋಕ್ತವಾಗಿ ದಿಕ್ಷಾ ಸಂಸ್ಕಾರ ನೀಡಿ, ಯಾಗಂಟೆ ಕ್ಷೇತ್ರಕ್ಕೆ ಮೂರನೇ ಪೀಠಾಧಿಪತಿಗಳನ್ನಾಗಿ ನೇಮಿಸಲಾಯಿತು. ಶ್ರೀ ರುದ್ರಮುನೀಶ್ವರ ಸೇವಾ ಸಮಿತಿಯ ಬಂಕಣ್ಣ ಕುರಗೋಡಿ, ಶೇಕಣ್ಣ ಅಂಕಲಕೋಟಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next