Advertisement

ದೇವಿ ಜಾತ್ರೆ ಬಂದರೆ ಊರೇ ಖಾಲಿ ಖಾಲಿ!

03:14 PM Feb 13, 2020 | Naveen |

ಬಂಕಾಪುರ: ಹೋತನಹಳ್ಳಿ ಗ್ರಾಮದಲ್ಲಿ ಐದು ವರ್ಷಕ್ಕೊಮ್ಮೆ ನಡೆಯಲಿರುವ ಗ್ರಾಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹೊರಬೀಡು ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ದೊರೆಯಿತು.

Advertisement

ಪೂರ್ವಜರ ಕಾಲದಿಂದಲೂ ಆಚರಿಸುತ್ತ ಬಂದಿರುವ ಈ ಹೊರಬೀಡು ಸಂಪ್ರದಾಯವನ್ನು ಇಂದಿಗೂ ಹೋತನಹಳ್ಳಿ ಗ್ರಾಮಸ್ಥರು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಫೆ. 20ರಿಂದ ಮಾ.4 ರ ವರೆಗೆ ನಡೆಯಲಿರುವ ಗ್ರಾಮದೇವಿ ಜಾತ್ರೋತ್ಸವದ ಸಂಪ್ರದಾಯದಂತೆ ಗ್ರಾಮಸ್ಥರು ಮಂಗಳವಾರ ಸೂರ್ಯೋದಯಕ್ಕೂ ಮುನ್ನ ಕುರಿ, ಕೋಳಿ, ಬೆಕ್ಕು, ನಾಯಿ, ಜಾನುವಾರಗಳ ಸಮೇತ ಮನೆಬಿಟ್ಟು ಊರ ಹೊರಗಿನ ಹೊಲ, ಗದ್ದೆಗಳಲ್ಲಿ ಪರಿವಾರ ಕುಟುಂಬ ಸಮೇತ ಬೀಡು ಬಿಟ್ಟರು. ಮನೆ ಬಿಡುವುದಕ್ಕಿಂತ ಪೂರ್ವದಲ್ಲಿ ಗ್ರಾಮಸ್ಥರು, ಪ್ರತಿ ಮನೆಯ ಪಡಶಾಲೆಗಳಲ್ಲಿ ರಂಗೋಲಿ ಹಾಕಿ ದೀಪಬೆಳಗಿಸಿ ಗ್ರಾಮದೇವತೆಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆಗೈದರು. ಕಷ್ಟ, ಕಾರ್ಪಣ್ಯಗಳನ್ನು ದೂರಮಾಡಿ ಸುಖ, ಸಂಪತ್ತು, ಸಮೃದ್ಧಿ, ನೆಮ್ಮದಿ ಜೀವನ ನೀಡುವಂತೆ ಬೇಡಿಕೊಂಡರು.

ನಂತರ ತಮಗೆ ಊಟೋಪಚಾರಕ್ಕೆ ಬೇಕಾದ ಆಹಾರ ಪದಾರ್ಥಗಳು, ಬಟ್ಟೆ, ಹಾಸಿಗೆ, ಮತ್ತಿತರ ಅವಶ್ಯ ವಸ್ತುಗಳ ಸಮೇತ ಮನೆಯಿಂದ ಹೊರನಡೆದು ಹೊಲ, ಗದ್ದೆಗಳಿಗೆ ತೆರಳಿ ಅಲ್ಲಿಯೆ ಬೀಡು ಬಿಟ್ಟು ಸಹ ಭೋಜನ ಮಾಡಿದರು.

ನಂತರ ಹರಟೆ ಹೊಡೆಯುತ್ತ ಹಾಡು, ಹಾಸ್ಯ, ಜೀವನದಲ್ಲಿ ಆಗಿ ಹೋದ ಕಷ್ಟ, ಸುಖಗಳ ಮೇಲಕು ಹಾಕುತ್ತ ಕಾಲ ಕಳೆಯುತ್ತಾರೆ. ಸೂರ್ಯಾಸ್ತದ ನಂತರ ಮನೆಗೆ ತೆರಳಿ ಮನೆಯಲ್ಲಿ ಹಚ್ಚಿಬಂದ ದೀಪವನ್ನು ನೋಡಿ ಆನಂದಿಸುತ್ತಾರೆ. ದೀಪ ಊರಿಯುತ್ತಿದ್ದರೆ ಶುಭ ಶಕುನ, ಆಕಸ್ಮಿಕವಾಗಿ ದೀಪ ಆರಿದ್ದರೆ ಅಶುಭ ಶಕುನ ಎಂಬ ಸಂಪ್ರದಾಯ ಜನರ ಮನದಲ್ಲಿ ಬೇರೂರಿದೆ.

ಹೊರಬೀಡು ಸಂದರ್ಭದಲ್ಲಿ ಯಾರು ಕೂಡಾ ಗ್ರಾಮದ ಗಡಿಯನ್ನು ದಾಟಿ ಊರ ಒಳಗೆ ಹೋಗುವಂತಿಲ್ಲ. ಆಕಸ್ಮಾತ ಗಡಿದಾಟಿ ಊರೊಳಗೆ ಪ್ರವೇಶ ಮಾಡಿದರೆ ಅಶುಭ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಬೆಳೆದು ಬಂದಿದೆ.

Advertisement

ಇದಕ್ಕನುಗುಣವಾಗಿ ಮಂಗಳವಾರ ಕೆಎಸ್‌ಆರ್‌ ಟಿಸಿ ಬಸ್ಸೊಂದು ಊರ ಒಳಗೆ ಪ್ರವೇಶಿಸಿ ಕೆಟ್ಟು ನಿಂತ ಪರಿಣಾಮ ಗ್ರಾಮಸ್ಥರ ನಂಬಿಕೆಗೆ ಮತ್ತಷ್ಟು ಪುಷ್ಠಿ ನೀಡಿದಂತಾಯಿತು. ವಿಷಯ ಅರಿತ ಪ್ರಯಾಣಿಕರು ಲಗು, ಬಗೆಯಿಂದ ಬಸ್‌ ಇಳಿದು ಊರಗಡಿದಾಟಿ ಹೊರ ಬಂದು ಬೇರೆ ವಾಹನದ ಮೂಲಕ ತಮ್ಮ ಗ್ರಾಮ ಸೇರಿಕೊಂಡರು. ಫೆ. 20 ರಂದು ಶ್ರೀದೇವಿಗೆ ಗಟ್ಟ ಹಾಕಿದಾಗಿನಿಂದ ಹಿಡಿದು ಫೆ. 25 ರ ವರೆಗೆ ಜಾತ್ರೋತ್ಸವಕ್ಕೆ ಚಾಲನೆ ದೊರೆಯುವವರೆಗೆ ಗ್ರಾಮದಲ್ಲಿ ಯಾರು ಕುಟ್ಟುವುದು, ಬೀಸುವುದು, ಹೊಲದಲ್ಲಿ ಗಳೆ ಹೊಡೆಯುವುದು ಮಾಡುವಂತಿಲ್ಲ. ಗ್ರಾಮಸ್ಥರು ಬೇರೆ ಊರುಗಳಲ್ಲಿ ರಾತ್ರಿ ಕಳೆಯುವಂತಿಲ್ಲ ಎಂಬ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.

ಈ ಹಿಂದೆ ಹೊರಬೀಡು ಸಂದರ್ಭದಲ್ಲಿ ಗಡಿದಾಟಿ ಬಂದರೆ ಏನಾಗುತ್ತದೆ ವ್ಯಕ್ತಿಯೊಬ್ಬ ಊರೊಳಗೆ ಬಂದಿದ್ದ. ನಂತರ ಆತನ ಮನೆಯಲ್ಲಿದ್ದ ಗೋವಿನ ಜೋಳದ ಬಣವೆ ಸುಟ್ಟಿತ್ತು. ಮರೆತು ಹಿತ್ತಲಿನಲ್ಲಿ ಬಿಟ್ಟುಬಂದ ಕೋಳಿಗಳೂ ಸಾವನ್ನಪ್ಪಿದ್ದವು.
 ಹನಮಂತ ಯು.ವಿ.,
ಗ್ರಾಮಸ್ಥ

ಸ್ಥಳೀಯ ಶಾಲೆಗೆ ರಜೆ ಘೋಷಿಸಲಾಗಿದ್ದು, ಬೇರೆ ಊರುಗಳಿಗೆ ತೆರಳುವ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸೂರ್ಯೋದಯಕ್ಕೂ ಮುನ್ನ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಿ ಕಳುಹಿಸಿಕೊಡಲಾಗಿದೆ.
ರಮೇಶ ಬೆಳವತ್ತಿ,
ಗ್ರಾಮದ ಮುಖಂಡ

„ಸದಾಶಿವ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next