ನವದೆಹಲಿ: ಹೊಸ ವರ್ಷ ಪ್ರಾರಂಭದೊಂದಿಗೆ ಬ್ಯಾಂಕ್ ನೌಕರರ ಮುಷ್ಕರವೂ ಸಹ ಪ್ರಾರಂಭವಾದಂತಿದೆ. ಬ್ಯಾಂಕ್ ಸಂಘಟನೆಗಳ ಒಕ್ಕೂಟ ವೇದಿಕೆ (UFBU) ಜನವರಿ 31 ಮತ್ತು ಫೆಬ್ರವರಿ 01ರಂದು ಎರಡು ದಿನಗಳ ಅಖಿಲ ಭಾರತ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿವೆ. ಹಾಗಾಗಿ ಈ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಮುಖ ಬ್ಯಾಂಕಿಂಗ್ ವ್ಯವಹಾರವನ್ನು ಇರಿಸಿಕೊಳ್ಳದಿರುವುದು ಉತ್ತಮ.
ಆರ್ಥಿಕ ಸಮೀಕ್ಷೆ ಪ್ರಕಟಗೊಳ್ಳುವ ದಿನ ಹಾಗೂ ಕೇಂದ್ರ ಸರಕಾರದ ಬಜೆಟ್ ಮಂಡನೆ ದಿನವೇ ಯು.ಎಫ್.ಬಿ.ಯು. ಬ್ಯಾಂಕ್ ಮುಷ್ಕರಕ್ಕೆ ಕರೆನೀಡಿರುವುದು ವಿಶೇಷ. ಈ ಎರಡು ದಿನಗಳ ಬ್ಯಾಂಕ್ ನೌಕರರ ಮುಷ್ಕರದಿಂದಾಗಿ ಜನವರಿ 31 ಹಾಗೂ ಫೆಬ್ರವರಿ 01ರಂದು ಬ್ಯಾಂಕಿಂಗ್ ವ್ಯವಹಾರ ಅಸ್ತವ್ಯಸ್ತಗೊಳ್ಳುವ ನಿರೀಕ್ಷೆ ಇದೆ.
ಬ್ಯಾಂಕ್ ನೌಕರರ ಸಂಘಗಳ ಒಕ್ಕೂಟ ಕರೆನೀಡಿರುವ ಈ ಮುಷ್ಕರದಿಂದ ಈ ಎರಡು ದಿನಗಳ ಕಾಲ ತನ್ನ ಗ್ರಾಹಕರಿಗೆ ತೊಂದರೆಯಾಗದಂತಿರಲು ಸೂಕ್ತ ಬದಲೀ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ದೇಶದ ಅತೀ ದೊಡ್ಡ ಬ್ಯಾಂಕಿಂಗ್ ಜಾಲವಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.
ಒಂಭತ್ತು ಟ್ರೇಡ್ ಯೂನಿಯನ್ ಗಳ ಒಕ್ಕೂಟವಾಗಿರುವ ಯು.ಎಫ್.ಬಿ.ಯು. 2017ರ ನವಂಬರ್ 01ರಿಂದ ಬಗೆಹರಿಯದೇ ಉಳಿದಿರುವ ವೇತನ ಪರಿಷ್ಕರಣೆ ಬೇಡಿಕೆಯನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಒತ್ತಾಯಿಸಿ ಮಾರ್ಚ್ ತಿಂಗಳಲ್ಲೂ ಸಹ ಮೂರು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. 2
020ರ ಮಾರ್ಚ್ 11, 12 ಮತ್ತು 13ರಂದು ಮುಷ್ಕರಕ್ಕೆ ಕರೆ ನೀಡಿರುವುದರಿಂದ ಈ ಮೂರು ದಿನ ಸಹ ಗ್ರಾಹಕರಿಗೆ ಪರದಾಟ ತಪ್ಪಿದ್ದಲ್ಲ.
ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ, ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಒಕ್ಕೂಟ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘಟನೆ, ಭಾರತೀಯ ಬ್ಯಾಂಕ್ ನೌಕರರ ಫೆಡರೇಷನ್, ಭಾರತೀಯ ರಾಷ್ಟ್ರೀಯ ಬ್ಯಾಂಕ್ ನೌಕರರ ಫೆಡರೇಶನ್, ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್, ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ ಮತ್ತು ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಒಕ್ಕೂಟಗಳನ್ನು ಈ ಬ್ಯಾಂಕ್ ಸಂಘಟನೆಗಳ ಒಕ್ಕೂಟ ವೇದಿಕೆಯು (UFBU) ಒಳಗೊಂಡಿದೆ.