Advertisement

ಅಕೌಂಟ್‌ ಬ್ಯಾಲೆನ್ಸ್‌ ಪರಿಶೀಲಿಸಲು ಬ್ಯಾಂಕ್‌ಗೆ ಬರಬೇಕು!

11:58 PM May 01, 2019 | Sriram |

ಸುಳ್ಯ: ಜಗತ್ತೇ ಕೈಯೊಳಗೆ ಎಂಬ ಈ ಡಿಜಿಟಲ್‌ ಯುಗದಲ್ಲೂ ಖಾತೆಯ ಬ್ಯಾಲೆನ್ಸ್‌ ಪರಿಶೀಲಿಸಲು ಈ ಗ್ರಾಮದವರು ಬ್ಯಾಂಕ್‌ಗೆ ಓಡಬೇಕು. ಇಷ್ಟು ಮಾತ್ರ ಅಲ್ಲ, ಗ್ಯಾಸ್‌ ಬುಕ್‌ ಮಾಡಲು, ತುರ್ತು ಫೋನ್‌ ಕರೆ ಮಾಡಲೂ ಪರದಾಡಬೇಕು.

Advertisement

ಸುಳ್ಯ ತಾಲೂಕಿನ ಕರ್ನಾಟಕ- ಕೇರಳ ಗಡಿ ಪ್ರದೇಶ ಆಲೆಟ್ಟಿ ಗ್ರಾಮ ವ್ಯಾಪ್ತಿಯ ಕೆಲವು ಭಾಗಗಳ ಚಿತ್ರಣವಿದು. 400ಕ್ಕೂ ಅಧಿಕ ಕುಟುಂಬಗಳು ತುರ್ತು ಸಂದರ್ಭದಲ್ಲಿ ಹಲೋ ಎನ್ನಲೂ ಇಲ್ಲಿ ನೆಟ್‌ವರ್ಕ್‌ ಇಲ್ಲ. ಇಂಟರ್‌ನೆಟ್‌ ಗಗನ ಕುಸುಮ.

ಎಲ್ಲೆಲ್ಲಿ ಸಮಸ್ಯೆ?
ಆಲೆಟ್ಟಿ ಗ್ರಾಮದ ಕೂರ್ನಡ್ಕ, ಕಾಪುಮಲೆ, ಗೂಡಿಂಜ, ಪತ್ತುಕುಂಜ, ದೋಣಿಮೂಲೆ, ಬಡ್ಡಡ್ಕ, ನೆಡಿcಲು, ಆಡಿಂಜ, ಮೂಲ ಬಡ್ಡಡ್ಡ, ರಂಗತ್ತಮಲೆ ಕೇರಳ ಗಡಿಗೆ ತಾಗಿರುವ ಪ್ರದೇಶಗಳು. ಅರಣ್ಯದ ಸೆರಗಿನಲ್ಲಿರುವ ಇಲ್ಲಿಗೆ ಮೊಬೈಲ್‌ ಫೋನ್‌ ಟವರ್‌ ಇಲ್ಲ. ಶಾಲೆ, ಅಂಗನವಾಡಿ, ನ್ಯಾಯಬೆಲೆ ಅಂಗಡಿ ಎಲ್ಲವುಗಳಿಗೂ ನೆಟ್‌ವರ್ಕ್‌ ಬಿಸಿ ತಟ್ಟಿದೆ. ಇದು ಗಡಿ ಗ್ರಾಮಗಳ ಮೂಲ ಸೌಕರ್ಯ ಅಭಿವೃದ್ಧಿಗೆ ರಾಜ್ಯ, ಕೇಂದ್ರ ಸರಕಾರಗಳು ತಳೆದಿರುವ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

ಸ್ಥಿರ ದೂರವಾಣಿ ಕೆಟ್ಟಿದೆ
ಹಲವು ವರ್ಷಗಳ ಹಿಂದೆ ಗ್ರಾಮಸ್ಥರು ಬಿಎಸ್‌ಎನ್‌ಎಲ್‌ನ ಸ್ಥಿರ ದೂರವಾಣಿ ಸಂಪರ್ಕ ಪಡೆದಿದ್ದರು. ಅವುಗಳಲ್ಲಿ ಈಗ ಶೇ. 85ರಷ್ಟು ಸಂಪರ್ಕಗಳು ಕಡಿತಗೊಂಡಿವೆ. ಅಲ್ಲಲ್ಲಿ ಬಿರುಕು ಬಿಟ್ಟಿರುವ ಹಳೆಯ ತಂತಿಯನ್ನು ಬದಲಾಯಿಸದಿರುವುದು ಇದಕ್ಕೆ ಕಾರಣ. ಸಣ್ಣ ಮಳೆ, ಗಾಳಿ ಬಂದರೆ ಅವೂ ಕೆಟ್ಟುಹೋಗುತ್ತವೆ. ದುರಸ್ತಿ ಕಾಣಲು ಹಲವು ದಿನ ಬೇಕು.

ಕೇರಳದ ನೆಟ್‌ವರ್ಕ್‌
ನೆಟ್‌ವರ್ಕ್‌ ವಂಚಿತ ಎಲ್ಲ ಗ್ರಾಮಗಳು ಕರ್ನಾಟಕದವು. ಈಗ ಅಲ್ಲಿಗೆ ಅಲ್ಪಸ್ವಲ್ಪ ನೆಟ್‌ವರ್ಕ್‌ ಸಿಗುವುದು ಕೇರಳದ ರಾಣಿಪುರಂನ ಟವರ್‌ನಿಂದ. ಅದು ಇಲ್ಲಿಂದ 35ರಿಂದ 40 ಕಿ.ಮೀ. ದೂರದಲ್ಲಿದೆ. ಆಗೊಮ್ಮೆ ಈಗೊಮ್ಮೆ ಮಾತ್ರ ಕಾಣಿಸಿ ಕೊಳ್ಳುವ ಇದನ್ನು ನಂಬಿಕೊಳ್ಳಲಾಗದು. ಬಡ್ಡಡ್ಕಕ್ಕೆ ತಾಗಿಕೊಂಡ ಕೇರಳದ ಕಲ್ಲಪಳ್ಳಿಯಲ್ಲಿ ಹೊಸ ಬಿಎಸ್ಸೆನ್ನೆಲ್‌ ಟವರ್‌ ನಿರ್ಮಿಸಿದ್ದರೂ ಸಂಪರ್ಕ ನೀಡಿಲ್ಲ. ಅದಾದರೆ ಕೆಲವು ಗ್ರಾಮಗಳಿಗೆ ಅನುಕೂಲವಾಗಬಹುದು ಅನ್ನುತ್ತಾರೆ ಗ್ರಾಮಸ್ಥರು.

Advertisement

ಅಡುಗೆ ಅನಿಲ ಬುಕ್ಕಿಂಗ್‌ಗೆ
ಕೇಂದ್ರಕ್ಕೆ ಬರಬೇಕು!
ಅಡುಗೆ ಅನಿಲ ಸಿಲಿಂಡರ್‌ ಖಾಲಿಯಾದಾಗ ಮೊಬೈಲ್‌ ಅಥವಾ ಆನ್‌ಲೈನ್‌ ಮೂಲಕ ನೋಂದಣಿ ಮಾಡಲು ಅವಕಾಶ ಇದೆ. ಆದರೆ ಈ ಗ್ರಾಮದವರು ಐದಾರು ಕಿ.ಮೀ. ಸಂಚರಿಸಿ ಏಜೆಂಟ್‌ ಕೇಂದ್ರದಲ್ಲೇ ನೋಂದಣಿ ಮಾಡಬೇಕು. ಅಲ್ಲಿಂದಲೇ ಅನಿಲ ಜಾಡಿ ಒಯ್ಯಬೇಕು. ಮೊಬೈಲ್‌ಗೆ ಸಂದೇಶ ಬಾರದ ಕಾರಣ ಬ್ಯಾಂಕ್‌ ಖಾತೆಗೆ ಸರಕಾರದ ಸಬ್ಸಿಡಿ, ಸವಲತ್ತು ಬಂದಿರುವುದನ್ನು ಖಾತರಿ ಪಡಿಸಿಕೊಳ್ಳಲೂ ಬ್ಯಾಂಕ್‌ ಗೆ ಬಂದೇ ವಿಚಾರಿಸಬೇಕು.

ಸಾಕಾಗಿದೆ
ನಾವು ಕೇರಳದ ಗಡಿಭಾಗದ ನಿವಾಸಿಗಳು. ಇಲ್ಲಿ ನೆಟ್‌ವರ್ಕ್‌ ಸಿಗುತಿಲ್ಲ. ಇಂಟರ್‌ನೆಟ್‌ ಸೌಲಭ್ಯವೂ ಇಲ್ಲ. ನೂರಾರು ವಿದ್ಯಾರ್ಥಿಗಳಿದ್ದಾರೆ. ಬ್ಯಾಂಕ್‌ ಖಾತೆ ಪರಿಶೀಲನೆ, ಅಡುಗೆ ಅನಿಲ ಬುಕ್ಕಿಂಗ್‌ಗೂ ನಾವು ಆಯಾ ಕೇಂದ್ರಕ್ಕೆ ಹೋಗಬೇಕು. ಟವರ್‌ ನಿರ್ಮಿಸುವಂತೆ ಹತ್ತಾರು ಮನವಿ ಕಳುಹಿಸಿದ್ದರೂ ಸ್ಪಂದನೆ ಸಿಕ್ಕಿಲ್ಲ.
– ಜಗದೀಶ ಕಾಪುಮಲೆ, ಸುಳ್ಯ ನ್ಯಾಯವಾದಿ, ಸ್ಥಳೀಯ ನಿವಾಸಿ

ಕೆಲವು ಭಾಗಗಳಲ್ಲಿ ಹೊಸ ಟವರ್‌ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗಿದ್ದು, ಕೇರಳ ಗಡಿಭಾಗದಲ್ಲಿ ಈ ಬಗ್ಗೆ ಮನವಿ ಸಲ್ಲಿಸಿರುವ ಕುರಿತು ಪರಿಶೀಲಿಸಲಾಗುವುದು. ಕೂರ್ನಡ್ಕ ಸಹಿತ ಕರ್ನಾಟಕ-ಕೇರಳ ಗಡಿ ಗ್ರಾಮದ ನೆಟ್‌ವರ್ಕ್‌, ಇಂಟರ್‌ನೆಟ್‌ ಸಮಸ್ಯೆ ಬಗ್ಗೆ ಸಂಬಂಧಿಸಿದ ಅಧಿಕಾರಿಯ ಬಳಿ ಗಮನ ಹರಿಸಲು ಸೂಚಿಸಲಾಗುವುದು.
– ಆನಂದ ಎನ್‌., ಪ್ರಭಾರ ಎಜಿಎಂ, ಸುಳ್ಯ ಬಿಎಸ್‌ಎನ್‌ಎಲ್‌

– ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next