ಬೆಂಗಳೂರು: ಓದಿದ್ದು ಮೆಕ್ಯಾನಿಕಲ್ ಎಂಜಿನಿಯರ್… ಮಾಡಿದ್ದು ಬ್ಯಾಂಕ್ ದರೋಡೆ!
ಇದು ಸಿನಿಮಾ ಕಥೆಯಲ್ಲ. ಆದರೆ, ಸಿನಿಮೀಯ ಮಾದರಿಯಲ್ಲಿ ಬ್ಯಾಂಕ್ ದರೋಡೆ ಮಾಡಿ ಶೇ.95ರಷ್ಟು ಸಾಲವನ್ನು ತೀರಿಸಿ, ಕೊನೆಗೂ ಪೊಲೀಸರ ಅತಿಥಿಯಾದ ಬೆಂಗಳೂರಿನ ಬಸವೇಶ್ವರನಗರ ನಿವಾಸಿ ಎಸ್. ಧೀರಜ್ (28) ಎಂಬಾತನ ಕಥೆಯಿದು.
ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಲಕ್ಷಾಂತರ ರೂ. ನಷ್ಟ ಉಂಟಾಗಿ ಮಾಡಿಕೊಂಡಿದ್ದ ಸಾಲ ತೀರಿಸಲು ಯೂ ಟ್ಯೂಬ್, ಗೂಗಲ್ ನೋಡಿ ಈತ ಬ್ಯಾಂಕ್ ದರೋಡೆ ಮಾಡಿದ್ದಾನೆ. ಈತ ಮಡಿವಾಳ ಠಾಣೆ ವ್ಯಾಪ್ತಿಯ ರಾಷ್ಟ್ರೀಕೃತ ಬ್ಯಾಂಕ್‌ಗೆ ಜ.14ರಂದು ಸಂಜೆ 5.40ರ ಸುಮಾರಿಗೆ ನುಗ್ಗಿ ಸಿಬ್ಬಂದಿಗೆ ಚಾಕು ತೋರಿಸಿ, ಸ್ಟ್ರಾಂಗ್ ರೂಮ್‌ನಲ್ಲಿ 16 ಪಾಕೆಟ್‌ನಲ್ಲಿದ್ದ 1 ಕೆ.ಜಿ. 805 ಗ್ರಾಂ ಚಿನ್ನಾಭರಣ, 3,76,960 ರೂ. ನಗದು ದೋಚಿ ಪರಾರಿಯಾಗಿದ್ದ.
ಸಾಲ ತೀರಿಸಲು ದರೋಡೆಗಿಳಿದ: ಮೆಕ್ಯಾನಿಕಲ್ ಎಂಜಿನಿಯರ್ ವ್ಯಾಸಂಗ ಮಾಡಿರುವ ಧೀರಜ್, ಇಂದಿರಾನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮಾಸಿಕ 30 ಸಾವಿರ ರೂ. ವೇತನ ಪಡೆಯುತ್ತಿದ್ದ. ಈ ಮಧ್ಯೆ ಆರೋಪಿ “ಒಎಲ್‌ವೈಎಂಪಿ ಟ್ರೇಡಿಂಗ್’ನಲ್ಲಿ ಲಕ್ಷಾಂತರ ರೂ. ಹೂಡಿಕೆ ಮಾಡಿದ್ದಾನೆ. ಅದರಿಂದ ನಷ್ಟ ಹೊಂದಿದ್ದು, ಕ್ರೆಡಿಟ್ ಕಾರ್ಡ್, ಫೈನಾನ್ಸ್, ಸ್ನೇಹಿತರಿಂದ 35 ಲಕ್ಷ ರೂ. ಸಾಲ ಮಾಡಿಕೊಂಡಿದ್ದಾನೆ. ಸಾಲ ಹಿಂದಿರುಗಿಸುವಂತೆ ಸಾಲಗಾರರ ಒತ್ತಡ ಹೆಚ್ಚಾಗಿತ್ತು. ಬರುವ ಮಾಸಿಕ ವೇತನದಲ್ಲಿ ಅದು ಸಾಧ್ಯವಾಗಿರಲಿಲ್ಲ. ಅಂಥ ಸಮಯದಲ್ಲಿ ಅವನಿಗೆ ಹೊಳೆದಿದ್ದೇ “ದರೋಡೆ’ ಐಡಿಯಾ.
ಕೃತ್ಯಕ್ಕೆ ಯುಟ್ಯೂಬ್ ಶೋಧ: ಕೆಲವು ದಿನಗಳ ಹಿಂದೆ ನೆರೆ ರಾಜ್ಯದಲ್ಲಿ ಬ್ಯಾಂಕ್‌ವೊಂದರಲ್ಲಿ ಕೋಟ್ಯಂತರ ರೂ. ದರೋಡೆ ಮಾಡಿದ ಸುದ್ದಿ ಪ್ರಕಟವಾಗಿತ್ತು. ಆ ಸುದ್ದಿಯೇ ಈತನಿಗೆ “ಪ್ರೇರಣೆ’ ನೀಡಿತ್ತು. ಕೂಡಲೇ ಗೂಗಲ್, ಯೂಟ್ಯೂಬ್‌ನಲ್ಲಿ ದರೋಡೆ ಮಾಡುವುದು ಹೇಗೆ ಎಂಬ ಬಗ್ಗೆ ಜಾಲಾಡಿದ್ದಾನೆ. ತನಗೆ ಬೇಕಾದ ಮಾಹಿತಿ ಸಿಕ್ಕ ನಂತರ, ಭದ್ರತಾ ಸಿಬ್ಬಂದಿ ಇಲ್ಲದಿರುವ ಮಡಿವಾಳದ ರಾಷ್ಟ್ರೀಕೃತ ಬ್ಯಾಂಕ್ ಅನ್ನು ದರೋಡೆ ಮಾಡಲು ನಿರ್ಧರಿಸಿದ್ದಾನೆ.
ಇದನ್ನೂ ಓದಿ:ಉ.ಪ್ರದೇಶದಲ್ಲಿ ನಾವು ಅಧಿಕಾರಕ್ಕೆ ಬಂದರೆ ಇಬ್ಬರು ಸಿಎಂ,ಮೂವರು ಡಿಸಿಎಂ: ಅಸಾದುದ್ದೀನ್ ಓವೈಸಿ
ಇಲ್ಲಿ ಯಾವ ಸಮಯದಲ್ಲಿ ಎಷ್ಟು ಮಂದಿ ಇರುತ್ತಾರೆ? ಎಷ್ಟು ಗಂಟೆಗೆ ವ್ಯವಹಾರ ಮುಕ್ತಾಯಗೊಳ್ಳುತ್ತದೆ? ಎಂಬೆಲ್ಲ ವಿಚಾರಗಳ ಬಗ್ಗೆ 3 ದಿನಗಳ ಕಾಲ ಮಾಹಿತಿ ಸಂಗ್ರಹಿಸಿಕೊಂಡಿದ್ದಾನೆ. ಪ್ಲ್ರಾನ್ ಸಿದ್ಧವಾದ ನಂತರ, ಜ.14ರಂದು ಸಂಜೆ ಒಬ್ಬರು ಸಿಬ್ಬಂದಿ ಬ್ಯಾಂಕ್ ಬಾಗಿಲು ಹಾಕುವಷ್ಟರಲ್ಲಿ ತನ್ನ ಕೃತ್ಯ ಮಾಡಿ ಮುಗಿಸಿದ್ದ.
4 ಕಿ.ಮೀ. ನಡೆದೇ ಸಾಗಿದ!: ದರೋಡೆಯ ಬಳಿಕ ಸುಮಾರು ನಾಲ್ಕೈದು ಕಿ.ಮೀ. ನಡೆದುಕೊಂಡೇ ಸಾಗಿದ್ದಾನೆ. ನಂತರ ಬಿಎಂಟಿಸಿ ಬಸ್‌ನಲ್ಲಿ ಬನಶಂಕರಿಗೆ ಹೋಗಿ, ಚಿನ್ನಾಭರಣ ಮಾರಾಟಕ್ಕೆ ಯತ್ನಿಸಿದ್ದಾನೆ. ಸಾಧ್ಯವಾಗಿಲ್ಲ. ನಂತರ ಚಿಕ್ಕಮಗಳೂರಿಗೆ ಹೋಗಿದ್ದ. ಆದರೆ, ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದ್ದರಿಂದ ತುಮಕೂರು, ನಂತರ ಆಂಧ್ರಕ್ಕೆ ತೆರಳಿದ್ದಾನೆ. ಅಲ್ಲೂ ಮಾರಲಾಗದೇ, ಬಳ್ಳಾರಿಗೆ ಬಂದು, ಬಳಿಕ ಬೆಂಗಳೂರಿಗೆ ಬಂದು, ಹಂತ-ಹಂತವಾಗಿ ಮಾರಾಟ ಮಾಡಿ ಶೇ.95ರಷ್ಟು ಸಾಲ ತೀರಿಸಿದ್ದ. ಕೊನೆಯ ಸಾಲಗಾರನಿಗೆ ಹಣ ಕೊಡಲು ಮುಂದಾಗಿರುವ ಮಾಹಿತಿ ಸಿಗುತ್ತಿದ್ದಂತೆ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಾರಾಟ ಮಾಡಿದ್ದ ಎಲ್ಲ ಚಿನ್ನಾಭರಣವನ್ನು ಜಪ್ತಿ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.