ತ್ತೂಂದು ಸುತ್ತಿನ ಬ್ಯಾಂಕ್ ವಿಲೀನ ಪ್ರಕ್ರಿಯೆಗೆ ಸರಕಾರ ಮುಂದಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಘೋಷಣೆಯನ್ನು ಮಾಡಿದ್ದು,ಆ ಪ್ರಕಾರ ದೇಶದಲ್ಲಿ ಇನ್ನು 12 ರಾಷ್ಟ್ರೀಕೃತ ಬ್ಯಾಂಕ್‌ಗಳು ಮಾತ್ರ ಉಳಿಯಲಿವೆ. ಈ ಸಲ ನಾಲ್ಕು ದೊಡ್ಡ ಮಟ್ಟದ ವಿಲೀನಗಳನ್ನು ಮಾಡಲು ಉದ್ದೇಶಿಸಲಾಗಿದೆ. ಪಂಜಾಬ್ ನ್ಯಾಶನಲ್ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಮತ್ತು ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಬ್ಯಾಂಕ್‌ಗಳ ವಿಲೀನ ಈ ಪೈಕಿ ಅತಿ ದೊಡ್ಡದು. ಈ ಸುತ್ತಿನ ವಿಲೀನದಲ್ಲಿ ಕರ್ನಾಟಕದ ಮೂರು ಪ್ರಮುಖ ಬ್ಯಾಂಕ್‌ಗಳು ಒಳಗೊಂಡಿವೆ. ಈ ಪೈಕಿ ಕೆನರಾ ಬ್ಯಾಂಕ್‌ನೊಂದಿಗೆ ಸಿಂಡಿ ಕೇಟ್ ಬ್ಯಾಂಕ್ ವಿಲೀನವಾಗಲಿದೆ. ಕಾರ್ಪೋರೇಶನ್ ಬ್ಯಾಂಕ್, ಆಂಧ್ರ ಬ್ಯಾಂಕ್‌ಗಳುಯೂನಿಯನ್ ಬ್ಯಾಂಕ್ ಜತೆ ವಿಲೀನವಾಗಲಿದೆ.
ಕಳೆದ ಎಪ್ರಿಲ್‌ನಲ್ಲಷ್ಟೇ ಕರಾವಳಿ ಮೂಲದ ವಿಜಯ ಬ್ಯಾಂಕ್ ಅನ್ನು ಗುಜರಾತಿನ ಬ್ಯಾಂಕ್ ಆಫ್ ಬರೋಡದ ಜತೆಗೆ ವಿಲೀನಗೊಳಿಸಲಾಗಿತ್ತು. ದೇನಾ ಬ್ಯಾಂಕ್ ಕೂಡ ಇದರ ಜತೆ ಸೇರಿಕೊಂಡಿತ್ತು. ರಾಜ್ಯದಲ್ಲಿ ಕರಾವಳಿಯೊಂದೇ ನಾಲ್ಕು ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ದೇಶಕ್ಕೆ ನೀಡಿದ್ದು, ಈ ನಾಲ್ಕೂ ಬ್ಯಾಂಕ್‌ಗಳ ಆರ್ಥಿಕ ಆರೋಗ್ಯವೂ ಸುಸ್ಥಿರವಾಗಿಯೇ ಇದೆ. ಕರಾವಳಿ ಕರ್ನಾಟಕ ಬ್ಯಾಂಕ್‌ಗಳ ಮೂಲಕ ದೇಶದಲ್ಲಿ ತನ್ನ ಅಸ್ಮಿತೆಯನ್ನು ತೋರಿಸುತ್ತಿದೆ. ಹೀಗೆ ಉತ್ತಮ ಸ್ಥಿತಿಯಲ್ಲಿರುವ ಬ್ಯಾಂಕ್‌ಗಳನ್ನು ಬೇರೊಂದು ಬ್ಯಾಂಕಿನ ಜತೆಗೆ ವಿಲೀನಗೊಳಿಸುವಾಗ ಆ ಭಾಗದ ಜನರ ಭಾವನೆಗೂ ಸಾಕಷ್ಟು ನೋವಾಗುತ್ತದೆ. ವಿಜಯ ಬ್ಯಾಂಕ್ ವಿಲೀನಕ್ಕೆ ಭಾರೀ ಪ್ರತಿರೋಧ ವ್ಯಕ್ತವಾಗಿದ್ದರೂ ಅದನ್ನು ಲೆಕ್ಕಿಸದೆ ವಿಲೀನ ಪ್ರಕ್ರಿಯೆಯನ್ನು ಮುಂದುವರಿಸಲಾಗಿತ್ತು ಹಾಗೂ ಎಪ್ರಿಲ್‌ನಿಂದ ಅದು ಬ್ಯಾಂಕ್ ಆಫ್ ಬರೋಡದ ಜತೆಗೆ ಗುರುತಿಸಿಕೊಂಡಿದೆ.
ಈಗ ಸಿಂಡಿಕೇಟ್, ಕೆನರಾ ಮತ್ತು ಕಾರ್ಪೋರೇಶನ್ ಬ್ಯಾಂಕ್‌ಗಳು ವಿಲೀನದ ಸುಳಿಗೆ ಸಿಲುಕಿವೆ. ಸರಕಾರಕ್ಕೆ ಈ ವಿಲೀನ ನಿರ್ಧಾರವನ್ನು ಸಮರ್ಥಿಸಲು ಅನೇಕ ಕಾರಣಗಳಿರಬಹುದು. ಆದರೆ ನಮ್ಮದೇ ಬ್ಯಾಂಕ್ ಎಂಬ ಭಾವನಾತ್ಮಕ ನಂಟು ಹೊಂದಿರುವ ಜನರಿಗೆ ಆಗುವ ನೋವು ಆಡಳಿತ ನಡೆಸುವವರಿಗೆ ಅರ್ಥವಾಗುವುದಿಲ್ಲ. ಈ ಸುತ್ತಿನ ವಿಲೀನದೊಂದಿಗೆ ಕರ್ನಾಟಕದ ಮೂರು ಪ್ರಮುಖ ಬ್ಯಾಂಕ್‌ಗಳು ಅಸ್ತಿತ್ವ ಕಳೆದುಕೊಂಡಂತಾಗುವುದು. ಸಿಂಡಿಕೇಟ್ ಮತ್ತು ಕೆನರಾ ಬ್ಯಾಂಕ್ ವಿಲೀನ ಪ್ರಕ್ರಿಯೆಯಲ್ಲಿ ಒಂದು ಬ್ಯಾಂಕಿನ ಹೆಸರು ಉಳಿಯುವ ಸಾಧ್ಯತೆಯಿದೆ. ಸಾಮಾನ್ಯವಾಗಿ ದೊಡ್ಡ ಬ್ಯಾಂಕಿನ ಹೆಸರು ಉಳಿಸಿಕೊಳ್ಳುವುದು ರೂಢಿ. ಈ ವಿಲೀನದ ಬಳಿಕ ಇದು ದೇಶದ ನಾಲ್ಕನೇ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಂದು ಗುರುತಿಸಲ್ಪಡಲಿದ್ದು ಒಟ್ಟು ವ್ಯವಹಾರ 15.20 ಲಕ್ಷ ಕೋ.ರೂ.ಗೇರಲಿದೆ.
ವಸೂಲಾಗದ ಸಾಲದ ಮೊತ್ತ ಕಳವಳಕಾರಿಯಾಗಿ ಹೆಚ್ಚಿರುವುದರಿಂದ ಬ್ಯಾಂಕಿಂಗ್ ವಲಯ ಪ್ರಸ್ತುತ ಭಾರೀ ಸಂಕಟ ಎದುರಿಸುತ್ತಿದೆ. ಆರ್ಥಿಕ ಹಿಂಜರಿತವೂ ಬ್ಯಾಂಕುಗಳ ಹಣಕಾಸು ಆರೋಗ್ಯವನ್ನು ಹದಗೆಡಿಸುತ್ತಿವೆ.ಬ್ಯಾಂಕ್‌ಗಳ ಗಾತ್ರವನ್ನು ಹಿರಿದಾಗಿಸುವ ಮೂಲಕ ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿ ಜಾಗತಿಕ ಬ್ಯಾಂಕ್‌ಗಳಿಗೆ ಸರಿಸಾಟಿಯಾಗುವಂತೆ ಮಾಡುವುದು ವಿಲೀನದ ಉದ್ದೇಶ ಎಂದು ಸರಕಾರ ಹೇಳುತ್ತಿದ್ದರೂ ಅನುತ್ಪಾದಕ ಸಾಲದ ಸುಳಿಯಿಂದ ಬ್ಯಾಂಕ್‌ಗಳನ್ನು ಪಾರು ಮಾಡುವ ಸಾಹಸ ಇದು ಎನ್ನುವುದು ನಿಜವಾದ ಕಾರಣ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ದೊಡ್ಡದೆಲ್ಲ ಶ್ರೇಷ್ಠವೂ ಅಲ್ಲ, ಸದೃಢವೂ ಅಲ್ಲ ಎನ್ನುವುದು ವಿಲೀನವನ್ನು ವಿರೋಧಿಸುತ್ತಿರುವ ತಜ್ಞರ ತರ್ಕ.
ಸ್ಟೇಟ್ ಬ್ಯಾಂಕಿನ ಜತೆಗೆ ಅದರ ಐದು ಉಪ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ ದೇಶದ ಅತಿ ದೊಡ್ಡ ಬ್ಯಾಂಕ್ ಮಾಡಲಾಗಿದ್ದರೂ ಅದರ ಸತ್ಪರಿಣಾಮಗಳು ಇನ್ನೂ ಗೋಚರಕ್ಕೆ ಬಂದಿಲ್ಲ. ಆದೇ ರೀತಿ ವಿಜಯ ಬ್ಯಾಂಕ್ ವಿಲೀನದಿಂದ ಆಗಿರುವ ಲಾಭವೇನು ಎನ್ನುವುದು ಕೂಡಾ ಅನುಭವಕ್ಕೆ ಬಂದಿಲ್ಲ. ಆರಂಭದ ಎರಡು ವಿಲೀನಗಳ ಸಾಧಕಬಾಧಕಗಳನ್ನು ನೋಡಿಕೊಂಡು ಮುಂದಿನ ಸುತ್ತಿನ ವಿಲೀನ ಪ್ರಕ್ರಿಯೆಯನ್ನು ಪ್ರಾರಂಭಿಸುವುದು ಆರ್ಥಿಕ ಸ್ಥಿತಿ ಕಂಗಾಲಾಗಿರುವ ಈ ಸಂದರ್ಭದಲ್ಲಿ ವಿಹಿತವಾಗುತ್ತಿತ್ತು.
ಸ್ವಾತಂತ್ರಾéನಂತರ 39 ಬ್ಯಾಂಕ್ ವಿಲೀನಗಳು ನಡೆದಿದ್ದು, ಅವುಗಳಿಂದ ಆರ್ಥಿಕತೆಯ ಮೇಲಾಗಿರುವ ಪರಿಣಾಮಗಳೇನು ಎನ್ನುವುದನ್ನು ಅಧ್ಯಯನ ನಡೆಸಲು ಇದು ಸಕಾಲ. ಸರ್ವರಿಗೂ ಬ್ಯಾಂಕ್ ಸೌಲಭ್ಯ ಸಿಗಬೇಕು ಎನ್ನುವುದು ಸರಕಾರದ ಆಶಯ.ಬ್ಯಾಂಕ್ ಸೇವೆಯ ವ್ಯಾಪ್ತಿಗೆ ಒಳಪಡದೇ ಇದ್ದ ಗ್ರಾಮೀಣ ಭಾಗದವರನ್ನು ಸೇವಾವ್ಯಾಪ್ತಿಗೆ ತರುವ ಉದ್ದೇಶದಿಂದಲೇ ಜನಧನ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಆದರೆ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ವಿಲೀನಗೊಳಿಸುತ್ತಿರುವ ಪ್ರಸ್ತುತ ನಡೆ ಜನರನ್ನು ಬ್ಯಾಂಕಿನಿಂದ ದೂರ ಮಾಡದಂತೆ ನೋಡಿಕೊಳ್ಳಬೇಕಿದೆ. ದೊಡ್ಡ ಬ್ಯಾಂಕ್‌ಗಳಿಂದ ಕಾರ್ಪೋರೇಟ್ ಕುಳಗಳಿಗೆ ಮಾತ್ರ ಪ್ರಯೋಜನವಾದರೆ ಬ್ಯಾಂಕ್ ರಾಷ್ಟ್ರೀಕರಣದ ಉದ್ದೇಶವೇ ವಿಫಲವಾಗಬಹುದು.